ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜ್ಪೆಗೆ ಲಗ್ಗೆ ಇಟ್ಟ ಇಂಡೋ-ಅಮೆರಿಕನ್ ‘ಇಂಡಾಮ್’ ಭತ್ತ

ಅಧಿಕ ಇಳುವರಿಗೆ ಆಶಾದಾಯಕ : ಕೃಷಿಕ ಚಿತ್ತಣ್ಣರ ಅಭಿಮತ
Last Updated 6 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬಜ್ಪೆ: ಭತ್ತದ ಕೃಷಿಯಲ್ಲಿ ‘ಇಂಡಾಮ್-400004’(ಕಜೆ) ಹೊಸದಾಗಿ ಆವಿಷ್ಕಾರಗೊಂಡ ತಳಿ. ಫಲ್ಗುಣಿ ನದಿ ಹರಿಯುವ ಮೂಡುಶೆಡ್ಡೆಯ ಪ್ರಕೃತಿ ಮಡಿಲಲ್ಲಿ ಈ ತಳಿಯ ಬೇಸಾಯದ ಸೊಬಗು ಕಾಣಬಹುದು.

ಸುಮಾರು ಐದು ಎಕ್ರೆ ಹೊಲದಲ್ಲಿ ಬೆಳೆಯಲಾದ ಇಂಡಾಮ್ ಮತ್ತು ಬಿಳಿ ಜಯ, ಭದ್ರ ಗಿಡ್ಡ(ಕಜೆ) ಭತ್ತದ ತೆನೆ ನಳನಳಿಸುತ್ತಿದ್ದು, ನೋಡುಗರಿಗೆ ಬಂಗಾರದ ತೆನೆಯಂತೆ(ಬಂಗಾರ್ದ ಕುರಲ್) ಕಂಡು ಬಂದರೆ ಅಚ್ಚರಿಪಡಬೇಕಾಗಿಲ್ಲ.

ಭತ್ತ, ಕಂಗು ಮತ್ತು ತೆಂಗಿನ ತೋಟಗಾರಿಕೆ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಮೂಡುಶೆಡ್ಡೆಯ ಪ್ರಗತಿಪರ ಕೃಷಿಕ ರಮಾನಾಥ ಅತ್ತರ್ ಯಾನೆ ಚಿತ್ತಣ್ಣರ ಗದ್ದೆಗಳಲ್ಲಿ ಹೊಸ ತಳಿಯ ಹಸಿರು ಮೈದಾಳಿದ್ದು, ಬೀಸುವ ಗಾಳಿಗೆ ತೆನೆಗಳು ಬಾಗಿ ಬಳುಕುತ್ತಿವೆ. ಒಟ್ಟು ಐದು ಎಕ್ರೆ ಹೊಲದಲ್ಲಿ ಒಂದು ಎಕ್ರೆಯಲ್ಲಿ ಇಂಡಾಮ್ ಭತ್ತದ ತಳಿ ಹಾಗೂ ಉಳಿದ ನಾಲ್ಕು ಎಕ್ರೆ ಗದ್ದೆಯಲ್ಲಿ ಬಿಳಿ ಜಯ ಮತ್ತು ಭದ್ರ ಗಿಡ್ಡ(ಕಜೆ) ಬೆಳೆದಿದ್ದಾರೆ.

ಈ ಭಾಗದ ಭತ್ತದ ಕೃಷಿಯಲ್ಲಿ ಇಂಡಾಮ್ ತಳಿ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿದೆ. ಈಗಾಗಲೇ ಈ ತಳಿಯತ್ತ ಆಕರ್ಷಿತರಾಗಿದ್ದಾರೆ. ಇಂಡೋ-ಅಮೇರಿಕನ್ ಸಂಸ್ಥೆಗಳಿಂದ ಆವಿಷ್ಕಾರಗೊಂಡ ಇದು ಕುಲಾಂತರಿ ಭತ್ತದ ತಳಿ. ಇದರ ಹೆಣ್ಣು ತಳಿಗಳ ಆಯ್ದು ರೈತರಿಗೆ ನೀಡಲಾಗುತ್ತದೆ.

15-20 ದಿನಗಳಲ್ಲಿ ಇಂಡಾಮ್ ನೇಜಿ ನಾಟಿಗೆ ಸಿದ್ಧವಾಗುತ್ತದೆ. ಎರಡಕ್ಕಿಂತ ಹೆಚ್ಚು ಸಸಿ(ನೇಜಿ) ನೆಡಬಾರದು. ಇದು ಬೆಳೆಯುತ್ತಲೇ ಒಂದೊಂದು ಸಸಿಯಲ್ಲಿ ಸುಮಾರು 20ರಷ್ಟು ಸಸಿಗಳು(ಮೊಳಕೆ) ಹುಟ್ಟಿಕೊಂಡು, ಭತ್ತದ ಗಿಡದ ತುಂಬೆಲ್ಲ ತೆನೆ(ಕುರಲ್) ಬಿಡುತ್ತದೆ.

‘ಒಂದು ಎಕ್ರೆ ಜಾಗಕ್ಕೆ ಕೇವಲ ಆರು ಕೇಜಿ ಇಂಡಾಮ್ ಬೀಜ ಸಾಕಾಗುತ್ತದೆ. ಇತರ ಭತ್ತದ ಬೀಜವಾದರೆ ಎಕ್ರೆಗೆ 20 ಕೇಜಿ ಅಗತ್ಯವಿದೆ. ಈ ತಳಿಗೆ ರೋಗಬಾಧೆ ಕಡಿಮೆ. ಅಗತ್ಯಕ್ಕೆ ಬೇಕಾದಷ್ಟು ನೀರಿನಾಶ್ರಯದಲ್ಲಿ ಬೆಳೆಯುವ ಇದಕ್ಕೆ ಕೀಟಬಾಧೆ ತಟ್ಟದು. ಆದ್ದರಿಂದ ರಸಗೊಬ್ಬರದ ಅಗತ್ಯವಿಲ್ಲ.

ಸುಮಾರು ಎರಡೂವರೆಯಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಭತ್ತದ ಗಿಡ, ಇತರ ಭತ್ತದ ಬೆಳೆಯಂತೆ ಗಾಳಿಗೆ ಬಾಗದೆ, ನೇರವಾಗಿ ನಿಂತುಕೊಳ್ಳುತ್ತದೆ. ಮೂರುವರೆ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಕಳೆದ ವರ್ಷ ಕ್ವಿಂಟಾಲ್ ಒಂದು ಇಂಡಾಮ್ ಭತ್ತಕ್ಕೆ ಕೃಷಿ ಮಾರುಕಟ್ಟೆಯಲ್ಲಿ 1,600-1,700 ರೂ ಬೆಲೆ ಬಂದಿತ್ತು. ಈ ವರ್ಷ 1,500 ರೂ ದಾಟಬಹುದು’ಎಂದು ಚಿತ್ತಣ್ಣ ಹೇಳುತ್ತಾರೆ.

‘ಎಣೆಲ್ ಸಾಗುವಳಿಯಲ್ಲಿ ಬೆಳೆಯಲಾಗುವ ಭದ್ರ ಅಥವಾ ಇತರ ತಳಿಯ ಭತ್ತದ ಬೈಹುಲ್ಲಿಗಿಂತ ಇಂಡಾಮ್ ಬೈಹುಲ್ಲಿಗೆ ಬೆಲೆ/ಬೇಡಿಕೆ ಹೆಚ್ಚಿದೆ. ಇಲ್ಲಿ ಹಂದಿ ಮತ್ತು ನವಿಲಿನ ಕಾಟವಿದ್ದು, ಬೆಳೆ ಕಾಯಬೇಕಾಗತ್ತದೆ. ಈ ಬಾರಿ ಸೂರಿಂಜೆಯಲ್ಲಿ ಇಂಡಾಮ್ ನಾಟಿ ನಡೆದಿದೆ. ತೋಟಗಾರಿಕೆ ಇಲಾಖೆಯೊಂದಿಗೆ ಸಂಬಂಧ ಹೊಂದಿರುವ ಆಗ್ರೋ ಚೇತನ್ ಟ್ರೇಡರ್ಸ್‍ನವರು ಈ ಬಾರಿ ನನಗೆ ಆರು ಕಿಲೋ ಇಂಡಾಮ್ ಬೀಜ ಉಚಿತವಾಗಿ ಕೊಟ್ಟಿದ್ದಾರೆ. ಮುಂದಿನ ಬೇಸಾಯಕ್ಕೆ ಇದರ ಬೀಜ ತೆಗೆದಿಡುವಂತಿಲ್ಲ. ಯಾಕೆಂದರೆ ಇದು ಕುಲಾಂತರಿ ತಳಿ. ಮುಂದಿನ ವರ್ಷ ಇದರ ನಾಟಿ ಮಾಡುವುದಾದರೆ ಪ್ರತ್ಯೇಕವಾಗಿ ಬೀಜ ಖರೀದಿ ಮಾಡಬೇಕಾಗುತ್ತದೆ. ಯಾವುದೇ ರೈತನಿಗೆ ಗಳಿಕೆ ತಂದು ಕೊಡಬಹುದಾದ ಭತ್ತದ ತಳಿ ಇದಾಗಿದೆ’ಎಂದವರು ಹೊಸ ತಳಿಯ ಭತ್ತದ ಬೇಸಾಯ ಅನುಭವ ವಿವರಿಸಿದರು.

ಮಳೆಗಾಲದಲ್ಲಿ ಈ ಗದ್ದೆಗಳಲ್ಲಿ ಕೂಲಿ ಮಹಿಳೆಯರೊಂದಿಗೆ ಮೂಡುಶೆಡ್ಡೆಯ ಶುಭೋದಯ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ನಾಟಿ ಮಾಡಿರುವ ಸಂದರ್ಭ ನೆನಪಿಸಿಕೊಳ್ಳುವ ಚಿತ್ತಣ್ಣ, ‘ಯುವ ಜನಾಂಗ ಭತ್ತದ ಕೃಷಿ ಬಗ್ಗೆ ಆಸಕ್ತಿ ತೋರಿಸಿದರೆ ಮಾತ್ರ ನಾವು ಬೆಳೆದ ಭತ್ತದಿಂದ ತಾಜಾ ಅಕ್ಕಿ ಪಡೆಯಬಹುದು. ಇಲ್ಲವಾದರೆ, ಭವಿಷ್ಯದಲ್ಲಿ ನಾವು ಕಲಬೆರಕೆ ಅಕ್ಕಿಯನ್ನೇ ಉಣ್ಣಬೇಕಾಗುತ್ತದೆ’ ಎನ್ನುತ್ತಾರೆ.

‘ಇಂಡಾಮ್ ಭತ್ತದ ತಳಿ ಬಗ್ಗೆ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಹತ್ವದ ಕೆಲವು ಪ್ರಯೋಗ(ಟ್ರಯಲ್) ನಡೆಸಿದ್ದೇವೆ. ಕಳೆದ ವರ್ಷದಿಂದ ರೈತರಿಗೆ ಈ ತಳಿ ಉಚಿತವಾಗಿ ನೀಡುತ್ತಿದ್ದೇವೆ. ಇದೊಂದು ಅತ್ಯುತ್ತಮ ತಳಿಯಾಗಿದ್ದು, ಒಂದು ಎಕ್ರೆ ಹೊಲದಲ್ಲಿ ಸರಾಸರಿ 25-30 ಕ್ವಿಂಟಾಲ್ ಭತ್ತ ಬೆಳೆಯಬಹುದು. ಹಿಂದಿನ ವರ್ಷ ಕುಂದಾಪುರದ ರೈತರೊಬ್ಬರ ಒಂದು ಎಕ್ರೆ ಹೊಲದಲ್ಲಿ 38 ಕ್ವಿಂಟಾಲ್ ಭತ್ತ ಬೆಳೆಯಲಾಗಿದ್ದರೆ, ಪಡು ನೀರುಮಾರ್ಗದ ರೈತ ಯೋಗೀಶ್‍ರ ಹೊಲದಲ್ಲಿ 32 ಕ್ವಿಂಟಾಲ್ ಭತ್ತ ಲಭ್ಯವಾಗಿತ್ತು. ಇದು ಇಂಡೋ-ಅಮೆರಿಕನ್ ತಳಿಯಾಗಿದ್ದು, ಉತ್ತಮ ಇಳುವರಿಗಾಗಿ ಆಯ್ದ ಹೆಣ್ಣು ಬೀಜವನ್ನೇ ಸಂಗ್ರಹಿಸಿ ರೈತರಿಗೆ ಒದಗಿಸುತ್ತಿದ್ದೇವೆ. ಯಾಕೆಂದರೆ ಇದು ವರ್ಗದ ಕುಲಾಂತರಿ ತಳಿಯಾಗಿದೆ. ಇದರ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಕೃಷಿ ಇಲಾಖೆಯ ಎಡಿಎ ವೀಣಾ, ಸುರತ್ಕಲ್ ಕೃಷಿ ವಿಭಾಗದ ಎಇಒ ಬಶೀರ್ ಅವರು ಇಂಡಾಮ್ ತಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ಎಂಬುದು ಚೇತನ್ ಆಗ್ರೋ ಟ್ರೇಡರ್ಸ್‍ನ ಅಧಿಕಾರಿ ಪಿ ಬಿ ಬಂಗೇರರ ಅಭಿಪ್ರಾಯವಾಗಿದೆ.

ಕಳೆದ ವರ್ಷ ನೀರುಮಾರ್ಗದ ಯೋಗೀಶ್ ಆಚಾರ್ಯ ಹಾಗೂ ಇತರ ಕೆಲವೆಡೆ ಇದರ ಪ್ರತ್ಯಕ್ಷಿಕೆ ನಡೆದಿತ್ತು. ಆಗ ಇಲಾಖೆಯ ಅಧಿಕಾರಿಗಳು ಈ ಸಂಸ್ಥೆಗೆ ಸಹಕಾರಿ ನೀಡಿತ್ತು. ಮುಂದಿನ ವರ್ಷದಿಂದ ಈ ತಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಂದ ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಇದೆ. ಒಂದರ್ಥದಲ್ಲಿ ಕೂಲಿಯಾಳುಗಳ ಅಭಾವ, ಯಥೇಚ್ಛ ರಸಗೊಬ್ಬರ ಮತ್ತು ನೀರಿನ ಬಳಕೆಯಿಂದ ಬಚಾವಾಗುವ ನೆಲೆಯಲ್ಲಿ `ಇಂಡಾಮ್-400004' ಭತ್ತದ ತಳಿ ರೈತರಿಗೆ ಆಶಾಕಿರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT