ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಉತ್ಪಾದನೆ– ಅವಕಾಶ ಬಾಚಿಕೊಳ್ಳಿ: ವಿಶಾಲ್‌ ಹೆಗ್ಡೆ ಸಲಹೆ

ಎಂಎಸ್‌ಎಂಇ ಸಮ್ಮೇಳನ 2022–ಉದ್ಯಮಿಗಳಿಗೆ ವಿಶಾಲ್‌ ಹೆಗ್ಡೆ ಸಲಹೆ
Last Updated 24 ಸೆಪ್ಟೆಂಬರ್ 2022, 12:33 IST
ಅಕ್ಷರ ಗಾತ್ರ

ಮಂಗಳೂರು: 'ಜಗತ್ತಿನಲ್ಲಾದ ಇತ್ತೀಚಿನ ಭೌಗೋಳಿಕ-ರಾಜಕಿಯ ಬೆಳವಣಿಗೆಗಳಿಂದಾಗಿ ಮುಂದುವರಿದ ರಾಷ್ಟ್ರಗಳು ತಮ್ಮ ಕೈಗಾರಿಕಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾವುದೇ ಒಂದು ದೇಶವನ್ನು ನೆಚ್ಚಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದು ಕೈಗಾರಿಕಾ ಉತ್ಪಾದನೆ ಕ್ಷೇತ್ರದಲ್ಲಿ ನಮ್ಮ ದೇಶದ ಪಾಲಿಗೆ ಅವಕಾಶಗಳ ಬಾಗಿಲನ್ನು ತೆರೆದಿದ್ದು, ಇದನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳಲು ಉದ್ಯಮಿಗಳು ಸಜ್ಜಾಗಬೇಕು’ ಎಂದು ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯದ ಸಹಕುಲಪತಿ ವಿಶಾಲ್‌ ಹೆಗ್ಡೆ ಸಲಹೆ ನೀಡಿದರು.

ಎಐಸಿ ನಿಟ್ಟೆ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಬ್ಯಾಂಕ್‌ ಸಹಯೋಗದಲ್ಲಿ ಇಲ್ಲಿ ಶನಿವಾರ ಏರ್ಪಡಿಸಿದ್ದ ಎಂಎಸ್‌ಎಂಇ 2022 ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಕಾನೂನು ಕಟ್ಟಳೆಗಳ ಮೇಲೆ ಮುಂದುವರಿದ ರಾಷ್ಟ್ರಗಳಿಗೆ ಹೆಚ್ಚಿನ ನಂಬಿಕೆ ಇದೆ. ಹಾಗಾಗಿಯೇ ಜಗತ್ತು ಭಾರತದತ್ತ ಮುಖಮಾಡುತ್ತಿವೆ’ ಎಂದು ಹೆಗ್ಡೆ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾಂಕಿನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಬಾಲಚಂದ್ರ ವೈ.ವಿ, ‘ಮುಂದಿನ ದಶಕ ಮಾತ್ರವಲ್ಲ, ಮುಂದಿನ ಶತಮಾನವೇ ಭಾರತದ್ದು. ದಶಕದ ಹಿಂದೆ ಪದವೀಧರರು ಕೆಲಸಕ್ಕಾಗಿ ಹುಡುಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಹೆಚ್ಚು ಹೆಚ್ಚು ಯುವಜನರು ಉದ್ಯಮಿಗಳಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಉದ್ಯಮಕ್ಕೆ ಸಾಲ ಪಡೆಯುವ ಅವಕಾಶಗಳೂ ಹೆಚ್ಚಾಗಿವೆ. ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ, ಸಾಲ ಮರುಪಾತಿಗೆ ಸಂಬಂಧಿಸಿದ ಹಿನ್ನೆಲೆ ಪರಿಶೀಲನೆಯೂ ಈಗ ಸುಲಭ. ಸೋತರೂ ಛಲಬಿಡದ, ಅದಮ್ಯ ಉತ್ಸಾಹವಿರುವ ಉದಯೋನ್ಮುಖ ಉದ್ಯಮಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳೂ ತುದಿಗಾಲಲ್ಲಿ ನಿಂತಿವೆ’ ಎಂದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಮಂಡಳಿ ಅಧ್ಯಕ್ಷ ಕೆ.ಉಲ್ಲಾಸ ಕಾಮತ್‌, ‘ಭಾರತದಲ್ಲಿ ಭಾರಿ ಬದಲಾವಣೆಯ ಪರ್ವ ಆರಂಭವಾಗಿದೆ. ಈ ಬದಲಾವಣೆಗಳನ್ನು ಗುರುತಿಸಿಕೊಂಡು ಅದರ ಜೊತೆ ಹೆಜ್ಜೆ ಹಾಕದಿದ್ದರೆ ನಾವು ಹಿಂದುಳಿಯುತ್ತೇವೆ’ ಎಂದು ಎಚ್ಚರಿಸಿದರು.

‘ಕರಾವಳಿ ಕರ್ನಾಟಕವನ್ನು ದೇಶದ ಉದ್ಯಮ ಕ್ಷೇತ್ರದ ರಾಜಧಾನಿಯನ್ನಾಗಿ ರೂಪಿಸಲು ಅಗತ್ಯವಿರುವ ಪ್ರತಿಭೆ ಹಾಗೂ ಸಂಪನ್ಮೂಲಗಳೆಲ್ಲವೂ ಇಲ್ಲಿವೆ. ಇಲ್ಲಿಂದ ಹೊರಗಡೆ ಹೋಗಿ ಯಶಸ್ಸು ಕಂಡಿರುವ ಅನೇಕ ಉದ್ಯಮಿಗಳ ಸಾಹಸಗಾಥೆಗಳು ನಮ್ಮ ಕಣ್ಮುಂದಿವೆ. ಜಗತ್ತಿನ ಯಾವುದೇ ಮೂಲೆಯಿಂದಲೂ ಉದ್ಯಮವನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂಬ ಪಾಠವನ್ನು ಕೋವಿಡ್‌ ಕಾಲದಲ್ಲಿ ಕಲಿತಿದ್ದೇವೆ. ಇಲ್ಲಿಂದ ಉದ್ಯೋಗಕ್ಕಗಿ ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲು ಅವಕಾಶ ನೀಡಬಾರದು. ಸಾಧ್ಯವಾದಷ್ಟು ಇಲ್ಲೇ ಉದ್ಯಮ ಸ್ಥಾಪಿಸಲು ಪ್ರಯತ್ನಪಡಬೇಕು’ ಎಂದು ಕಿವಿಮಾತು ಹೇಳಿದರು.

ಲೆಕ್ಕಪರಿಶೋಧಕ ಎಸ್‌.ಎಸ್‌.ನಾಯಕ್‌, ಎಐಸಿ ನಿಟ್ಟೆ ಉತ್ತೇಜನಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಪಿ.ಆಚಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT