ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆ ಸ್ಥಾಪನೆಗೆ 50 ಸಾವಿರ ಎಕರೆ ಭೂಮಿ: ಮುರುಗೇಶ್ ನಿರಾಣಿ

‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದಲ್ಲಿ ಕೈಗಾರಿಕಾ ಸಚಿವ
Last Updated 12 ಮೇ 2022, 12:14 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ 50 ಸಾವಿರ ಎಕರೆ ಭೂಮಿಯನ್ನು ನಿಗದಿಪಡಿಸಲು ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಕೈಗಾರಿಕಾ ಇಲಾಖೆ ವತಿಯಿಂದ ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ನಗರ ಹಾಗೂ ಹೊರ ಜಿಲ್ಲೆಗಳಲ್ಲೂ ಲ್ಯಾಂಡ್ ಬ್ಯಾಂಕ್ ಯೋಜನೆಗೆ ಲಭ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

ಪ್ರತಿ 100 ಕಿ.ಮೀ.ಗೆ ಒಂದು ವಿಮಾನ ನಿಲ್ದಾಣ ಇರಬೇಕು. ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಂಟು ನಿಲ್ದಾಣಗಳು ಪ್ರಗತಿಯಲ್ಲಿದ್ದು, ಇನ್ನು ಐದು ಹೊಸ ನಿಲ್ದಾಣ ಮಾಡಲಾಗುವುದು. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರಾಜ್ಯ ಹೆದ್ದಾರಿ ಉನ್ನತೀಕರಣ, ಬಂದರು ಅಭಿವೃದ್ಧಿ ಹೀಗೆ ಕೈಗಾರಿಕೆ ಬೆಳವಣಿಗೆಗೆ ಪೂರಕವಾದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕರಾವಳಿಯಲ್ಲಿ ಕೈಗಾರಿಕೆ ಅಭಿವೃದ್ಧಿ ಮತ್ತು ಉದ್ದಿಮೆ ಆರಂಭಿಸಲು ವಿಪುಲ ಅವಕಾಶವಿದೆ ಎಂದು ಹೇಳಿದರು.

ಉದ್ಯಮ ಮಾಡುವವರು ಹೆಸರು ನೋಂದಣಿ ಮಾಡಿಸಿದರೆ, ಇಲಾಖೆಯಿಂದ ಅವರಿಗೆ ಒಂದು ವಾರದಿಂದ 30 ದಿನಗಳವರೆಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಮಾರುಕಟ್ಟೆ, ಸಾಲದ ವ್ಯವಸ್ಥೆಯ ಬಗ್ಗೆ ಸಹಕಾರ, ಮಾರ್ಗದರ್ಶನ ನೀಡಲಾಗುತ್ತದೆ. ಪರಿಶಿಷ್ಟರಿಗೆ 2 ಎಕರೆವರೆಗೆ ಭೂಮಿ ಖರೀದಿಗೆ ಶೇ 75ರಷ್ಟು ಸಹಾಯಧನ ನೀಡಲಾಗುತ್ತದೆ ಎಂದು ನಿರಾಣಿ ತಿಳಿಸಿದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಕೆಐಡಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್. ಶಿವಶಂಕರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕಿ ಆರ್. ವಿನೋತ್‌ಪ್ರಿಯಾ, ಅಧಿಕಾರಿ ಸತ್ಯಭಾಮಾ ಇದ್ದರು. ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಸ್ವಾಗತಿಸಿದರು. ಧನಂಜಯ ನಿರೂಪಿಸಿದರು.

ತಾಂತ್ರಿಕ ಗೋಷ್ಠಿಯಲ್ಲಿ ಧಾರವಾಡದ ಮಹೇಶ್ ಮಾಸಳ್, ಸಿಎಫ್‌ಟಿಆರ್‌ಐ ವಿಜ್ಞಾನಿ ಐಬೊಯಮಾ ಸಿಂಗ್, ಬೀಚ್ ಟೂರಿಸಂ ಪ್ರಾಜೆಕ್ಟ್‌ನ ಮಾಜಿ ಸಿಇಒ ಯತೀಶ್ ಬೈಕಂಪಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 4,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT