ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದಿಂದ ಆಂತರಿಕ ಸಶಕ್ತಿ

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Last Updated 16 ಜೂನ್ 2019, 13:45 IST
ಅಕ್ಷರ ಗಾತ್ರ

ಮಂಗಳೂರು: ಆಧ್ಯಾತ್ಮದಿಂದ ಆಂತರಿಕ ಸಶಕ್ತೀಕರಣ ಸಾಧ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಂಗಳೂರಿನ ಸಂಚಾಲಕಿ ವಿಶ್ವೇಶ್ವರಿ ಹೇಳಿದರು.

ನಗರದಲ್ಲಿರುವ ವಿಶ್ವವಿದ್ಯಾಲಯದ ವಿಶ್ವ ಶಾಂತಿ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ‘ಅಧ್ಯಯನದಿಂದ ಆಂತರಿಕ ಸಶಕ್ತೀಕರಣ’ ಕುರಿತ ಕಾರ್ಯಾಗಾರದಲ್ಲಿ ಅವರು ಸಂದೇಶ ನೀಡಿದರು.

‘ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು’ ಎಂದರು.

‘ಅಧ್ಯಯನದಿಂದ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಅದಕ್ಕೆ ಬೇಕಾದ ಏಕಾಗ್ರತೆಯನ್ನು ಅಧ್ಯಾತ್ಮ ನೀಡುತ್ತದೆ. ಅಧ್ಯಾತ್ಮವು ಮೊಬೈಲ್ ಚಾರ್ಜ್ ಮಾಡಿದಂತೆ. ‘ಚಾರ್ಜ್‌’ ಕಾಣುವುದಿಲ್ಲ. ಆದರೆ, ಅದರಿಂದ ಎಲ್ಲವೂ ಸಾಧ್ಯವಾಗುತ್ತದೆ’ ಎಂದರು.

‘ಮಾನಸಿಕ ಶಾಂತಿ ಇಲ್ಲದಿದ್ದರೆ, ಒಂದು ಕೆಲಸಕ್ಕೆ ನಾಲ್ಕು ಪಟ್ಟು ಸಮಯ ವ್ಯರ್ಥವಾಗುತ್ತದೆ. ಶಾಂತಿ ಹೊಂದಿದಾಗ, ಒಂದು ಗಂಟೆಯ ಕೆಲಸವನ್ನು 10 ನಿಮಿಷದಲ್ಲಿ ಪೂರೈಸಬಹುದು. ಇದೇ ಆಂತರಿಕ ಸಶಕ್ತೀಕರಣ’ ಎಂದರು.

ಸಂಸ್ಕೃತ ಭಾರತಿ ಅಧ್ಯಕ್ಷ ಎಂ.ಆರ್. ವಾಸುದೇವ್‌ ಮಾತನಾಡಿ, ಕಷ್ಟ ಬಂದಾಗ, ‘ನಾವು ಯಾರು?’ಎಂಬ ಹುಡುಕಾಟ ಆರಂಭವಾಗುತ್ತದೆ. ಆತ್ಮವು ಪರಮಾತ್ಮನಡೆಗೆ ತುಡಿಯುತ್ತದೆ. ಅದುವೇ ಅಧ್ಯಾತ್ಮದ ಆರಂಭ ಎಂದರು.

‘ವ್ಯಕ್ತಿ ದೈಹಿಕ, ಬೌದ್ಧಿಕ, ಆರ್ಥಿಕವಾಗಿ ಸಶಕ್ತೀಕರಣ ಹೊಂದಲು ಪ್ರಯತ್ನಿಸುತ್ತಾನೆ. ಆದರೆ, ನೈತಿಕತೆ ಇದ್ದರೆ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ಇಲ್ಲವೇ, ಆತನ ನರಿ ಬುದ್ಧಿಯು ಭವಿಷ್ಯದಲ್ಲಿ ಕೆಡುಕನ್ನು ತರುತ್ತದೆ’ ಎಂದರು.

‘ನಮ್ಮ ಮಾತುಗಳಿಗಿಂತ ಕೃತಿಗೆ ಬೆಲೆ ಇರುತ್ತದೆ. ಅದಕ್ಕೆ ನೈತಿಕತೆ, ಏಕಾಗ್ರತೆ, ಬದ್ಧತೆಗಳೆಲ್ಲ ಮುಖ್ಯವಾಗುತ್ತದೆ. ಈ ಗುಣಗಳು ಅಧ್ಯಾತ್ಮದಿಂದ ಬರುತ್ತವೆ’ ಎಂದರು.

ವಿಶ್ವವಿದ್ಯಾಲಯದ ವಿಜಯಾ ಮಾತನಾಡಿ, ‘ಓದುವುದರಿಂದ ಜ್ಞಾನ ಮಾತ್ರವಲ್ಲ, ಮಿದುಳಿನ ನರಗಳಿಗೆ ವಿಶ್ರಾಂತಿ ಪಡೆಯಲೂ ಸಾಧ್ಯ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸಕಾರಾತ್ಮಕ ಓದಿನಿಂದ ಮಾನಸಿಕ ಸ್ಥಿರತೆ ವೃದ್ಧಿಸಿ, ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ. ಮೌಲ್ಯ, ಗುಣ, ನೈತಿಕತೆಯನ್ನು ರೂಢಿಸಿಕೊಳ್ಳಬಹುದು. ಓದಿನಿಂದ ಗಾಂಧಿ, ಲಿಂಕನ್ ಸೇರಿದಂತೆ ಹಲವಾರು ನಾಯಕರು ಸಾಧಕರಾದರು. ಅದಕ್ಕಾಗಿ ಮಕ್ಕಳು ಸಾಧಕರ ಆತ್ಮಚರಿತ್ರೆಗಳನ್ನು ಓದಬೇಕು. ಆಗ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ನಮ್ಮ ಚೇತನ ಅನಿಕೇತನ ಆಗಬೇಕು. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬಬೇಕು. ಕೀಳರಿಮೆ, ಮೇಲು–ಕೀಳು ಭಾವನೆಗಳನ್ನು ಹೊರಹಾಕಬೇಕು. ನಾವೆಲ್ಲ ಮಾನವರಾಗಬೇಕು’ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೆನೆಟ್‌ ಅಮ್ಮಣ್ಣ, ಹಿಂದಿ ಪ್ರಚಾರ ಸಮಿತಿಯ ಚಿದಾನಂದ ದೇವಾಡಿಗ, ವಿಶ್ವವಿದ್ಯಾಲಯದ ಶರಣಮ್ಮ, ಸುಜಾತ್‌ ಬಲ್ಲಾಳ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT