ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಮಿನಿ–ಕ್ಲಾಸೆನ್‌ ಜೊತೆಯಾಟದ ಸೊಬಗು : ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ ಜಯ

Last Updated 21 ಫೆಬ್ರುವರಿ 2018, 20:09 IST
ಅಕ್ಷರ ಗಾತ್ರ

ಸೆಂಚೂರಿಯನ್‌ (ಪಿಟಿಐ): ನಾಯಕ ಜೆ.ಪಿ.ಡುಮಿನಿ (ಔಟಾಗದೆ 64; 40ಎ, 4ಬೌಂ, 3 ಸಿ) ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹೆನ್ರಿಕ್‌ ಕ್ಲಾಸೆನ್‌ (69; 30ಎ, 3ಬೌಂ, 7ಸಿ) ಅವರ ಅಬ್ಬರದ ಮುಂದೆ ಭಾರತದ ಬೌಲರ್‌ಗಳು ತಬ್ಬಿಬ್ಬಾದರು.

ಇವರ ಅಮೋಘ ಜೊತೆಯಾಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 1–1ರಲ್ಲಿ ಸಮಬಲ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು.

ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ ಪಡೆ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 188ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಹರಿಣಗಳ ನಾಡಿನ ತಂಡ 8 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.

ದಕ್ಷಿಣ ಆಫ್ರಿಕಾ ತಂಡ 24ರನ್‌ ಗಳಿಸಿದ್ದ ವೇಳೆ ಸ್ಮಟ್ಸ್‌ ವಿಕೆಟ್‌ ಕಳೆದುಕೊಂಡಿತು. ಆ ನಂತರ ರೀಜಾ ಹೆನ್ರಿಕ್ಸ್‌ (26; 17ಎ, 5ಬೌಂ) ಮಿಂಚಿದರು. ಐದನೇ ಓವರ್‌ನಲ್ಲಿ ಹೆನ್ರಿಕ್ಸ್‌, ಜಯದೇವ್‌ ಉನದ್ಕತ್‌ಗೆ ವಿಕೆಟ್‌ ನೀಡಿದರು. ಆ ನಂತರ ಒಂದಾದ ಡುಮಿನಿ ಮತ್ತು ಕ್ಲಾಸೆನ್‌ ಅಬ್ಬರಿಸಿದರು. ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಈ ಜೋಡಿ ಮೂರನೇ ವಿಕೆಟ್‌ಗೆ 93ರನ್‌ ಸೇರಿಸಿ ಆತಿಥೇಯರ ಗೆಲುವಿನ ಹಾದಿ ಸುಗಮ ಮಾಡಿತು.

ಕೊನೆಯಲ್ಲಿ ಡುಮಿನಿ ಮತ್ತು ಫರ್ಹಾನ್‌ ಬೆಹಾರ್ಡೀನ್‌ (ಔಟಾಗದೆ 16) ಗುಡುಗಿದರು. ಇವರು ಮುರಿಯದ ಐದನೇ ವಿಕೆಟ್‌ಗೆ 48ರನ್‌ ಸೇರಿಸಿ ಗೆಲುವು ತಂದುಕೊಟ್ಟರು.

ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ರನ್‌ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಳೆದುಕೊಂಡಿತು. ಜೂನಿಯರ್‌ ಡಲಾ ತಾವೆಸೆದ ಇನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ರೋಹಿತ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಶಿಖರ್‌ ಧವನ್‌ (24; 14ಎ, 3ಬೌಂ, 2ಸಿ) ಕೂಡ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜೆ.ಪಿ.ಡುಮಿನಿ ಹಾಕಿದ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಧವನ್‌, ಫರ್ಹಾನ್‌ ಬೆಹಾರ್ಡೀನ್‌ಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ನಾಯಕ ಕೊಹ್ಲಿ (1) ಕೂಡ ಔಟಾದರು.

ಬಳಿಕ ಸುರೇಶ್‌ ರೈನಾ (31; 24ಎ, 5ಬೌಂ) ಮತ್ತು ಮನೀಷ್‌ ಮೋಡಿ ಮಾಡಿದರು. ಇವರು ನಾಲ್ಕವೇ ವಿಕೆಟ್‌ಗೆ 45ರನ್‌ ಸೇರಿಸಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ರೈನಾ ಔಟಾದ ನಂತರ ಮನೀಷ್‌ (ಔಟಾಗದೆ 79; 48ಎ, 6ಬೌಂ, 3ಸಿ) ಮತ್ತು ಮಹೇಂದ್ರ ಸಿಂಗ್‌ ದೋನಿ (ಔಟಾಗದೆ 52; 28ಎ, 4ಬೌಂ, 3ಸಿ) ಅಬ್ಬರಿಸಿದರು. ಇವರು ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ  98ರನ್‌ ಕಲೆಹಾಕಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಭಾರತ:20 ಓವರ್‌ಗಳಲ್ಲಿ 4 ವಿಕೆಟ್‌ಗೆ 188 (ಶಿಖರ್‌ ಧವನ್‌ 24, ಸುರೇಶ್‌ ರೈನಾ 31, ವಿರಾಟ್‌ ಕೊಹ್ಲಿ 1, ಮನೀಷ್‌ ಪಾಂಡೆ ಔಟಾಗದೆ 79, ಮಹೇಂದ್ರ ಸಿಂಗ್‌ ದೋನಿ ಔಟಾಗದೆ 52; ಜೂನಿಯರ್‌ ಡಲಾ 28ಕ್ಕೆ2, ಜೆ.ಪಿ.ಡುಮಿನಿ 13ಕ್ಕೆ1, ಅ್ಯಂಡಿಲೆ ಪೆಹ್ಲುಕವಾಯೊ 15ಕ್ಕೆ1).

ದಕ್ಷಿಣ ಆಫ್ರಿಕಾ: 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 189 (ರೀಜಾ ಹೆನ್ರಿಕ್ಸ್‌ 26, ಜೆ.ಪಿ.ಡುಮಿನಿ ಔಟಾಗದೆ 64, ಹೆನ್ರಿಕ್‌ ಕ್ಲಾಸೆನ್‌ 69, ಫರ್ಹಾನ್‌ ಬೆಹಾರ್ಡೀನ್‌ ಔಟಾಗದೆ 16; ಜಯದೇವ್‌ ಉನದ್ಕತ್‌ 42ಕ್ಕೆ2, ಶಾರ್ದೂಲ್‌ ಠಾಕೂರ್‌ 31ಕ್ಕೆ1, ಹಾರ್ದಿಕ್‌ ಪಾಂಡ್ಯ 31ಕ್ಕೆ1).

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಹೆನ್ರಿಕ್‌ ಕ್ಲಾಸೆನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT