ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಪಿಬಿ ಶತಮಾನದ ಕ್ರಾಂತಿಕಾರಿ ಕಾರ್ಯಕ್ರಮ: ಡಿ.ವಿ.ಸದಾನಂದ ಗೌಡ ಬಣ್ಣನೆ

Last Updated 1 ಸೆಪ್ಟೆಂಬರ್ 2018, 16:51 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ಕಟ್ಟಕಡೆಯ ವ್ಯಕ್ತಿಯನ್ನೂ ಆರ್ಥಿಕ ಸೇರ್ಪಡೆ ವ್ಯಾಪ್ತಿಗೆ ತರುವ ಮಹತ್ತರವಾದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್‌ (ಐಪಿಪಿಬಿ) ಈ ಶತಮಾನದ ಕ್ರಾಂತಿಕಾರಿ ಕಾರ್ಯಕ್ರಮ’ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆಗಳ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ನಗರದ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಐಪಿಪಿಬಿ ಮಂಗಳೂರು ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ‘ಇಷ್ಟು ವರ್ಷಗಳ ಕಾಲ ದೇಶದ ಎಲ್ಲ ಜನರನ್ನೂ ಬ್ಯಾಂಕಿಂಗ್ ಸೇವೆಯ ವ್ಯಾಪ್ತಿಗೆ ತರಲು ಸಾಧ್ಯವಾಗಿಲ್ಲ. ತ್ವರಿತವಾಗಿ ಅದನ್ನು ಸಾಧಿಸಬೇಕೆಂಬ ಮೋದಿಯವರ ಆಸೆಯಂತೆ ಐಪಿಪಿಬಿ ಜನ್ಮತಳೆದಿದೆ. ಎಲ್ಲರ ಸಹಕಾರ ದೊರೆತರೆ ಆ ದಿನಗಳನ್ನು ಶೀಘ್ರದಲ್ಲೇ ಕಾಣಬಹುದು’ ಎಂದರು.

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್ ಮೂಲಕ 2018ರ ಡಿಸೆಂಬರ್‍ನೊಳಗೆ 1.55 ಲಕ್ಷ ಆ್ಯಕ್ಸೆಸ್ ಪಾಯಿಂಟ್‍ಗಳಿಗೆ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ದೇಶದ 650 ಶಾಖೆಗಳು ಮತ್ತು 3,250 ಆ್ಯಕ್ಸೆಸ್ ಪಾಯಿಂಟ್‍ಗಳು ಶನಿವಾರ ಏಕಕಾಲಕ್ಕೆ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದರು.

ದೇಶದ ಜಿಡಿಪಿ ಬೆಳವಣಿಗೆ ದರ ಶೇಕಡ 8.2ಕ್ಕೆ ಹೆಚ್ಚಳವಾಗಿದೆ. ಚೀನಾಕ್ಕಿಂತಲೂ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾಯ್ದುಕೊಂಡಿರುವ ಆರ್ಥಿಕ ಶಿಸ್ತು ಕಾರಣ. ಭಾರತವು ಜಗತ್ತಿನ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮುತ್ತಿದೆ ಎಂದರು.

ಸಂಸದ ನಳಿನ್‌ಕುಮಾರ್ ಕಟೀಲ್‌ ಮತ್ತು ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿದರು. ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜೇಂದ್ರಕುಮಾರ್ ಮತ್ತು ಜಗದೀಶ್ ಪೈ ವೇದಿಕೆಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಐಪಿಪಿಬಿಗೆ ಚಾಲನೆ ನೀಡಿದ ಕಾರ್ಯಕ್ರಮವನ್ನು ಸಮಾರಂಭದ ವೇದಿಕೆಯಲ್ಲಿ ನೇರಪ್ರಸಾರ ಮಾಡಲಾಯಿತು.

ಬಲ್ಮಠದಲ್ಲಿ ಶಾಖೆ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಬಲ್ಮಠ ಅಂಚೆ ಕಚೇರಿಯಲ್ಲಿ ಐಪಿಪಿಬಿ ಶಾಖೆ ಆರಂಭವಾಗಿದೆ. ಬಲ್ಮಠ, ಕಾಟಿಪಳ್ಳ, ಕುತ್ತೆತ್ತೂರು, ಸೂರಿಂಜೆಯಲ್ಲಿ ಆಕ್ಸೆಸ್ ಪಾಯಿಂಟ್‍ಗಳನ್ನೂ ರೂಪಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಎರಡನೇ ಹಂತದಲ್ಲಿ ಐಪಿಪಿಬಿ ಶಾಖೆ ಆರಂಭವಾಗಲಿದೆ.

ಅಂಚೆ ಇಲಾಖೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವಿಸ್ತಾರ ಜಾಲ ಹೊಂದಿದೆ. ಪೋಸ್ಟ್‌ಮ್ಯಾನ್‌, ಗ್ರಾಮೀಣ ಡಾಕ್ ಸೇವಕ್ ಮತ್ತಿತರ ಸಿಬ್ಬಂದಿ ಮೂಲಕ ಮನೆ ಮನೆಗೆ ಬ್ಯಾಂಕಿಂಗ್ ಸೌಲಭ್ಯ ತಲಪಿಸುವ ವ್ಯವಸ್ಥೆ ಮಾಡಲಾಗಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಬಳಸಿ ಗ್ರಾಹಕರು ಬಯೋಮೆಟ್ರಿಕ್ ತಂತ್ರಜ್ಞಾನ ಹಾಗೂ ಒಟಿಪಿ ಪಡೆದು ಸರಳವಾಗಿ ವ್ಯವಹಾರ ನಡೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT