ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆಯಲ್ಲಿ ಅವ್ಯವಹಾರ: ಕಾಂಗ್ರೆಸ್‌ ಆರೋಪ

ತ್ಯಾಜ್ಯ ವಿಲೇವಾರಿ ಹೊಸ ಯೋಜನೆಗೆ ತರಾತುರಿಯಲ್ಲಿ ಅನುಮೋದನೆ
Last Updated 24 ಸೆಪ್ಟೆಂಬರ್ 2021, 2:45 IST
ಅಕ್ಷರ ಗಾತ್ರ

ಮಂಗಳೂರು: ‘ನಗರದ ಸ್ವಚ್ಛವಾಗಿರಬೇಕು ಎಂಬುದು ಎಲ್ಲ ಆಸೆಯಾಗಿದೆ. ಆದರೆ ಸ್ವಚ್ಛತೆಗಾಗಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲಿ ಅವ್ಯವಹಾರ ನಡೆಸುವುದಕ್ಕೆ ನಮ್ಮ ಸಹಮತವಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ’ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹಾಗೂ ಪಾಲಿಕೆ ಪ್ರತಿಪಕ್ಷದ ನಾಯಕ ವಿನಯ್‌ರಾಜ್‌ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಆ್ಯಂಟನಿ ವೇಸ್ಟ್ ಪಡೆದಿತ್ತು. ಪಾಲಿಕೆ ಮತ್ತು ಆ್ಯಂಟನಿ ವೇಸ್ಟ್ ನಡುವಿನ ಕರಾರು 2022ರ ಜನವರಿಗೆ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಪಾಲಿಕೆ ಆಡಳಿತವು ಪ್ರತಿಪಕ್ಷವಾದ ಕಾಂಗ್ರೆಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ₹52 ಕೋಟಿ ಮೊತ್ತದ ಹೊಸ ಯೋಜನೆಗೆ ಅನುಮೋದನೆ ಪಡೆದಿದೆ ಎಂದು ಆರೋಪಿಸಿದರು.

ರಾಮಕೃಷ್ಣ ಮಠಕ್ಕೆ ವಹಿಸಿ:

ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಂಸ್ಕರಣೆಯಲ್ಲಿ ರಾಮಕೃಷ್ಣ ಮಠಕ್ಕೆ ಅನೇಕ ವರ್ಷಗಳ ಅನುಭವವಿದೆ. ಪಾಲಿಕೆಯ ತ್ಯಾಜ್ಯ ವಿಲೇವಾರಿಗೆ ರಾಮಕೃಷ್ಣ ಮಠದವರು ಮನವಿ ಸಲ್ಲಿಸಿದ್ದರೂ, ಬಿಜೆಪಿಯ ಆಡಳಿತವು ಮಠಕ್ಕೆ ಆ ಜವಾಬ್ದಾರಿ ವಹಿಸದೆ, ಬೇರೆ ಕಂಪನಿಗೆ ಕೊಡಲು ಮುಂದಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಮತ್ತು ಮೇಯರ್ ಸ್ಪಷ್ಟನೆ ನೀಡಬೇಕು ಎಂದು ವಿನಯ್‌ರಾಜ್‌ ಒತ್ತಾಯಿಸಿದರು.

ಈಗಿನ ಗುತ್ತಿಗೆ ಸಂಸ್ಥೆಗೆ ನೀಡುವಷ್ಟೇ ಮೊತ್ತ ಕೊಟ್ಟರೆ ಸಾಕು. ವಾಹನ- ಸಿಬ್ಬಂದಿ ಖರೀದಿಸಿ ಕೊಡಬೇಕಿಲ್ಲ. ಕೇವಲ 5 ವರ್ಷಗಳಲ್ಲಿ ಕಸ ವಿಲೇವಾರಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿ ಪಾಲಿಕೆಗೆ ಒಪ್ಪಿಸುವುದಾಗಿ ರಾಮಕೃಷ್ಣ ಆಶ್ರಮದ ಸ್ಟಾರ್ಟ್ ಅಪ್ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹೇಳಿದೆ. ಆದರೆ ಬಿಜೆಪಿ ಆಡಳಿತವು ರಾಮಕೃಷ್ಣ ಆಶ್ರಮದಿಂದ ಈ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನೂ ಪಡೆಯದೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಪ್ರವೀಣ್‌ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ಕೇಶವ, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪ್ರಕಾಶ್ ಸಾಲ್ಯಾನ್ ಇದ್ದರು.

‘ಭ್ರಷ್ಟಾಚಾರದ ವಾಸನೆ’

ಬಿಜೆಪಿ ಆಡಳಿತವು ತ್ಯಾಜ್ಯ ವಿಲೇವಾರಿಗೆ ₹52 ಕೋಟಿ ಮೊತ್ತದ ಯೋಜನೆ ರೂಪಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವಿನಯ್‌ರಾಜ್‌ ಹೇಳಿದರು.

ಇದರಲ್ಲಿ ₹38 ಕೋಟಿ ತ್ಯಾಜ್ಯ ಸಾಗಣೆ ವಾಹನ ಮತ್ತಿತರ ಪರಿಕರಗಳ ಖರೀದಿಗೆ ಮೀಸಲಿಡಲಾಗಿದೆ. ಪಾಲಿಕೆಯ 1,175 ಪೌರ ಕಾರ್ಮಿಕರನ್ನು ಗುತ್ತಿಗೆ ಕಂಪನಿಗೆ ಹಸ್ತಾಂತರಿಸಿ, ಆ ಕಾರ್ಮಿಕರ ನಿರ್ವಹಣೆಯನ್ನು ಕಂಪನಿಗೆ ವಹಿಸಿದೆ. ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಪಚ್ಚನಾಡಿಗೆ ಯಾರ್ಡ್‌ ಸಾಗಿಸುವ ವೆಚ್ಚ ಕೂಡ ಈ ಮೊತ್ತದಿಂದ ಭರಿಸಲಾಗುತ್ತದೆ. ಇನ್ನು ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಹಣ ವ್ಯಯಿಸಬೇಕಾಗುತ್ತದೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ವಿನಯರಾಜ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT