ಭಾನುವಾರ, ಅಕ್ಟೋಬರ್ 20, 2019
27 °C
ಕಾಸರಗೋಡು ಪೊಲೀಸರಿಗೆ ಖಚಿತಪಡಿಸಿದ ಎನ್‌ಐಎ ಅಧಿಕಾರಿಗಳು

ಐಎಸ್‌ ಸೇರಿದ್ದವರಲ್ಲಿ 8 ಮಂದಿ ಸಾವು

Published:
Updated:

ಕಾಸರಗೋಡು: ಜಿಲ್ಲೆಯಿಂದ ಅಪ್ಘಾನಿಸ್ತಾನಕ್ಕೆ ತೆರಳಿ ಇಸ್ಲಾಮಿಕ್‌ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಸೇರಿದ್ದ 23 ಮಂದಿಯಲ್ಲಿ 8 ಜನರು ಮೃತಪಟ್ಟಿದ್ದಾರೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಖಚಿತಪಡಿಸಿದೆ.

ಐಎಸ್ ಸಂಘಟನೆಗೆ ಸೇರಿಸಲು ಕಾಸರಗೋಡಿನಿಂದ ಯುವಕ– ಯುವತಿಯರನ್ನೂ ಕರೆದೊಯ್ದಿದ್ದ ವ್ಯಕ್ತಿ ಹಾಗೂ ಆತನ ಹೆಂಡತಿ ಕೂಡಾ ಅಮೆರಿಕದ ಪಡೆಗಳು ನಡೆಸಿದ ದಾಳಿಯಲ್ಲಿ ಹತರಾಗಿದ್ದಾರೆ ಎಂಬ ಮಾಹಿತಿ ಈಗ ಊರಿಗೆ ತಲುಪಿದೆ.

ಜಿಲ್ಲೆಯ ಚೆರ್ವತ್ತೂರು ಪಡನ್ನ ನಿವಾಸಿಗಳಾದ ಮುಹಮ್ಮದ್ ಮುರ್ಶಾದ್, ಹಫೀಸುದ್ದೀನ್, ಶಿಹಾಸ್, ಅಜ್ಮಲ, ತ್ರಿಕರಿಪುರದ ಮುಹಮ್ಮದ್ ಮರ್ವಾನ್, ತ್ರಿಕರಿಪುರ ಇಳಂಬಚ್ಚಿಯ ಮುಹಮ್ಮದ್ ಮಂಶಾದ್, ಪಾಲ್ಘಾಟ್‌ ನಿವಾಸಿ ಯಾಹ್ಯಾ ಯಾನೆ ಬಾಸ್ಟಿನ್, ಶಿಬಿ ಎಂಬುವವರು ಅಪ್ಘಾನಿಸ್ತಾನದ ನಂಗರ್‌ಹಾಲ್‌ ಎಂಬಲ್ಲಿ ಅಮೆರಿಕ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಹತರಾಗಿದ್ದಾರೆ ಎಂದು ಎನ್ಐಎ ಕೇರಳ ಪೊಲೀಸರಿಗೆ ಮಾಹಿತಿ ನೀಡಿದೆ.

ಎಂಟು ಮಂದಿ ಅಮೆರಿಕದ ಪಡೆಗಳ ದಾಳಿಯಲ್ಲಿ ಮೃತಪಟ್ಟಿರುವ ಸುದ್ದಿಯನ್ನು ಅವರ ಜೊತೆಗಿದ್ದ ಕೆಲವರು ಊರಿನಲ್ಲಿರುವ ಸಂಬಂಧಿಕರಿಗೆ ತಲುಪಿಸಿದ್ದರು.

ಉಡುಂಬುಂತಲ ಅಬ್ದುಲ್ ನೇತೃತ್ವದಲ್ಲಿ 2016 ರಲ್ಲಿ ಕಾಸರಗೋಡಿನಿಂದ 21 ಮಂದಿ ಹಾಗೂ ಪಾಲ್ಘಾಟಿನಿಂದ ಇಬ್ಬರು ಐಎಸ್ ಸೇರಲು ಭಾರತ ತೊರೆದಿದ್ದರು. ಬಳಿಕ ತಾವು ಅಪ್ಘಾನಿಸ್ತಾನದಲ್ಲಿ ಇರುವುದಾಗಿ ಅವರು ಊರಿಗೆ ಮಾಹಿತಿ ನೀಡಿದ್ದರು.

Post Comments (+)