ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ, ಶಿಕ್ಷಣ ಉದ್ಯಮವೇ ಟಾರ್ಗೆಟ್ !

ಕರಾವಳಿ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಮನೆ, ಕಚೇರಿ ಮೇಲೆ ದಾಳಿ
Last Updated 18 ಫೆಬ್ರುವರಿ 2021, 7:34 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದ ವಹಿವಾಟಿನ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ನಸುಕಿನ ಜಾವ ಪ್ರತಿಷ್ಠಿತ ನಾಲ್ವರು ಉದ್ಯಮಿಗಳ ಮನೆ, ಕಚೇರಿ ಹಾಗೂ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳೂರಿನ ಎ.ಜೆ. ಗ್ರೂಪ್ ಮಾಲೀಕ ಎ.ಜೆ. ಶೆಟ್ಟಿ, ಯೇನೆಪೋಯ ಸಮೂಹ ಸಂಸ್ಥೆಗಳ ಯೆನೆಪೋಯ ಅಬ್ದುಲ್ಲಾ ಕುಂಞಿ, ಶ್ರೀನಿವಾಸ ಗ್ರೂಪ್ ಆಫ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಟ್‌ನ ಶ್ರೀನಿವಾಸ ರಾವ್, ಕಣಚೂರು ಗ್ರೂಪ್ ಮಾಲೀಕ ಕಣಚೂರು ಮೋನು ಅವರ ಮನೆ ಹಾಗೂ ಕಚೇರಿಗಳ ಮೇಲೆ ಈ ದಾಳಿ ನಡೆದಿವೆ.

ಎ.ಜೆ. ಗ್ರೂಪ್‌ಗೆ ಸೇರಿದ ಕುಂಟಿಕಾನದಲ್ಲಿರುವ ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬೆಂದೂರುವೆಲ್‌ನಲ್ಲಿರುವ ಅವರ ಬಂಗಲೆ ಹಾಗೂ ಕಚೇರಿಗಳು, ಯೇನೆಪೋಯ ಸಮೂಹ ಸಂಸ್ಥೆಗೆ ಸೇರಿದ ದೇರಳಕಟ್ಟೆಯ ಯೇನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದಂತ ವೈದ್ಯಕೀಯ ಆಸ್ಪತ್ರೆ, ಮಂಗಳೂರಿನ ಆಸ್ಪತ್ರೆ, ಬಲ್ಮಠ ವಾಸ್‌ಲೇನ್‌ನಲ್ಲಿರುವ ಬಂಗಲೆ, ಯೇನೆಪೋಯ ಆಯುರ್ವೇದ ಆಸ್ಪತ್ರೆ, ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್, ಯೇನೆಪೋಯ ನರ್ಸಿಂಗ್ ಕಾಲೇಜು ಮತ್ತಿತರ ಕಚೇರಿಗಳು, ಕಣಚೂರು ಗ್ರೂಪ್‌ಗೆ ಸೇರಿದ ದೇರಳಕಟ್ಟೆಯ ಆಸ್ಪತ್ರೆ ಮತ್ತು ಮಾಲೀಕ ಕಣಚೂರು ಮೋನು ಅವರ ಬಂಗಲೆ, ಟಿಂಬರ್ ಟ್ರೇಡಿಂಗ್ ಕಚೇರಿ, ರಿಯಲ್ ಎಸ್ಟೇಟ್, ಆಗ್ರೊ ಪ್ರೊಸೆಸಿಂಗ್‌ ಮತ್ತಿತರ ಕಚೇರಿಗಳು, ಶ್ರೀನಿವಾಸ ಸಮೂಹ ಸಂಸ್ಥೆಯ ಮಾಲೀಕ ಶ್ರೀನಿವಾಸ ರಾವ್ ಅವರ ಜೈಲು ರಸ್ತೆಯಲ್ಲಿರುವ ಬಂಗಲೆ, ಮುಕ್ಕದಲ್ಲಿರುವ ಶ್ರೀನಿವಾಸ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ವಳಚ್ಚಿನಲ್ಲಿರುವ ಶ್ರೀನಿವಾಸ ಎಂಜಿನಿ
ಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಸಂಸ್ಥೆ, ಮಂಗಳೂರಿನಲ್ಲಿರುವ ಹೋಟೆಲ್‌ ಮ್ಯಾನೇಜ್‌
ಮೆಂಟ್‌ ಸಂಸ್ಥೆ ಮತ್ತು ಕಾರ್ಪೊರೇಟ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಈ ನಡುವೆ, ಯೇನೆಪೋಯ ಆಸ್ಪತ್ರೆ ಆಡಳಿತದೊಂದಿಗೆ ವಹಿವಾಟು ಹೊಂದಿದ್ದಾರೆ ಎನ್ನಲಾದ ಮೂಲ್ಕಿಯ ವೈದ್ಯರೊಬ್ಬರ ಮನೆ ಮೇಲೂ ದಾಳಿ ನಡೆಸಲಾಗಿದೆ.

250ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ: ಕಾರ್ಯಾಚರಣೆಯಲ್ಲಿ ಆದಾಯ ತೆರಿಗೆ ಇಲಾಖೆಯ ಬೆಂಗಳೂರು ಕಚೇರಿಯ ಅಧಿಕಾರಿಗಳು ಸೇರಿದಂತೆ ವಿವಿಧ ರಾಜ್ಯಗಳಿಂದ 250ಕ್ಕೂ ಅಧಿಕ ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು ಸೋಮವಾರ ಸಂಜೆಯೇ ಮಂಗಳೂರಿಗೆ ಬಂದಿಳಿದಿದ್ದ ಅಧಿಕಾರಿಗಳು ಭರ್ಜರಿ ತಯಾರಿ ನಡೆಸಿದ್ದರು.

ದಿನವಿಡೀ ಪರಿಶೀಲನೆ ನಡೆದಿದ್ದು, ದಾಳಿ ವೇಳೆ ನಾಲ್ವರೂ ಉದ್ಯಮಿಗಳು ಮನೆಯಲ್ಲೇ ಇದ್ದರು. ಆರಂಭದಲ್ಲಿ ಬೆಚ್ಚಿದ್ದರೂ, ದಾಖಲೆ ಪರಿಶೀಲನೆ ತನಿಖೆಗೆ ಸಹಕರಿಸಿದ್ದಾರೆ. ಕೇರಳದಲ್ಲಿ ಅಂತರರಾಜ್ಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಹೋಗುವ ಹೆಸರಿನಲ್ಲಿ ಕಾರುಗಳನ್ನು ಬುಕ್ ಮಾಡಿದ್ದರು. ಬೆಳಿಗ್ಗೆ ಕಾರುಗಳು ಬಂದಾಗ, ಅದಕ್ಕೆ ಫುಟ್‌ಬಾಲ್‌ನ ಸ್ಟಿಕರ್‌ಗಳನ್ನು ಅಂಟಿಸಿದ್ದರು. ಅಲ್ಲದೇ, ಫುಟ್ಬಾಲ್ ಆಟಗಾರರ ಬರಲಿದ್ದಾರೆ ಎಂದು ಹೇಳಿ ಕಾರು ಚಾಲಕರನ್ನು ಕರೆದೊಯ್ದಿದ್ದಾರೆ.

ಶ್ರೀನಿವಾಸ ರಾವ್ ತಂದೆ ಅಸ್ವಸ್ಥ:
ಶ್ರೀನಿವಾಸ ರಾವ್ ಅವರ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭ, ಅವರ ತಂದೆ ರಾಘವೇಂದ್ರ ರಾವ್ ದಿಢೀರ್ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಆಂಬುಲೆನ್ಸ್‌ ತರಿಸಿಕೊಂಡು ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದ ಐಟಿ ಅಧಿಕಾರಿಗಳು ಕೆಲಕಾಲ ಆತಂಕಗೊಂಡಿದ್ದರೂ, ಚೇತರಿಕೆ ಹೊಂದಿದ ಬಳಿಕ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕರಾವಳಿಯಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಉದ್ಯಮದಲ್ಲಿ ತೊಡಗಿಸಿಕೊಂಡವರ ಆರ್ಥಿಕ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಸತತ ನಿಗಾ ಇಟ್ಟಿದ್ದು, ಪರಿಶೀಲಿಸುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT