ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರಿಗೆ ಶರಣಾಗತಿ ಪತ್ರ ನೀಡಿದವರು ಸ್ವಾತಂತ್ರ್ಯ ಯೋಧರೇ?: ಐವನ್‌ ಪ್ರಶ್ನೆ

Last Updated 20 ಅಕ್ಟೋಬರ್ 2019, 13:41 IST
ಅಕ್ಷರ ಗಾತ್ರ

ಮಂಗಳೂರು: ‘ಬ್ರಿಟಿಷರಿಗೆ 6 ಬಾರಿ ಶರಣಾಗತಿಯ ಪತ್ರ ಬರೆದ ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ ಯೋಧರಾಗಲು ಹೇಗೆ ಸಾಧ್ಯ? ಅವರಿಗೆ ಭಾರತ ರತ್ನ ಏಕೆ ಕೊಡಬೇಕು ?’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಕರ್ ಜೈಲು ಸೇರಿದ ಎರಡು ವಾರದಲ್ಲಿ ಆರು ಬಾರಿ ಶರಣಾಗತಿ ಪತ್ರವನ್ನು ನೀಡಿದ್ದಾರೆ. ಅಂತಹ ಸಾವರ್ಕರ್ ಬಗ್ಗೆ ಬಿಜೆಪಿಗೆ ದಿಢೀರ್ ಪ್ರೀತಿ ಹುಟ್ಟಲು ಕಾರಣವೇನು?’ ಎಂದರು.

‘ಈವರೆಗೂ ಸಾವರ್ಕರ್ ಪರ ಮಾತನಾಡದ ಬಿಜೆಪಿಯು ಈಗ ಬೊಬ್ಬೆ ಹೊಡೆಯುತ್ತಿದೆ. ಮರಾಠಿ ಬ್ರಾಹ್ಮಣರಾದ ಸಾವರ್ಕರ್‌ಗೆ ‘ಭಾರತ ರತ್ನ’ ಕೊಡುವ ಬಗ್ಗೆ ಪ್ರಸ್ತಾಪಿಸಿ ಜನರ ಭಾವನೆಯನ್ನು ಎತ್ತಿ ಕಟ್ಟಲು ಬಿಜೆಪಿ ಮುಂದಾಗಿದೆ. ಮಹಾರಾಷ್ಟ್ರದ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟು, ಹೀಗೆ ಮಾಡಿದೆ’ ಎಂದು ದೂರಿದರು.

‘ಸಾವರ್ಕರ್ ಬದಲು ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪೇನಿದೆ? ಸಿದ್ದಗಂಗಾ ಶ್ರೀಗಳು ಅರ್ಹರಾಗಿದ್ದಾರೆ. ಆದರೆ, ಬಿಜೆಪಿಗರಿಗೆ ಅದು ಇಷ್ಟವಿಲ್ಲ. ಸಾವರ್ಕರ್ ಹೆಸರು ತೇಲಿಬಿಟ್ಟು ಜನರ ಭಾವನೆ ಕೆದಕುತ್ತಿದೆ’ ಎಂದರು.

‘ದೇಶ ವಿಭಜನೆಗೆ ಮೊದಲ ಮೊಳೆ ಹೊಡೆದ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆಯಾಗಲಿ. ಕಾಂಗ್ರೆಸ್ ಚರ್ಚೆಗೆ ಸಿದ್ಧವಿದೆ’ ಎಂದರು.

‘ಬಿಜೆಪಿಯು ಇತಿಹಾಸ ತಿರುಚಲು ಹೊರಟಿದೆ. ಮೋದಿ ಬಂದ ಬಳಿಕವೇ ಭಾರತಕ್ಕೆ ಇತಿಹಾಸ ಎಂಬಂತೆ ಬಿಂಬಿಸಲು ಹೊರಟಿದೆ. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲು ಬಿಜೆಪಿ ಹೊರಟಿದೆ’ ಎಂದರು.

‘ಬಿಜೆಪಿಗೆ ಚುನಾವಣೆಯ ಸಂದರ್ಭ ರಾಷ್ಟ್ರಪ್ರೇಮಿಗಳು ರಾಷ್ಟ್ರದ್ರೋಹಿಗಳಂತೆ ಮತ್ತು ಚುನಾವಣೆಯ ಬಳಿಕ ರಾಷ್ಟ್ರದ್ರೋಹಿಗಳು ರಾಷ್ಟ್ರಪ್ರೇಮಿಗಳಂತೆ ಕಾಣುತ್ತಿರುವುದು ವಿಪರ್ಯಾಸ. ಅಭಿವೃದ್ಧಿ ಹಾಗೂ ಆಡಳಿತ ವೈಫಲ್ಯವನ್ನು ಮರೆಮಾಚುವ ಸಲುವಾಗಿ ಬಿಜೆಪಿಯು ಭಾವನಾತ್ಮಕ ವಿಚಾರ ತೇಲಿ ಬಿಡುತ್ತಿದೆ’ ಎಂದು ದೂರಿದರು.

ಮಾಜಿ ಮೇಯರ್ ಕವಿತಾ ಸನಿಲ್, ಪಕ್ಷದ ಮುಖಂಡರಾದ ಜಯಶೀಲಾ ಅಡ್ಯಂತಾಯ, ಪಿಯೂಸ್ ಮೊಂತೆರೋ, ಸದಾಶಿವ ಶೆಟ್ಟಿ, ನಝೀರ್ ಬಜಾಲ್, ಭಾಸ್ಕರ ರಾವ್, ನಾರಾಯಣ ಕೋಟ್ಯಾನ್ ಇದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT