ಮಂಗಳೂರು: ‘ಪಾಲಿಕೆಯ ವಾರ್ಡ್‌ನಲ್ಲಿ, ಕನಿಷ್ಠ ಪಕ್ಷ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಯೋಗ್ಯತೆಯೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಇಲ್ಲ. ವಿಧಾನ ಪರಿಷತ್ ಸದಸ್ಯತ್ವ ಕರುಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಐವನ್ ಅವರ ರೀತಿ ರಾಜ್ಯದ ಯಾವ ಶಾಸಕರು ರಾಜ್ಯಪಾಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರಲಿಲ್ಲ. ಪೊಲೀಸರಿಗೆ ದಮ್ ಇದ್ದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಿ' ಎಂದು ಸವಾಲು ಹಾಕಿದರು.
‘ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದ ವ್ಯಕ್ತಿ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಐವನ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರಮುಖರು ಬರ್ಕೆ ಠಾಣೆಗೆ ದೂರು ನೀಡಿದರೂ, ಇನ್ನೂ ಎಫ್ಐಆರ್ ದಾಖಲಿಸಿಕೊಂಡಿಲ್ಲ’ ಎಂದು ದೂರಿದರು.
'ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದ ವೇಳೆ ಬಸ್‌ಗೆ ಕಲ್ಲು ತೂರಿದ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡುವ ಮೂಲಕ ಕೆಟ್ಟ ಚಾಳಿಯನ್ನು ಆರಂಭಿಸಿದ್ದಾರೆ. ಇನ್ನು ಮುಂದೆ ಯಾವುದಾದರೂ ಸಂಘಟನೆಯವರು ಪ್ರತಿಭಟನೆ ವೇಳೆ ಗಾಜು ಒಡೆದರೆ ನೋಟಿಸ್ ನೀಡಿ ಬಿಟ್ಟುಬಿಡಲಾಗುತ್ತದೆಯೇ ಎಂಬುದನ್ನು ನಗರ ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಬೇಕು. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುವುದನ್ನು ಬಿಡಬೇಕು’ ಎಂದರು.