ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಜನಾಕರ್ಷಣೆಯೊಂದಿಗೆ ಮೇಳೈಸಿದ `ಹಲಸು ಮೇಳ'

ಹಲಸು ಪ್ರೀಯರ ಒಗ್ಗೂಡುವಕೆಯೊಂದಿಗೆ ಹಬ್ಬದ ವಾತಾವರಣ
Last Updated 25 ಜೂನ್ 2022, 15:41 IST
ಅಕ್ಷರ ಗಾತ್ರ

ಪುತ್ತೂರು: ತಿಪಟೂರಿನ ಕೆಂಪು ಹಲಸು, ಶಿರಸಿ, ಬ್ರಹ್ಮಾವರ, ಕಾರ್ಕಳ, ಮೂಲ್ಕಿ ಹಾಗೂ ಸ್ಥಳೀಯ ಹಲಸಿನ ಹಣ್ಣುಗಳು, ಅವುಗಳ ಗಿಡಗಳು, ಜೊತೆಗೆ ಹಲಸಿನ ಖಾದ್ಯಗಳು ಹಾಗೂ ಹಣ್ಣುಗಳ ಮಾರಾಟವು ಶನಿವಾರ ಇಲ್ಲಿನ ವೆಂಕಟರಮಣ ದೇವಳದ ಸುಕೃತೀಂದ್ರ ಸಭಾಭವನದಲ್ಲಿ ಆರಂಭಗೊಂಡ `ಹಲಸು ಮತ್ತು ಹಣ್ಣು ಮೇಳ'ದಲ್ಲಿ ಗಮನ ಸೆಳೆದವು.

ಪುತ್ತೂರಿನ ನವತೇಜ ಸಂಸ್ಥೆ ಮತ್ತು ಜೆಸಿಐ ವತಿಯಿಂದ ಹಮ್ಮಿಕೊಳ್ಳಲಾದ ಹಲಸು ಮತ್ತು ಹಣ್ಣು ಮೇಳದಲ್ಲಿ ಒಟ್ಟು 27 ಮಳಿಗೆಗಳಿದ್ದು, ಜನಾಕರ್ಷಣೆಯಂದಿಗೆ ಮೇಳೈಸಿತು. ತಿಪಟೂರಿನ ಕೆಂಪು ಹಲಸಿನ ಹಣ್ಣಿಗೆ ಬಾರೀ ಬೇಡಿಕೆ ಕಂಡು ಬಂತು.

ಮೇಳದ ಸ್ಟಾಲ್‍ಗಳಲ್ಲಿ ಮಾರಾಟಕ್ಕಿಟ್ಟಿದ್ದ ಹಲಸಿನ ಕಾಯಿ ಖಾದ್ಯಗಳಾದ ಹಲಸಿನ ಚಿಪ್ಸ್, ಉಂಡ್ಲಕಾಳು,ಹಪ್ಪಳ,ಹಲಸಿನ ಹಣ್ಣಿನ ದೋಸೆ, ಕಬಾಬ್, ಮುಳ್ಳಕ್ಕ, ಗಾರಿಗೆ, ಸೋಳೆ ರೊಟ್ಟಿ, ಸೇಮಿಗೆ, ಕೇಕ್, ಹಲ್ವ, ಐಸ್‍ಕ್ರೀಂ, ಬನ್ಸ್, ಪಲಾವ್, ಕೊಟ್ಟಿಗೆ, ಗೆಣಸಲೆ, ಪೋಡಿ, ಹಲಸಿನ ಗುಜ್ಜೆ ಮಂಚೂರಿ, ಹಲಸಿನ ಜ್ಯೂಸ್, ಜಾಮೂನ್, ಹಲಸಿನ ಬೀಜದ ಮತ್ತು ಹಲಸಿನ ಹಣ್ಣಿನ ಹೋಳಿಗೆ, ಉಪ್ಪಿನಕಾಯಿ, ಪಾಯಸ, ಕಾಯಿ ಸೋಂಟೆ, ಹಲಸು ಬೀಜದ ಬಿಸ್ಕೇಟ್, ಚಪಾತಿ ಮೊದಲಾದ ಖಾದ್ಯಗಳು ಹಲಸು ಪ್ರಿಯರ ಬಾಯಲ್ಲಿ ನಿರೂರಿಸಿತು.

ಹಲಸಿನ ಹಣ್ಣು ಮತ್ತು ಖಾದ್ಯಗಳ ಜತೆಗೆ ರಂಬೂಟನ್, ಡ್ಯ್ರಾಗನ್ ಫ್ರುಟ್, ಪಪ್ಪಾಯಿ, ಬಟರ್ ಫ್ರುಟ್ ಮೊದಲಾದ ಹಣ್ಣುಗಳ ಮಾರಾಟ ಮಳಿಗೆಗಳಿದ್ದವು. ಅಡಿಕೆಯ ಪೇಯ, ಮಘೆಕಾಯಿ ರೊಟ್ಟಿಯನ್ನು ಪರಿಚಯಿಸುವ ಮಳಿಗೆಗಳಿದ್ದವು, ನವನೀತ ನರ್ಸರಿಯ ವತಿಯಿಂದ ವಿವಿಧ ತಳಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಹಲಸಿನ ಹಣ್ಣು ತಿನ್ನುವ, ಸೋಳೆ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮೇಳದ ಉದ್ಘಾಟನೆ:ಹಲಸು ಮೇಳವನ್ನು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಉದ್ಘಾಟಿಸಿದರು.

ಮೀಯಪದವಿನ ಕೃಷಿಕ ಡಾ. ಚಂದ್ರಶೇಖರ ಚೌಟ ಮಾತನಾಡಿ, ಇಂದು ಹಲಸಿಗೆ ಮಾನ ಬಂದಿದೆ. ನಮ್ಮ ತೋಟಗಳ ಹಲಸುಗಳು ಆಹಾರ ಉದ್ಯಮಗಳಲ್ಲಿ ಬಳಕೆಯಾಗುತ್ತಿದೆ ಎಂದರು.

ಜೇಸಿಐ ಪ್ರಾದೇಶಿಕ ಅಧ್ಯಕ್ಷ ರೋಯನ್ ಉದಯ ಕ್ರಾಸ್ತಾ, ಕ್ಯಾಂಪ್ಕೊ ನಿರ್ದೇಶಕ ಜಯಪ್ರಕಾಶ್ ತೊಟ್ಟೆತ್ತೋಡಿ, ಲಕ್ಷ್ಮೀವೆಂಕಟರಮಣ ದೇವಳದ ಡಾ. ಗೋಪಿನಾಥ್ ಪೈ, ಪುತ್ತೂರು ನವತೇಜ ಸಂಸ್ಥೆಯ ಅನಂತಪ್ರಸಾದ್ ನೈತ್ತಡ್ಕ, ಸುಹಾಸ್ ಮರಿಕೆ ಇದ್ದರು. ಕೃಷಿ ಬರಹಗಾರ ನಾ. ಕಾರಂತ ಪೆರಾಜೆ ಸ್ವಾಗತಿಸಿದರು. ಪುತ್ತೂರು ಜೇಸಿ ಅಧ್ಯಕ್ಷ ಶಶಿರಾಜ್ ರೈ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT