ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಜಲಸಿರಿ: ಕಾಮಗಾರಿ ವಿಳಂಬಕ್ಕೆ ಆಕ್ಷೇಪ

ನ.2ರಿಂದ ಪ್ರತ್ಯೇಕ ಸಭೆ ನಡೆಸಲು ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧಾರ
Published 20 ಅಕ್ಟೋಬರ್ 2023, 14:25 IST
Last Updated 20 ಅಕ್ಟೋಬರ್ 2023, 14:25 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ನಗರಕ್ಕೆ 24X7 ನೀರು ಸರಬರಾಜು ಮಾಡುವ ಜಲಸಿರಿಯ ಕಾಮಗಾರಿ ತ್ವರಿತಗೊಳಿಸುವ ನಿಟ್ಟಿನಲ್ಲಿ ಪ್ರತಿ 10 ವಲಯಗಳನ್ನು ಒಳಗೊಂಡು ಮೇಯರ್, ವಾರ್ಡ್‌ ಸದಸ್ಯರು, ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಲು ತೀರ್ಮಾನಿಸಲಾಯಿತು.

ಶುಕ್ರವಾರ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಜಲಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕಾಮಗಾರಿಯ ವಿಳಂಬದ ಬಗ್ಗೆ ಪಕ್ಷಭೇದವಿಲ್ಲದೆ ಎಲ್ಲ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

‘ಎಡಿಬಿ ಒಂದನೇ ಹಂತದ ಲೋಪಗಳನ್ನು ಸರಿಪಡಿಸಿಕೊಂಡು ಇದನ್ನು ಅನುಷ್ಠಾನ ಮಾಡಲಾಗುತ್ತಿದೆಯೇ? ಭೌತಿಕ ಪ್ರಗತಿ ಮತ್ತು ಆರ್ಥಿಕ ಪ್ರಗತಿ ಒಂದಕ್ಕೊಂದು ಹೊಂದಾಣಿಕೆ ಕಾಣುತ್ತಿಲ್ಲ’ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

ಜಲಸಿರಿ ಯೋಜನೆಯಲ್ಲಿ ಈವರೆಗೆ ಆಗಿರುವ ಕಾಮಗಾರಿಯಲ್ಲಿ ಮಹಾನಗರ ಪಾಲಿಕೆಯ ಪಾತ್ರವೇನು ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಇದೇ ಗುತ್ತಿಗೆದಾರರನ್ನು ಉಳಿಸಿಕೊಂಡು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ವಲಯವಾರು ಸಮರ್ಪಕವಾಗಿ ಆಗದಿದ್ದರೆ ಯೋಜನೆ ವಿಫಲವಾಗುತ್ತದೆ ಎಂದು ಸದಸ್ಯ ವಿನಯರಾಜ್ ಅಭಿಪ್ರಾಯಪಟ್ಟರು.

ಪಾಲಿಕೆಯ ವ್ಯಾಪ್ತಿ ವಿಸ್ತರಣೆ ಆದ ಹಾಗೆ, ನೀರಿನ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಮತ್ತು ಪೂರೈಕೆ ಬಗ್ಗೆ ಅಧ್ಯಯನ ನಡೆದಿದೆಯೇ? ಭವಿಷ್ಯದಲ್ಲಿ ನೀರಿನ ಕೊರತೆ ಆಗದಂತೆ ಎಚ್ಚರವಹಿಸಲು ಜಲಮೂಲಗಳನ್ನು ಎಲ್ಲೆಲ್ಲಿ ಗುರುತಿಸಲಾಗಿದೆ ಎಂದು ಸದಸ್ಯರಾದ ಸಂಗೀತಾ ನಾಯಕ್, ಶಕೀಲ ಕಾವ, ನವೀನ್ ಡಿಸೋಜ, ಜಗದೀಶ್ ಶೆಟ್ಟಿ ಮತ್ತಿತರರು ಪ್ರಶ್ನಿಸಿದರು.

ಯಾವ ವಾರ್ಡ್‌ ಯಾವ ವಲಯಕ್ಕೆ ಒಳಪಟ್ಟಿದೆ ಎಂಬುದನ್ನು ಆಯಾ ವಾರ್ಡ್ ಸದಸ್ಯರಿಗೆ ತಿಳಿಸಬೇಕು. ಈಗಾಗಲೇ ಮನೆಗಳಿಗೆ ಹಾಕಿರುವ ಮೀಟರ್‌ಗಳಲ್ಲಿ ಲೋಪಗಳು ಇರುವ ಬಗ್ಗೆ, ಅವಕ್ಕೆ ಫಂಗಸ್ ಬಂದಿರುವ ಬಗ್ಗೆ ದೂರುಗಳು ಬಂದಿವೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೂರಿದರು. ಒಟ್ಟು 54 ವಲಯಗಳಿದ್ದು, ನವೆಂಬರ್ 2ರಿಂದ ನಿರಂತರವಾಗಿ ಪ್ರತಿ 10 ವಲಯ ಒಳಗೊಂಡು ಸಭೆ ನಡೆಸಲಾಗುವುದು. ಗುತ್ತಿಗೆ ಕಂಪನಿ ಮತ್ತು ಅಧಿಕಾರಿಗಳು ಸಂಬಂಧಪಟ್ಟ ವಾರ್ಡ್‌ ಸದಸ್ಯರಿಗೆ ಮುಂಚಿತವಾಗಿ ಎಲ್ಲ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

‘ಒಂದು ವಲಯದಿಂದ ಇನ್ನೊಂದು ವಲಯಕ್ಕೆ ನೀರು ಹೋಗದಂತೆ ಎಚ್ಚರವಹಿಸಿ, ಪ್ರತಿ ವಲಯಕ್ಕೆ ಪ್ರತ್ಯೇಕ ಟ್ಯಾಂಕ್ ನಿರ್ಮಿಸಲಾಗಿದೆ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಜಲಸಿರಿ ಯೋಜನೆ ಪ್ರಗತಿ ಸಂಬಂಧ ಸರಣಿ ಸಭೆಗಳನ್ನು ನಡೆಸಬೇಕು. ಇಲ್ಲವಾದಲ್ಲಿ ನಗರಕ್ಕೆ ಬಂದಿರುವ ಬಹುವೆಚ್ಚದ ಯೋಜನೆ ವಿಫಲವಾಗುತ್ತದೆ ಎಂದು ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಡ್ಯಾರಿನಲ್ಲಿ ನೀರು ಸಂಸ್ಕರಣಾ ಘಟಕ: ಅಡ್ಯಾರ್‌ನಲ್ಲಿ ₹128 ಕೋಟಿ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಕಣ್ಣೂರಿನಲ್ಲಿಯೂ ಒಂದು ಸ್ಥಳ ವೀಕ್ಷಿಸಲಾಗಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು ತಿಳಿಸಿದರು.

ಕಾಂಕ್ರೀಟ್‌ ಕಟಿಂಗ್‌ ಕಾಮಗಾರಿಗೆ ಮೀಸಲಿಟ್ಟಿದ್ದ ಹಣದಲ್ಲಿ ₹64 ಕೋಟಿ, ಪೈಪ್‌ಲೈನ್ ಕಾಮಗಾರಿಯಲ್ಲಿ ₹7 ಕೋಟಿ ಉಳಿಕೆಯಾಗಿದೆ. ₹20 ಕೋಟಿ ಪಾಲಿಕೆಯಿಂದ ನೀಡುವ ಬಗ್ಗೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿತ್ತು. ಎನ್‌ಎಂಪಿಟಿ, ಎಂಸಿಎಫ್ ಮತ್ತಿತರ ನೀರಿನ ಗರಿಷ್ಠ ಬಳಕೆದಾರರಿಂದ ₹11 ಕೋಟಿ ಸಂಗ್ರಹಿಸಲು ಯೋಚಿಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ ತಿಳಿಸಿದರು.

10 ಎಕರೆ ಜಾಗದಲ್ಲಿ ಮೂರು ಎಕರೆ ಸರ್ಕಾರಿ ಜಾಗ ನದಿಯಲ್ಲಿದೆ. ಇದಕ್ಕೆ ಮಣ್ಣು ತುಂಬಿಸಬೇಕು, ರೈಲ್ವೆ ಇಲಾಖೆ, ಹೆದ್ದಾರಿ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಜಲಸಿರಿ ಕಾಮಗಾರಿ ಪೂರ್ಣಗೊಳ್ಳಲು ಕೇವಲ ಏಳು ತಿಂಗಳು ಮಾತ್ರ ಕಾಲಾವಕಾಶ ಇದೆ. ಈ ಅವಧಿಯಲ್ಲಿ ನೀರು ಸಂಸ್ಕರಣಾ ಘಟಕ ನಿರ್ಮಾಣ ಸಾಧ್ಯವೇ ಎಂದು ಮೇಯರ್ ಪ್ರಶ್ನಿಸಿದರು.

ಈ ಕಾಮಗಾರಿಯ ಗುತ್ತಿಗೆಯನ್ನೂ ಸೂಯ್ಜ್ ಕಂಪನಿಗೆ ನೀಡಿರುವುದಕ್ಕೆ ವಿಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ ಸೇರಿದಂತೆ ಎಲ್ಲ ಸದಸ್ಯರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘2024ರ ಮೇ ತಿಂಗಳ ಒಳಗಾಗಿ ಹಣ ಖರ್ಚು ಮಾಡದಿದ್ದಲ್ಲಿ ಅನುದಾನ ವಾಪಸ್ಸಾಗುತ್ತದೆ. ಹೀಗಾಗಿ, ಬೆಂಗಳೂರಿನಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ ಕಂಪನಿಯೇ ಕಾಮಗಾರಿ ನಡೆಸಲು ನಿರ್ಧಾರವಾಗಿದೆ’ ಎಂದು ಕಂಪನಿಯ ಪ್ರತಿನಿಧಿ ತಿಳಿಸಿದರು.

ಪಾಲಿಕೆಯ ಎಲ್ಲ ಸದಸ್ಯರು ಮುಂದಿನ ವಾರ ಸ್ಥಳ ಭೇಟಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಜಲಸಿರಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವೀಣ್‌ಚಂದ್ರ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಜಲಸಿರಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವೀಣ್‌ಚಂದ್ರ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ

ಇನ್ನು ಏಳು ತಿಂಗಳು ಮಾತ್ರ ಬಾಕಿ

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯು ಜಲಸಿರಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಸೂಯ್ಜ್ ಪ್ರಾಜೆಕ್ಟ್ಸ್‌ ಯೋಜನೆಯ ಗುತ್ತಿಗೆ ಪಡೆದಿದೆ. ಕಾಮಗಾರಿ ವೆಚ್ಚ ₹587.67 ಮತ್ತು ಎಂಟು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ₹204.75 ಕೋಟಿ ಸೇರಿ ಒಟ್ಟು ₹792.4 ಕೋಟಿ ವೆಚ್ಚದ ಯೋಜನೆ ಇದಾಗಿದೆ. 2019 ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭಿಸಿದ್ದು 140 ತಿಂಗಳು ಗುತ್ತಿಗೆ ಅವಧಿ ಇದೆ ಎಂದು ಪವರ್ ಪಾಟಿಂಗ್ ಮೂಲಕ ಗುತ್ತಿಗೆ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದರು. ಗುತ್ತಿಗೆ ಅವಧಿ ಒಂದು ವರ್ಷಕ್ಕೆ ವಿಸ್ತರಣೆಯಾಗಿದ್ದು 2024 ಮೇ ತಿಂಗಳಿಗೆ ಮುಗಿಯಲಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ 2032 ಆಗಸ್ಟ್‌ ತಿಂಗಳವರೆಗೆ ಇರಲಿದೆ. ಒಟ್ಟು 96300 ಸಂಪರ್ಕ ನೀಡುವ ಗುರಿ ಇದ್ದು 66408 ಈವರೆಗೆ ಆಗಬೇಕಾಗಿತ್ತು. ಪ್ರಸ್ತುತ 14149 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅವುಗಳಲ್ಲಿ 6355 ಮನೆಗಳಿಗೆ ಮೀಟರ್ ಅಳವಡಿಸಲಾಗಿದೆ ಎಂದು ವಿವರಿಸಿದರು. ಯೋಜನೆಯ ಭೌತಿಕ ಗುರಿಯಲ್ಲಿ ಪ್ರಸ್ತುತ ಶೇ 45ರಷ್ಟು ಸಾಧನೆಯಾಗಿದ್ದು ಆರ್ಥಿಕ ಪ್ರಗತಿಯಲ್ಲಿ ಶೇ 39.54 ಸಾಧನೆಯಾಗಿದೆ ಎಂದರು.

ಜಲಸಿರಿ ಯೋಜನೆ ಕಾಮಗಾರಿ;ಒಟ್ಟು ಗುರಿ;ಈವರೆಗೆ ಆಗಬೇಕಾಗಿದ್ದು;ಈವರೆಗೆ ಪೂರ್ಣಗೊಂಡಿದ್ದು ಮುಖ್ಯ ಕೊಳವೆ;54.16 ಕಿ.ಮೀ;37.34 ಕಿ.ಮೀ;32.12 ಕಿ.ಮೀ ವಿತರಣಾ ಜಾಲ;1288 ಕಿ.ಮೀ;700ಕಿ.ಮೀ;553 ಕಿ.ಮೀ ಮನೆಗಳಿಗೆ ನಳ ಸಂಪರ್ಕ;96300;66408;14149

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT