ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪ್ರವಾದಿ ಮುಹಮ್ಮದ್ ಚಿಂತನೆಗಳ ಬೆಳಕಿನಲ್ಲಿ ವಿಚಾರ ಸಂಕಿರಣ 7ರಂದು

Last Updated 5 ಅಕ್ಟೋಬರ್ 2022, 11:33 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ‘ಪ್ರವಾದಿ ಮುಹಮ್ಮದ್‌ರನ್ನು ಅರಿಯೋಣ' ಎಂಬ ಹತ್ತು ದಿನಗಳ ಅಭಿಯಾನವನ್ನು ಸೆ. 30ರಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಇದೇ 7ರಂದು ಸಂಜೆ 7ರಿಂದ ನಗರದ ಕುದ್ಮುಲ್‌ರಂಗರಾವ್‌ ಪುರಭವನದಲ್ಲಿ ‘ದೇಶದ ಹಿತಚಿಂತನೆ: ಪ್ರವಾದಿ ಮುಹಮ್ಮದ್ ಚಿಂತನೆಗಳ ಬೆಳಕಿನಲ್ಲಿ’ ವಿಚಾರಗೋಷ್ಠಿ ಏರ್ಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ‘ವಿಚಾರಗೋಷ್ಠಿಯಲ್ಲಿ ಚಿಂತಕ ವೈ.ಎಸ್.ವಿ. ದತ್ತ, ಕೆ.ಪಿ.ಸಿ.ಸಿ, ವಕ್ತಾರ ನಿಕೇತ್ ರಾಜ್ ಮೌರ್ಯ, ಕುಲಶೇಖರ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ಫಾ.ಕ್ಲಿಫರ್ಡ್ ಫರ್ನಾಂಡಿಸ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಞಿ ಭಾಗವಹಿಸಲಿದ್ದಾರೆ. ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಬೆಳ್ಗಾಮಿ ಮುಹಮ್ಮದ್ ಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

‘ಸಮಾಜದಲ್ಲಿ ಮುಹಮ್ಮದ್ ಪೈಗಂಬರರ ಕುರಿತು ಬಹಳ ತಪ್ಪು ತಿಳಿವಳಿಕೆಗಳಿವೆ. ಅವರ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ. ಇಂತಹ ತಪ್ಪುಕಲ್ಪನೆ ದೂರ ಮಾಡಲು ಮತ್ತು ಅವರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಪರಿಚಯಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಜಗತ್ತಿನ ‌ಸಮಾಜ ಸುಧಾರಕರ ತತ್ವಸಿದ್ಧಾಂತಗಳನ್ನು ತಿಳಿಯುವಂತಹ ಹಾಗೂ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ದದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಧರ್ಮ-ಜಾತಿ-ಪಂಗಡಗಳ ನಡುವೆ ಸಾಮರಸ್ಯ ಬೆಳೆಯಬೇಕು. ಪರಸ್ಪರ ಅಪಗ್ರಹಿಕೆ ದೂರ ಮಾಡಿ ನಂಬಿಕೆಯನ್ನು ಗಟ್ಟಿಗೊಳಿಸುವುದು ಈ ಅಭಿಯಾನದ ಉದ್ದೇಶ’ ಎಂದರು.

‘ಶಾಂತಿ ಪ್ರಕಾಶನವು ‘ಪ್ರವಾದಿ ಮುಹಮ್ಮದ್ ಸಮಗ್ರ ವ್ಯಕ್ತಿತ್ವ’ ಮತ್ತು ‘ಪ್ರವಾದಿ ಮುಹಮ್ಮದ್: ವಿವಾಹಗಳು ಮತ್ತು ವಿಮರ್ಶೆಗಳು' ಎಂಬ ಕೃತಿಗಳನ್ನು ಪ್ರಕಟಿಸಿದೆ. ವಿವಿಧ ಕಡೆಗಳಲ್ಲಿ ವೃದ್ಧಾಶ್ರಮ ಭೇಟಿ, ಹಿರಿಯರಿಗೆ ಸನ್ಮಾನ, ಆಸ್ಪತ್ರೆ ಭೇಟಿ, ಶುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವಂತಹ ಸೇವಾ ಕಾರ್ಯಗಳನ್ನು, ಸೀರತ್, ಪ್ರವಚನ, ವಿಚಾರಗೋಷ್ಠಿ, ಚರ್ಚಾಗೋಷ್ಠಿ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಅಭಿಯಾನದಡಿ ಹಮ್ಮಿಕೊಳ್ಳಲಾಗಿದೆ‘ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ ಸಂಸ್ಥೆಯ ಸ್ಥಾನೀಯ ಅಧ್ಯಕ್ಷ ಕೆ.ಎಂ. ಅಶ್ರಫ್,ಜಿಲ್ಲಾ ಸಂಚಾಲಕಿ ಸಮೀನಾ ಯು.,ಸ್ಥಾನೀಯ ಸಹ ಸಂಚಾಲಕಿ ಶಹೀದಾ ಉಮರ್‌ ಹಾಗೂ ಸಯೀದ್‌ ಇಸ್ಮಾಯಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT