ಮಹಿಳೆಯರು ದೇವರ ಮಕ್ಕಳಲ್ಲವೇ: ಪೂಜಾರಿ

7
ಶಬರಿಮಲೆಗೆ ಎಲ್ಲ ಮಹಿಳೆಯರ ಪ್ರವೇಶಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ

ಮಹಿಳೆಯರು ದೇವರ ಮಕ್ಕಳಲ್ಲವೇ: ಪೂಜಾರಿ

Published:
Updated:
Prajavani

ಮಂಗಳೂರು: ಶಬರಿಮಲೆಯಲ್ಲಿ ಎಲ್ಲ ಮಹಿಳೆಯರೂ ಪ್ರವೇಶ ಮಾಡಲು ಕೇರಳ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಮಹಿಳೆಯರು ದೇವರ ಮಕ್ಕಳಲ್ಲವೇ? ಎಲ್ಲ ಮಹಿಳೆಯರು ಅಯ್ಯಪ್ಪನ ಕ್ಷೇತ್ರಕ್ಕೆ ಪ್ರವೇಶಿಸುವಂತಾದರೆ ದೇವರು ಮೆಚ್ಚುತ್ತಾರೆ. ಇದಕ್ಕಾಗಿ ಪಿಣರಾಯಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಬರಿಮಲೆಯ ವಿಚಾರವನ್ನು ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ದುರುದ್ದೇಶವನ್ನು ಇಟ್ಟುಕೊಂಡು ಲಾಭಕ್ಕಾಗಿ ಇದಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಅದು ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೋ ಪಕ್ಷವಾಗಲಿ ಅಥವಾ ವ್ಯಕ್ತಿಯಾಗಲಿ ಮಹಿಳೆಯರ ಪ್ರವೇಶ ವಿರೋಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಮಾತೃ ದೇವೋ ಭವ ಎನ್ನುವ ಸಂಸ್ಕೃತಿ ನಮ್ಮದು. ಹೀಗಿರುವಾಗ ಅಯ್ಯಪ್ಪ ಸ್ವಾಮಿ ಮಹಿಳೆಯರ ಪ್ರವೇಶವನ್ನು ಬೇಡ ಎನ್ನಲಿಲ್ಲ. ವಿರೋಧಿಸುವವರು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದ ಅವರು, ಮಹಿಳೆಯರಿಗೆ ದ್ರೋಹ ಬಗೆಯದಂತೆ ಕೇರಳ ಮುಖ್ಯಮಂತ್ರಿ ತಮ್ಮ ಕರ್ತವ್ಯ ಪಾಲಿಸಬೇಕು. ಎಲ್ಲ ಮಹಿಳೆಯರ ಪ್ರವೇಶಕ್ಕೆ ಅನುಕೂಲಕರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಭಗವಾನ್ ವಿರುದ್ಧ ಕಿಡಿ: ಪ್ರೊ. ಭಗವಾನ್ ಹೇಳಿಕೆ ಕುರಿತ ಉತ್ತರಿಸಿದ ಅವರು, ಶ್ರೀರಾಮ ಇದ್ದಾಗ ಭಗವಾನ್ ಹುಟ್ಟಿದ್ದರೇ? ಶ್ರೀರಾಮ ಮಾಂಸ ಭಕ್ಷಿಸುವುದನ್ನು ಇವರು ನೋಡಿದ್ದಾರೆಯೇ? ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಇವರ ದುರುದ್ದೇಶ ಗಲಾಟೆ ಹುಟ್ಟು ಹಾಕುವುದು ಮಾತ್ರ, ಇವರಿಂದಾಗಿ ಎಷ್ಟು ಕುಟುಂಬ ಹಾಳಾಯಿತೋ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್‌. ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್‌, ಪದಾಧಿಕಾರಿಗಳಾದ ದೇವೇಂದ್ರ ಪೂಜಾರಿ, ಚಿತ್ತರಂಜನ್‌, ಲೋಹಿತ್‌ ಪೂಜಾರಿ, ಹರೀಶ್ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !