ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳಿನಲ್ಲಿ ಮಿಂಚಿದ ಕನ್ನಡದ ‘ಡ್ಯಾನಿ‘

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ನೃತ್ಯಗಾರರ ಬಳಿ ಯಾವುದೇ ತರಬೇತಿ ಪಡೆಯದೆ ಬೆಂಗಳೂರಿನ 16 ಸಾವಿರಕ್ಕೂ ಹೆಚ್ಚು ಜನರಿಗೆ ಅತಿ ಕಡಿಮೆ ಶುಲ್ಕಕ್ಕೆ ನೃತ್ಯ ಹೇಳಿಕೊಟ್ಟವರು ಡ್ಯಾನಿ. ಮ್ಯೂಸಿಕಲ್‌ ವಿಡಿಯೊ, ಸಿನಿಮಾ, ನೃತ್ಯ ಸ್ಪರ್ಧೆ ಮತ್ತು ಜಾಹೀರಾತುಗಳಲ್ಲೂ ತೊಡಗಿಸಿಕೊಂಡಿದ್ದಾರೆ.

2001ರಲ್ಲಿ ತಮಿಳಿನಲ್ಲಿ ಬಿಗ್‌ ಹಿಟ್‌ ಆದ ‘ಓ ಮಾರಿಯಾ ಓ ಮಾರಿಯಾ’ ಎನ್ನುವ ಹಾಡಿನ ಕೊರಿಯೋಗ್ರಫಿ ಮಾಡಿದ್ದು, ಡ್ಯಾನಿ ಎನ್ನುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.

‘ಮೆಕಲ್‌ ಹ್ಯಾಮರ್‌’ ಎನ್ನುವ ನೃತ್ಯ ತಂಡವನ್ನು ಸ್ಥಾಪಿಸಿ, 5 ವರ್ಷಗಳಲ್ಲಿ  ಸುಮಾರು 16 ಸಾವಿರ ಜನರಿಗೆ ನೃತ್ಯ ಕಲಿಸಿದ್ದಾರೆ ಅವರು

‘ನಗರದ ಬ್ರಿಗೇಡ್‌ ರಸ್ತೆಯಲ್ಲಿ ನೃತ್ಯ ಮಾಡುವಾಗ ತಮಿಳು ಚಲನಚಿತ್ರದ ನಿರ್ದೇಶಕರು ‘ಕಾದಲರ್‌’ ಎನ್ನುವ ತಮಿಳು ಸಿನಿಮಾವೊಂದರ ಓ ಮಾರಿಯಾ ಎನ್ನುವ ಹಾಡಿಗೆ ಕೊರಿಯೋಗ್ರಫಿ ಮಾಡಿಕೊಡುವಂತೆ ಕೇಳಿದರು. ಅಲ್ಲಿಂದ ಪ್ರಾರಂಭವಾಯಿತು ನನ್ನ ಸಿನಿ ಪಯಣ ಎನ್ನುತ್ತಾರೆ ಡ್ಯಾನಿ.

‘ಕೊರಿಯೋಗ್ರಫಿ ಸೇರಿದಂತೆ ತಮಿಳಿನ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹ ನಟನಾಗಿ ಕೆಲಸ ಮಾಡಿದ್ದೀನಿ. ಕಮಲ ಹಾಸನ್‌, ವಿವೇಕ್‌ ಅವರಂತಹ ಖ್ಯಾತ ನಾಮರ ಜೊತೆಗೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದರಿಂದ ಅಲ್ಲಿನ ಜನರ ಅಪಾರ ಪ್ರೀತಿ ಸಂಪಾದಿಸಿದೆ. ಕೊರಿಯೋಗ್ರಾಫರ್‌ ಕಾರ್ಡ್‌ ಇಲ್ಲದ (ಕೊರಿಯೋಗ್ರಫಿ ಮಾಡಲು ಇರಬೇಕಾದ ಪರವಾನಿಗೆ) ಕಾರಣ ಅದನ್ನು ಪಡೆಯಲು ನುರಿತ ನೃತ್ಯ ಕಲಾವಿದರಿಂದ 5 ವರ್ಷ ತರಬೇತಿ ಪಡೆಯಬೇಕಿತ್ತು. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚೂ ಮಾಡಬೇಕಿತ್ತು. ಎರಡೂ ಸಾಧ್ಯವಾಗದಕ್ಕೆ ಸಹನಟನಾಗಿ ಅಭಿನಯಿಸುವುದು ಅನಿವಾರ್ಯವಾಯ್ತು ನನಗೆ. ತಮಿಳು ಚಿತ್ರರಂಗದಲ್ಲಿ  ಎಲ್ಲರೂ ಗುರುತಿಸಲು ಪ್ರಾರಂಭಿಸಿದರು. ಸಾಕಷ್ಟು ಅವಕಾಶಗಳು ಸಿಕ್ಕವು. ಆದರೆ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಕನ್ನಡದಲ್ಲಿ ಏನಾದರು ಮಾಡಬೇಕು ಎನ್ನುವ ಹಂಬಲವಿತ್ತು. ಹೀಗಾಗಿ, 2008ರಲ್ಲಿ ನಗರಕ್ಕೆ ಹಿಂದಿರುಗಿದೆ. ‘ಮೆಕಲ್‌ ಹ್ಯಾಮರ್‌’ ಎನ್ನುವ ಡ್ಯಾನ್ಸ್‌ ಸಂಸ್ಥೆಯ ಮೂಲಕ 7 ಬ್ರಾಂಚ್‌ಗಳನ್ನು ಬೆಂಗಳೂರಿನ ವಿವಿಧ ಕಡೆ ಪ್ರಾರಂಭಿಸಿದ್ದೇನೆ. ಪೊಲೀಸರಿಗೆ, ಅಂಗವಿಕಲರಿಗೆ ಉಚಿತವಾಗಿ ನೃತ್ಯ ಹೇಳಿಕೊಟ್ಟಿದ್ದೇನೆ’ ಎನ್ನುತ್ತಾರೆ ಡ್ಯಾನಿ.

‘ಈಚೆಗೆ ಕನ್ನಡ ಚಿತ್ರರಂಗದಿಂಲೂ ಅವಕಾಶಗಳು ಸಿಕ್ಕವು. ಕನ್ನಡದ ವಾಹಿನಿಯೊಂದರ ಡ್ಯಾನ್ಸಿಂಗ್‌ ಸ್ಟಾರ್‌–1ಕ್ಕೆ ಆಯ್ಕೆಯಾದೆ. ಡ್ಯಾನ್ಸಿಂಗ್‌ ಸ್ಟಾರ್‌ನಲ್ಲಿ ಭಾಗವಹಿಸಿದ ನಂತರದಲ್ಲಿ ಸಿನಿಮಾಗಳಲ್ಲೂ ಅಭಿನಯಿಸಲು ಪ್ರಾರಂಭಿಸಿದೆ. ಕನ್ನಡದ ‘ಗೋವಾ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವೆ. ಘರ್ಷಣೆ , ಪ್ರಭುತ್ವ ಸಿನಿಮಾಗಳಲ್ಲಿ ಸಹಾಯಕ ನಟನಾಗಿ ತೊಡಗಿಸಿಕೊಂಡಿದ್ದು, ನಾಯಕ ನಟ ಚೇತನ್‌ ಚಂದ್ರ ಅವರ ಸಿನಿಮಾವೊಂದರಲ್ಲಿ ಖಳನಟನ ಪಾತ್ರ ಸಿಕ್ಕಿದೆ. ಪುಟ–109 ಎನ್ನುವ ಸಿನಿಮಾದಲ್ಲಿ ಜೆ.ಕೆ ಅವರ ಜೊತೆ ಸಹ ನಟನಾಗಿ, ಥ್ರಿಲ್ಲರ್ ಮಂಜು ಅವರ ಚಿತ್ರವೊಂದರಲ್ಲಿಯು ಅಭಿನಯಿಸುತ್ತಿದ್ದು, ಆ ಸಿನಿಮಾ ಬಿಡುಗಡೆಯಾಗಬೇಕಿದೆ. ಈ ನಡುವೆ ಡ್ಯಾನ್ಸಿಂಗ್‌ ಸ್ಟಾರ್‌–3 ನಿಂದ ಅವಕಾಶ ಬಂತು.’

‘ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಕೊರಿಯೋಗ್ರಾಫರ್‌ ಮತ್ತು ನಿರ್ದೇಶಕ ಹರ್ಷ ಭಾಗವಹಿಸಿದ ಬಾಲ್ಡವಿನ್‌ ಕಾಲೇಜಿನಲ್ಲಿ ನಡೆದ ಡ್ಯಾನ್ಸ್‌ ಸ್ಪರ್ಧೆಯಲ್ಲಿ ನಾನು ತೀರ್ಪುಗಾರನಾಗಿದ್ದೆ. ನಾನಿನ್ನೂ ಹುಟ್ಟುವ ಒಂದೆರೆಡು ತಿಂಗಳ ಮುಂಚೆಯೇ ಎಲ್ಲಿಯಾದರೂ ಹಾಡು ಕೇಳಿದರೆ ಹೊಟ್ಟೆ ಒಳಗೆ ನಾನು ಒದ್ದಾಡುವ ಅನುಭವ ಆಗುತ್ತಿತ್ತು ಎಂದು ಅಮ್ಮ ನೆನೆಸಿಕೊಳ್ಳುತ್ತಾರೆ.’

‘ಚರ್ಚ್‌ನ ಪ್ರಾರ್ಥನೆಯ ಹಾಡು ಕೇಳಿದಾಗೆಲ್ಲ ನೀನು ಚಲಿಸುತ್ತಿದ್ದೆ. ಹೊಟ್ಟೆ ಒಳಗೆ ಡ್ಯಾನ್ಸ್ ಮಾಡಿದವನು ನೀನು ಎಂದು ಅಮ್ಮ ಕಿಚಾಯಿಸುತ್ತಾರೆ. ಆ ಗುಣವೇ ನನಗೆ ದೇವರು ಕೊಟ್ಟ ಉಡುಗೊರೆ’ ಎನ್ನುತ್ತಾರೆ ಡ್ಯಾನಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT