ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ‘ಜನಶಕ್ತಿ ಉತ್ಸವ’ದಲ್ಲಿ ‘ಅಮೃತ ಕರ್ನಾಟಕ’ ಬಿಡುಗಡೆ

Last Updated 18 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜನಶಕ್ತಿ ಮಾಸಪತ್ರಿಕೆ ’ಸೌಹಾರ್ದ ಸಮೃದ್ಧ ಸಮಬಾಳಿನ ಕರ್ನಾಟಕ’ ಎಂಬ ಘೋಷಣೆಯಡಿ ಆಯೋಜಿಸಿರುವ ‘ಜನಶಕ್ತಿ ಉತ್ಸವ’ ಇದೇ 21ರಂದು ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಕೇರಳದ ಸಂಸದ ಮತ್ತು ಪತ್ರಿಕೋದ್ಯಮಿ ಜಾನ್ ಬ್ರಿಟ್ಟಾಸ್ ಉದ್ಘಾಟಿಸುವರು. ಜವಾಹರಲಾಲ್ ನೆಹರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಆಶಯ ನುಡಿಗಳನ್ನಾಡುವರು. ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರ ಪೂಜಾರಿ ಮತ್ತು ಸಂಶೋಧಕಿ ಬಿ.ಎಂ.ರೋಹಿಣಿ ಕ್ರಮವಾಗಿ ಆರ್ಥಿಕತೆ ಮತ್ತು ಮಹಿಳಾ ಅಭಿವೃದ್ಧಿ ಸ್ಥಿತಿಗತಿಗಳ ಕುರಿತು ಉಪನ್ಯಾಸ ನೀಡುವರು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಮತ್ತು ಸಮುದಾಯ ಕರ್ನಾಟಕದ ಉಪಾಧ್ಯಕ್ಷ ವಾಸುದೇವ ಉಚ್ಚಿಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನಶಕ್ತಿ ಸಂಪಾದಕ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜನಶಕ್ತಿಯ ವಿಶೇಷಾಂಕ ‘ಅಮೃತ ಕರ್ನಾಟಕ’ವನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

‘ಜನಶಕ್ತಿಯು ವಿಶಿಷ್ಟ ಸಂದರ್ಭಗಳಲ್ಲಿ ವಿಶೇಷಾಂಕಗಳನ್ನು ಹೊರತರುತ್ತಿದೆ. ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ. ದಕ್ಷಿಣ ಕನ್ನಡದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವ ಕಾರಣ ಜನಶಕ್ತಿ ಉತ್ಸವವನ್ನು ಇಲ್ಲಿ ಆಯೋಜಿಸಲು ನಿರ್ಧರಿಸಿರುವುದು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟರು.

‘1966ರಲ್ಲಿ ಐಕ್ಯರಂಗ ಎಂಬ ಹೆಸರಿನಲ್ಲಿ ಆರಂಭವಾದ ಪತ್ರಿಕೆ 2006ರಿಂದ ಜನಶಕ್ತಿ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ. ಕರ್ನಾಟಕದ ಜನರ ಬದುಕಿನಲ್ಲಿ ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ ಆಗಿರುವ ಬೆಳವಣಿಗೆ, ಬದಲಾವಣೆ ಮತ್ತು ಜನಾಂದೋಲನಗಳು ಅದಕ್ಕೆ ಸ್ಪಂದಿಸಿದ ವಿಧಾನಗಳ ನೋಟ ಜನಶಕ್ತಿಯ ವಿಶೇಷಾಂಕದಲ್ಲಿದೆ. ಭವಿಷ್ಯದ ಬದಲಾವಣೆಗಳು ಹಾಗೂ ಅವುಗಳಿಗೆ ಜನಚಳವಳಿಗಳು ಹೇಗೆ ಸ್ಪಂದಿಸಬೇಕು ಎಂಬುದರ ವಿಶ್ಲೇಷಣೆಯೂ ಇದೆ’ ಎಂದು ಅವರು ತಿಳಿಸಿದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು, ಕೋಶಾಧಿಕಾರಿ ಕೃಷ್ಣಪ್ಪ ಸಾಲ್ಯಾನ್, ಗೌರವ ಸಲಹೆಗಾರರಾದ ಬಿ.ಎನ್‌.ದೇವಾಡಿಗ ಮತ್ತು ಶ್ಯಾಮಸುಂದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT