ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನತಾ ದರ್ಶನ ಕಾರ್ಯಕ್ರಮವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ 25ರಂದು ಬೆಳಿಗ್ಗೆ 10ರಿಂದ ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ನಾನು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳೂ ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಅಂದು ಜನರಿಂದ ಕಾರ್ಯಕ್ರಮದಲ್ಲೇ ಹವಾಲು ಸ್ವೀಕರಿಸಲಿದ್ದೇವೆ. ಪ್ರತಿ ಮನವಿಗೂ ನಿರ್ದಿಷ್ಟ ಸಂಖ್ಯೆಯನ್ನು ನೀಡಿ, ಅದು ವಿಲೇವಾರಿ ಆಗುವವರೆಗೂ ಅದರ ಬಗ್ಗೆ ನಿಗಾ ವಹಿಸುತ್ತೇವೆ’ ಎಂದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಯೋಗಾಲಯ ತಂತ್ರಜ್ಞ, ಫಾರ್ಮಸಿಸ್ಟ್‌ನಂತಹ 500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರವೇ ಆದೇಶ ನೀಡಲಾಗುತ್ತದೆ. ಅವರಿಗೆ ಈ ಹಿಂದೆ ತಿಂಗಳಿಗೆ ₹ 12ಸಾವಿರ ನೀಡಲಾಗುತ್ತಿತ್ತು. ಕನಿಷ್ಠ ವೇತನದಷ್ಟು ಮೊತ್ತವಾದರೂ ಅವರಿಗೆ ಸಿಗಬೇಕೆಂಬ ಕಾರಣಕ್ಕೆ ತಿಂಗಳಿಗೆ ₹16,500 ನೀರಲು ನಿರ್ಧರಿಸಿದ್ದೇವೆ. ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಾತಿಗೂ ಕ್ರಮವಹಿಸಲಾಗಿದೆ’ ಎಂದರು.
‘ಡಿ ಗುಂಪಿನ ಹುದ್ದೆಗಳು ಖಾಲಿ ಇದ್ದರೆ, ಮಂಜೂರಾದ ಒಟ್ಟು ಹುದ್ದೆಗಳ ಶೇ 75ರಷ್ಟನ್ನು ಮಾತ್ರ ಸ್ಥಳೀಯ ಮಟ್ಟದಲ್ಲೇ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡುವುದಕ್ಕೆ ಅವಕಾಶ ಇದೆ. ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ತೊಡಕಾಗಬಾರದು ಎಂಬ ಕಾರಣಕ್ಕೆ, ಡಿ–ಗುಂಪಿನಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನೂ (ಶೇ 100ರಷ್ಟು) ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.