ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾ.ರಾ.ಮಹೇಶ್‌ ಹ್ಯಾಟ್ರಿಕ್‌ ಸಂಭ್ರಮ

ಕೆ.ಆರ್‌.ನಗರ: ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್‌ನ ರವಿಶಂಕರ್‌
Last Updated 16 ಮೇ 2018, 8:24 IST
ಅಕ್ಷರ ಗಾತ್ರ

ಮೈಸೂರು: ಕೊನೆಯ ಸುತ್ತಿನವರೆಗೂ ಕುತೂಹಲ ಕೆರಳಿಸಿದ ಹೋರಾಟದಲ್ಲಿ ಜೆಡಿಎಸ್‌ನ ಸಾ.ರಾ.ಮಹೇಶ್‌ ಅವರು ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್‌ನ ಡಿ.ರವಿಶಂಕರ್‌ ವಿರುದ್ಧ ಗೆಲುವು ಪಡೆದಿದ್ದಾರೆ. 2008 ಮತ್ತು 2013ರಲ್ಲಿ ಗೆದ್ದಿದ್ದ ಅವರು ಈ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು.

ಸಾ.ರಾ.ಮಹೇಶ್‌ ಅವರು ಎಲ್ಲ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. 15ನೇ ಸುತ್ತಿನ ಬಳಿಕ ಮುನ್ನಡೆಯ ಅಂತರ ಕಡಿಮೆಯಾಗತೊಡಗಿತು. 17ನೇ ಸುತ್ತಿನ ನಂತರ 1,256 ಮತಗಳ ಮುನ್ನಡೆಯಲ್ಲಿದ್ದರು.

ಕೊನೆಯ ಸುತ್ತು ಹಾಗೂ ಅಂಚೆ ಮತಗಳ ಎಣಿಕೆಯ ಬಳಿಕ 1,779 ಮತಗಳ ಗೆಲುವು ಪಡೆದರು. ಅಂಚೆ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಈ ಕ್ಷೇತ್ರದ ಫಲಿತಾಂಶ ಹೊರಬೀಳುವ ವೇಳೆಗೆ ಸಂಜೆ 5 ಗಂಟೆ ಆಗಿತ್ತು.

ಈ ಕ್ಷೇತ್ರದಲ್ಲೂ ಬಿಜೆಪಿ–ಜೆಡಿಎಸ್‌ ಒಳಒಪ್ಪಂದದ ಆರೋಪ ಕೇಳಿಬಂದಿತ್ತು. ಬಿಜೆಪಿಯು ಶ್ವೇತಾ ಗೋಪಾಲ ಅವರನ್ನು ಕಣಕ್ಕಿಳಿಸಿತ್ತು. ಅವರಿಗೆ ಕೇವಲ 2,716 ಮತಗಳು ಮಾತ್ರ ಲಭಿಸಿವೆ. ಕ್ಷೇತ್ರದಲ್ಲಿ ಬಿಜೆಪಿಗೆ ಕಡಿಮೆ ಮತ ಬಿದ್ದಷ್ಟು ಜೆಡಿಎಸ್‌ಗೆ ನೆರವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಅದು ನಿಜವಾಗಿದೆ.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಲೇ ಬಂದಿದೆ. ಈ ಬಾರಿ ಅದು ‘ಕ್ಲೈಮ್ಯಾಕ್ಸ್‌’ ಹಂತಕ್ಕೆ ತಲುಪಿದ್ದು ವಿಶೇಷ.

ಈ ಕ್ಷೇತ್ರದಲ್ಲಿ ಕುರುಬರು, ಒಕ್ಕಲಿಗರದ್ದೇ ಪ್ರಾಬಲ್ಯ. ಒಕ್ಕಲಿಗರು ಈ ಬಾರಿಯೂ ಸಾ.ರಾ.ಮಹೇಶ್‌ ಅವರಿಗೆ ಬೆಂಬಲ ನೀಡಿರುವುದು ಸ್ಪಷ್ಟ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ರವಿಶಂಕರ್‌ ಅವರು ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು. ರವಿಶಂಕರ್‌ ಅವರ ತಂದೆ ದೊಡ್ಡಸ್ವಾಮಿಗೌಡ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ಅನುಕಂಪದ ನೆರವಿನಿಂದ ಗೆಲುವಿಗೆ ಪ್ರಯತ್ನಿಸಿದ್ದರೂ ಅಲ್ಪ ಅಂತರದಿಂದ ಎಡವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT