ಸಹಜ ಸ್ಥಿತಿಗೆ ಮರಳಿದ ಜೋಡುಪಾಲ

7
ತಗ್ಗಿದ ಮಳೆಯ ಅಬ್ಬರ; ಕೆಸರು ಮಿಶ್ರಿತ ಪ್ರವಾಹ ಇಳಿಮುಖ

ಸಹಜ ಸ್ಥಿತಿಗೆ ಮರಳಿದ ಜೋಡುಪಾಲ

Published:
Updated:

ಸುಳ್ಯ: ಜೋಡುಪಾಲದಲ್ಲಿ ಸೋಮ ವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣ ಕಡಿಮೆ ಆಗಿದೆ. ಭಾನುವಾರ ಇದ್ದ ರುದ್ರ ಸ್ವರೂಪದ ಹವಾಮಾನ ಸಹಜ ಸ್ಥಿತಿಗೆ ಮರಳುತ್ತಿದೆ.

‘ಸೋಮವಾರ ಸಂಪಾಜೆ ಭಾಗದ ಮೂರು ನಿರಾಶ್ರಿತರ ಕೇಂದ್ರಗಳಿಗೂ ಜೋಡುಪಾಲ ಕಡೆಯಿಂದ ಯಾರನ್ನೂ ಕರೆತಂದಿಲ್ಲ. ಜೋಡುಪಾಲದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ಸಂಪಾಜೆ ಗ್ರಾಮ ಪಂಚಾಯತಿ ಸದಸ್ಯ ಬಾಲಚಂದ್ರ ಕಳಗಿ ತಿಳಿಸಿದ್ದಾರೆ.

ಸೋಮವಾರದವರೆಗೂ ಪಯಸ್ವಿನಿ ನದಿಯಲ್ಲಿ ತೀರಾ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿತ್ತು. ಆದರೆ ಮಂಗಳವಾರದಿಂದ ಮಣ್ಣು ಮಿಶ್ರಿತ ನೀರು ಪ್ರಮಾಣ ಕಡಿಮೆ ಆಗಿದೆ.

ಸಂಪೂರ್ಣ ಬಂದ್: ‘ಜೋಡುಪಾಲ ಕಡೆಗೆ ಹೋಗುವುದಕ್ಕೆ ಪೊಲೀಸರು ಸಂಪೂರ್ಣ ನಿಷೇಧ ಮಾಡಿದ್ದಾರೆ. ಯಾರನ್ನೂ ಅ ಕಡೆಗೆ ಬಿಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿ ಮತ್ತು ಪೊಲೀಸರು ಮಾತ್ರ ಹೋಗುತ್ತಿದ್ದಾರೆ. ಈಗಾಗಲೇ ಅ ಭಾಗದಲ್ಲಿ ತೊಂದರೆ ಆದವರ ಮತ್ತು ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಅಲ್ಲದೆ ಅಲ್ಲಿ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ದಳ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ.  ಸೆಲ್ಪಿ ತೆಗೆಯಲು, ಅಲ್ಲಿನ ಪರಿಸ್ಥಿತಿ ನೋಡಿ ಬರಲು ಅಷ್ಟೇ ಯುವಕರ ತಂಡ ಹೋಗುತ್ತಿದೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಡಳಿತದ ಈ ನಿರ್ಧಾರ ಮಾಡಿದೆ‘ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳವು ಪ್ರಕರಣ: ಜೋಡುಪಾಲ ಭಾಗದಿಂದ ಈ ಕಡೆಗೆ ಸಾವಿರಾರು ಮಂದಿ ಮಕ್ಕಳು, ವೃದ್ದರು ದಿಕ್ಕು ತೋಚದೇ ಇದ್ದಾರೆ. ಆ ವಿಘ್ನ ಸಂತೋಷಿಗಳು ಜೋಡುಪಾಲದಲ್ಲಿ ಸಹಜ ಸ್ಥಿತಿಯಲ್ಲಿರುವ ಮನೆಯ ಹೆಂಚು ತೆಗೆದು, ಬಾಗಿಲು ಮುರಿದು ಮನೆಯನ್ನೇ ದೋಚುವರು ಇದ್ದಾರೆ. ಈ ಬಗ್ಗೆ ನಾಲ್ಕು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.  ಚಿನ್ನಾಭರಣ, ನಗದು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಆರೋಗ್ಯ ಸಮಸ್ಯೆ ಇಲ್ಲ: ನಿರಾಶ್ರಿತ ಕೇಂದ್ರದಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ. ರಕ್ತದೊತ್ತಡ, ಮಧುಮೇಹ ಇದ್ದವರಿಗೂ ನಮ್ಮ ಸರ್ಕಾರಿ ಪೂರೈಕೆಯ ಮಾತ್ರಗಳು ಅಲ್ಲದೆ ನಿರಾಶ್ರಿತರು ಕೇಳಿರುವ ಬ್ರಾಂಡೆಡ್ ಮಾತ್ರೆಗಳನ್ನು ಖಾಸಗಿ ಮೆಡಿಕಲ್‌ಗಳಿಂದ ತರಿಸಿದ್ದೇವೆ.  ಉಚಿತವಾಗಿ ನೀಡಿದ್ದಾರೆ. ಪ್ರತಿ ದಿನವೂ ಎಲ್ಲಾ ನಿರಾಶ್ರಿತರನ್ನು ತಪಾಸಣೆ ಮಾಡುತ್ತಿದ್ದೇವೆ. ಸಣ್ಣ ಪುಟ್ಟ ಶೀತ ನೆಗಡಿ ಕೆಲವು ಮಕ್ಕಳಲ್ಲಿ ಇದೆ. ತಾಲ್ಲೂಕಿನ ಎಲ್ಲಾ ವೈದ್ಯರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಮುಖ್ಯವಾಗಿ ಕೆವಿಜಿ ಆಸ್ಪತ್ರೆಯ ಸಹಕಾರ ತುಂಬಾ ಇದೆ ಎಂದು ಸುಳ್ಯ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾಗ: ಜಲಪ್ರಳಯ, ಭೂಕುಸಿತದ ನಿವಾರಣೆಗಾಗಿ ಸುಳ್ಯದ ಶ್ರೀ ಕೇಶವಕೃಪಾದ ಪುರೋಹಿತ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ವರುಣ ಮಹಾಯಾಗಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಸೋಮವಾರ ನಡೆಯಿತು.

ಮೃತ ದೇಹ ಪತ್ತೆ ಅಂತ್ಯ ಸಂಸ್ಕಾರ

ಜೋಡುಪಾಲದಲ್ಲಿ ಮನೆ ಕುಸಿದು ಮೃತಪಟ್ಟ ಸುಳ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಬಸಪ್ಪ ಮತ್ತು ಅವರ ಮಗಳು ಮೋನಿಶಾ ಅವರ ಶವ ಭಾನುವಾರ ಪತ್ತೆಯಾಗಿದೆ, ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಸುಳ್ಯದ ಕೇರ್ಪಳ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಸುಳ್ಯ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೀಲಾವತಿ ಮಾಧವ, ಸದಸ್ಯ ಎನ್.ಎ.ರಾಮಚಂದ್ರ, ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಇದ್ದರು.

‘ದಾಖಲೆಗಳಿಗೆ ಮನವಿ’

‘ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಅ ಮನೆ ಮಂದಿಯಲ್ಲಿ ಯಾವುದೇ ದಾಖಲೆಗಳು ಇಲ್ಲ. ಮನೆಗಳಲ್ಲೇ ದಾಖಲೆ ಪತ್ರ ಇರಬಹುದು. ಇಂತಹ ಅನೇಕ ಮಂದಿ ಮನೆ ಹೋದರೂ ಹೋಗಲಿ, ದಾಖಲೆ ಪತ್ರ ಸಿಕ್ಕಿದರೆ ಸಾಕು ಎನ್ನುತ್ತಿದ್ದಾರೆ. ಆದರೆ ಪೊಲೀಸರು ಆ ಕಡೆಗೆ ಯಾರನ್ನೂ ಬಿಡದೇ ಇರುವುದರಿಂದ ನಿರಾಶ್ರಿತರು ಚಿಂತೆಗೆ ಒಳಗಾಗಿದ್ದಾರೆ. ದಾಖಲೆ ತರುತ್ತೇವೆ ಎಂದು ಎಷ್ಟೇ ಹೇಳಿದರೂ ಪೊಲೀಸರು ಅವರಿಗೆ ಸಹಕಾರ ನೀಡುತ್ತಿಲ್ಲ. ‘ನನ್ನ ಮನೆ ಅರ್ಧ ಬಿದ್ದ ಸ್ಥಿತಿಯಲ್ಲಿದೆ. ಇದರಲ್ಲಿ ಮಗಳ ಮಾರ್ಕ್ಸ್‌ ಕಾರ್ಡ್ ಇತರ  ದಾಖಲೆ ಪತ್ರಗಳು ಇವೆ. ಮನೆ ಹೋದರೆ ಹೋಗಲಿ. ಒಬ್ಬಳೇ ಮಗಳು.  ಒಂದು ಉದ್ಯೋಗ ಮಾಡಿಯಾದರೂ ಬದುಕಬಹುದು. ಅದಕ್ಕಾಗಿ ಅದಾದರೂ ತೆಗೆದುಕೊಂಡು ಬರುತ್ತೇವೆ ಎಂದು ಪೊಲೀಸರಲ್ಲಿ ವಿನಂತಿಸಿದರೂ ಅವರು ಬಿಡುತ್ತಿಲ್ಲ’ ಎಂದು ಜೋಡುಪಾಲ ಹೊಸಮನೆಯ ವಸಂತಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !