ಜೋಡುಪಾಲ: ರಸ್ತೆ ದುರಸ್ತಿ ಆರಂಭ

7
ಸಂತ್ರಸ್ತರು ಮರಳಿ ಮನೆಗೆ ಚಿಂತನೆ

ಜೋಡುಪಾಲ: ರಸ್ತೆ ದುರಸ್ತಿ ಆರಂಭ

Published:
Updated:
Deccan Herald

ಸುಳ್ಯ: ಜೋಡುಪಾಲ ಭೂಕುಸಿತ ಪ್ರದೇಶದಿಂದ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಇದೀಗ ಮಾಣಿ-ಮೈಸೂರು ಹೆದ್ದಾರಿಯ ಸಾಮಾನ್ಯ ಸಂಚಾರಕ್ಕೆ ವ್ಯವಸ್ಥೆ ಮಾಡುವುದಕ್ಕೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ.

‘ಯಾವುದೇ ಸಮೀಕ್ಷೆ, ಪರಿಹಾರ ಕಾರ್ಯಕ್ಕೂ ಮುಂದಡಿ ಇಡಬೇಕಾದರೆ ಕನಿಷ್ಠ ಕಚ್ಛಾ ರಸ್ತೆಯಾದರೂ ಬೇಕು.  ದೊಡ್ಡ ಪ್ರಮಾಣದ ಮರ, ಮಣ್ಣು ತೆರವು ಕೆಲಸ ಮಾಡಲಾಗುತ್ತದೆ. 6 ಜೆಸಿಬಿ ಯಂತ್ರಗಳ ಮೂಲಕ ರಸ್ತೆಯಲ್ಲಿನ ಕೆಸರು, ರಾಶಿ ಬಿದ್ದಿರುವ ಮರದ ರಾಶಿಗಳನ್ನು ತೆರವುಗೊಳಿಸಲಾಗುತ್ತಿದೆ. ನೀರು ಹರಿದು ರಸ್ತೆ ನಡುವೆ ತೋಡಾಗಿರುವ ಜಾಗಕ್ಕೆ ಮೋರಿ ಅಳವಡಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿವರಿಸಿದರು.

ಪತ್ತೆಯಾಗದ ಇಬ್ಬರು: ಸ್ಥಳದಲ್ಲಿ ಎನ್‌ಡಿಆರ್‌ಎಫ್, ಪೊಲೀಸ್, ಗೃಹರಕ್ಷಕ ದಳದ ಸಿಬಂದಿಗಳು ಇದ್ದು,  ಪತ್ತೆ ಆಗದೇ ಇರುವ ಗೌರಮ್ಮ, ಮಂಜುಳಾ ಅವರ ಪತ್ತೆಗೆ ಶೋಧ ಮುಂದುವರಿಸಿದ್ದಾರೆ. ಇವರಿಬ್ಬರೂ ಕೂಡಾ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಣ್ಣಂಗೇರಿ ಬಳಿ ಒಬ್ಬ ನಾಪತ್ತೆ ಆಗಿರುವ ಸುದ್ದಿ ಹಬ್ಬಿದ್ದರೂ ಖಚಿತವಾಗಿಲ್ಲ. ಅಲ್ಲಿ ನಾಪತ್ತೆ ಆಗಿರುವ ಕುರಿತು ಕಂದಾಯ ಇಲಾಖೆ ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ. ಜೋಡುಪಾಲದಲ್ಲಿ ಇಬ್ಬರು ನಾಪತ್ತೆ ಆಗಿರುವುದು ಮಾತ್ರ ಅಧಿಕೃತ ಎಂದು ಪರಿಹಾರ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಕರುಣೆ ತೋರಿದ ಜಿಲ್ಲಾಧಿಕಾರಿ: ಅರಂತೋಡು, ಕಲ್ಲುಗುಂಡಿ, ಸಂಪಾಜೆ ಪರಿಹಾರ ಕೇಂದ್ರಗಳಿಂದ ಹಲವು ಕುಟುಂಬಗಳು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನು ಕೆಲ ಕುಟುಂಬಗಳು ಸಂಬಂಧಿಕರ ಮನೆಯಿಂದ ಮರಳಿ ಕೇಂದ್ರಕ್ಕೆ ಬಂದಿದ್ದಾರೆ. ಇನ್ನೂ ಕೆಲವು ಕುಟುಂಬಗಳು ಮನೆಗೆ ಭೇಟಿ ನೀಡಿ ಅಲ್ಲಿ ಸಾಕು ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ಕೋರಿದ ಕಾರಣ ಜಿಲ್ಲಾಧಿಕಾರಿ ಅವರ ಒಪ್ಪಿಗೆ ಮೇರೆಗೆ ಪೊಲೀಸ್ ಜೀಪಿನಲ್ಲಿ ಕಳುಹಿಸಿಕೊಡಲಾಗಿತ್ತು. ದೇವರ ಕೊಲ್ಲಿ ಬಳಿಯ ಸಂತ್ರಸ್ತರ ಮನೆಯೊಂದರಲ್ಲಿ ಆಹಾರ ಇಲ್ಲದೆ ದನ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಿಕೊಡುವಂತೆ ಸಂತ್ರಸ್ತರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಲ್ಲಿ ವಿನಂತಿ ಮಾಡಿಕೊಂಡ ಮೇರೆಗೆ ಸ್ಥಳಕ್ಕೆ ತೆರಳು ಅವಕಾಶ ಆಗಿದೆ. ಅ ಕಡೆ ತೆರಲುವುದಕ್ಕೆ ಸಂಪೂರ್ಣ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಪ್ರಾಣಿಗಳ ಮೇಲೆ ಕರುಣೆ ತೋರಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರಕಾಶ್ ಜೋಡುಪಾಲ ತಿಳಿಸಿದ್ದಾರೆ.

ಮರಳಿ ಮನೆಗೆ ಚಿಂತನೆ: ಈಗಾಗಲೇ ನಿರಾಶ್ರಿತ ಕೇಂದ್ರಗಳಿದ್ದು ಅ ಕಡೆ ವಾಸ ಇರುವ ಕೆಲ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗಿರುವ ಕಾರಣ ಜಿಲ್ಲಾಡಳಿತ ಅವರನ್ನು ಮರಳಿ ಮನೆಗಳಿಗೆ ಕಳುಹಿಸುವ ಚಿಂತನೆ ನಡೆಸಿದೆ. ಈ ಬಗ್ಗೆ ಸಂಬಂಧಪಟ್ಟರ ಜತೆ ಚರ್ಚಿಸಿ, ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಸಂಪಾಜೆ, ಕೊಯನಾಡು ಪರಿಸರದಲ್ಲಿ ಮಳೆ ಅಬ್ಬರ ಇಳಿಮುಖಗೊಂಡಿರುವ ಕಾರಣದಿಂದ ಮನೆಗೆ ಮರಳಲು ಅವಕಾಶ ನೀಡಬಹುದು ಎಂಬ ಅಭಿಪ್ರಾಯ ನಿರಾಶ್ರಿತರಿಂದ ಕೇಳಿ ಬಂದಿರುವ ಕಾರಣ, ಜಿಲ್ಲಾಡಳಿತ ಈ ಬಗ್ಗೆ ಚಿಂತನೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !