ಸೋಮವಾರ, ನವೆಂಬರ್ 18, 2019
25 °C
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಸುವರ್ಣ ಮಹೋತ್ಸವ

‘ನಡೆದು ಬಂದ ದಾರಿ ನೋಡಿ’

Published:
Updated:
Prajavani

ಮಂಗಳೂರು: ‘ನಾವು ನಡೆದು ಬಂದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಬೇಕು. ಆಗ ಭವಿಷ್ಯದ ಕುರಿತು ಸುಭದ್ರ ಹೆಜ್ಜೆ ಇಡಲು ಸಾಧ್ಯ. ಇಂತಹ ಕೆಲಸವನ್ನು ಜೋಗಿ ಸಮಾಜ ಸುಧಾರಕ ಸಂಘ ಮಾಡುತ್ತಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಇಲ್ಲಿನ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಭಾನುವಾರ ನಡೆದ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಬಹಳಷ್ಟು ಕಷ್ಟಗಳಿದ್ದ ಕಾಲದಲ್ಲೇ ಸಮಾಜವನ್ನು ಸಂಘಟನೆ ಮಾಡಿ, ಬುನಾದಿ ಹಾಕಿದ ಮುಖಂಡರ ಶ್ರಮವನ್ನು ನಾವು ಸ್ಮರಿಸಬೇಕು. ಮುಂದಿನ ಭವಿಷ್ಯಕ್ಕಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದರು. 

ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ರಾಜಲಕ್ಷ್ಮೀ ಮಾತನಾಡಿ, ‘ಸಮಾಜದಲ್ಲಿ ಸಾಧಕರ ಸಂಖ್ಯೆ ಹೆಚ್ಚಾಗಬೇಕು. ಅದಕ್ಕಾಗಿ ಸಂಘಟಿತರಾಗಿ ಪ್ರೋತ್ಸಾಹ ನೀಡುವುದು ಅಗತ್ಯ’ ಎಂದರು.

‘ಹಿಂದೆ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆ ಇತ್ತು. ಈಗ ಪದವಿ, ಸ್ನಾತಕೋತ್ತರ ಪದವಿ ಪಡೆಯುತ್ತಾರೆ.  ಆ ಬಳಿಕ ಉದ್ಯೋಗಕ್ಕೆ ಸೀಮಿತಗೊಳ್ಳುತ್ತಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೂಲಕ ಇನ್ನಷ್ಟು ಉನ್ನತ ಸ್ಥಾನಕ್ಕೆ ಯುವಜನತೆ ಹೋಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಸಮಾಜದಿಂದ ನಡೆಯಬೇಕಾಗಿದೆ’ ಎಂದರು.

ಎಆರ್‌ಟಿಒ ಕೆ.ಪಿ.ಗಂಗಾಧರ್ ಮಾತನಾಡಿ, ‘ಯೋಗ ಎಂಬುದು ನಮಗೆ ಪ್ರಕೃತಿ ಸಹಜವಾಗಿ ಬಂದರೆ, ‘ಯೋಗ್ಯತೆ’ಯು ನಾವೇ ರೂಪಿಸಿದ್ದಾಗಿದೆ. ಯೋಗ ಏನೇ ಇರಲಿ, ಯೋಗ್ಯತೆ ಮೂಲಕ ಬದುಕಿನಲ್ಲಿ ಅಭಿವೃದ್ಧಿ ಹೊಂದಬೇಕು. ಸಂಘಟನೆಯ ಮೂಲಕ ಸಾಮಾಜಿಕವಾಗಿಯೂ ಬಲಿಷ್ಠವಾಗಬೇಕು’ ಎಂದರು. 

‘ಸಮಾಜದಿಂದ ಉನ್ನತ ನಾಯಕರು ಬರಬೇಕು. ಆಗ, ನಮ್ಮದೇ ಸಮಾಜದ ಶಾಸಕರು, ಸಂಸದರು, ಸಚಿವರನ್ನು ನೀಡಲು ಸಾಧ್ಯವಿದೆ. ಅಂತಹ ವ್ಯಕ್ತಿತ್ವ ವಿಕಸನದ ಮಾರ್ಗದರ್ಶನವು ನಮ್ಮ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಸುವರ್ಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಸಂಘದ ಅಧ್ಯಕ್ಷ ಕಿರಣ್‌ ಕುಮಾರ್ ಜೋಗಿ, ಶಂಕರಪುರದ ಸಾಯಿ ಈಶ್ವರ್ ಗುರೂಜಿ, ವಕೀಲ ಕೆ. ಪ್ರೇಮನಾಥ, ಉದ್ಯಮಿ ಶಿವಾಜಿ ಡಿ. ಮಧೂರ್‌ಕರ್, ಅಮಿತಾ ಸಂಜೀವ, ಕೇಶವನಾಥ, ಸುರೇಶ್‌ ಕುಮಾರ್ ಇದ್ದರು. 

 

ಪ್ರತಿಕ್ರಿಯಿಸಿ (+)