ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವನ್ನೇ ಮುಗಿಸುವ ಪ್ರಯತ್ನದ ಎಚ್ಚರವಿರಲಿ: ಹೈಕೋರ್ಟ್‌ ನ್ಯಾಯಮೂರ್ತಿ

ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಕಿವಿಮಾತು
Last Updated 25 ನವೆಂಬರ್ 2022, 16:27 IST
ಅಕ್ಷರ ಗಾತ್ರ

ಮಂಗಳೂರು: ‘ಸಂವಿಧಾನವನ್ನು ಮುಗಿಸುವ ಪ್ರಯತ್ನ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಸಂವಿಧಾನ ತನ್ನಷ್ಟಕ್ಕೆ ತಾನು ರಕ್ಷಿಸಿಕೊಳ್ಳುತ್ತದೆ ಎಂಬ ಭ್ರಮೆಯಲ್ಲಿ ನಾವು ಇರಬಾರದು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹೇಳಿದರು.

‘ಸಂವಿಧಾನವು ಎದುರಿಸಬಹುದಾದ ತೊಂದರೆಗಳ ಪರಿಚಯ ನಮಗಿರಬೇಕು. ಸಂವಿಧಾನವನ್ನು ನ್ಯಾಯಾಲಯ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯನ್ನೂ ‌ಇಟ್ಟುಕೊಳ್ಳಬೇಡಿ. ಹೈಕೋರ್ಟ್‌ ನ್ಯಾಯಾಧೀಶನಾಗಿಯೇ ನಾನು ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು.

ಮಂಗಳೂರು ವಕೀಲರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಏನೆಲ್ಲ ಅಡ್ಡಿ ಆತಂಕಗಳನ್ನು ಎದುರಿಸಿದೆ ಎಂಬುದನ್ನು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು, ಕೇಶವ ಸಿಂಗ್‌ ಪ್ರಕರಣದಿಂದ ಹಿಡಿದು, ಶಂಶೇರ್‌ ಸಿಂಗ್‌ ಪ್ರಕರಣ, ಕೇಶವಾನಂದ ಭಾರತಿ ಪ್ರಕರಣಗಳ ಉದಾಹರಣೆಗಳನ್ನು ನೀಡಿದರು.

’ಕೇಶವ ಸಿಂಗ್ ಪ್ರಕರಣ, ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದಿಟ್ಟ ತೀರ್ಪು ನೀಡಿದ ಬಳಿಕವೂ ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನಗಳು ನಡೆದಿವೆ. ತುರ್ತು ಪರಿಸ್ಥಿತಿ ಜಾರಿಯಾದಾಗ ಎಲ್ಲ ರಾಜಕೀಯ ನಾಯಕರು ಕಂಬಿಗಳ ಹಿಂದಿದ್ದರು. ಈ ವಿಚಾರ ರಾಷ್ಟ್ರಪತಿಗೇ ಗೊತ್ತಿರಲಿಲ್ಲ. ಜನರಿಗೆ ಸಂವಿಧಾನವು ನೀಡಿದ್ದ ಹಕ್ಕು ಮೊಟಕುಗೊಳಿಸುವ ಪ್ರಯತ್ನ ನಡೆದಾಗಲೆಲ್ಲ ಸುಪ್ರೀಂ ಕೋರ್ಟ್‌ ಅವುಗಳನ್ನು ರಕ್ಷಿಸಿದೆ. ಅದರು ಇನ್ನು ಇಂತಹದ್ದು ಮುಂದೆ ನಡೆಯದು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ’ ಎಂದರು. ಎಂದರು.

‘ಸಂವಿಧಾನವನ್ನು ರಾಜಕಾರಣಿಗಳು ರಕ್ಷಿಸುತ್ತಾರೆ, ಸರ್ಕಾರ ರಕ್ಷಿಸುತ್ತದೆ, ಅಧಿಕಾರಗಳು ರಕ್ಷಿಸುತ್ತದೆ ಎಂಬ ಭ್ರಮೆಯೂ ಬೇಡ. ನಾಗರಿಕರು ಎಚ್ಚರದಿಂದ ಇದ್ದರೆ ಮಾತ್ರ ಸಂವಿಧಾನ ಉಳಿಯಬಲ್ಲುದು. ಇಲ್ಲದಿದ್ದರೆ, ಇದರ ಬಗ್ಗೆ ಮನಬಂದಂತೆ ವ್ಯಾಖ್ಯಾನ ನೀಡಿ ಏನಾದರೂ ಒಂದು ಮಾಡುತ್ತಾರೆ. ಕೊನೆಗೆ ಇದು ತಾಕಲಾಟಕ್ಕೆ ಹೋಗಿ ನಿಲ್ಲುತ್ತದೆ’ ಎಂದು ಎಚ್ಚರಿಸಿದರು.

‘ಅಧಿಕಾರದಲ್ಲಿರುವ ಪಕ್ಷದ ತುಂಬಾ ಪ್ರಬಲವಾಗಿದ್ದರೆ, ಅವರಿಗೆ ಬೇಕಾದಂತೆ ಸಂವಿಧಾನದ ವ್ಯಾಖ್ಯಾನ ನಡೆಯುತ್ತದೆ. ಅದು ಇಂದಿನವರು ಇರಬಹುದು, ಹಿಂದಿನವರು ಇರಬಹುದು ಅಥವಾ ನಾಳೆ ಬರುವವರು ಇರಬಹುದು. ಅಧಿಕಾರದ ಬಲದ ಮೇಲೆ ಅದು ಅವಲಂಬಿತವಾಗುತ್ತದೆ’ ಎಂದು ಎಚ್ಚರಿಸಿದರು.

‘ಮೊದಲ ನಾಲ್ಕು ತಿದ್ದುಪಡಿಗಳಿಂದ ಸಂವಿಧಾನದ ಮೂಲ ಆಶಯಕ್ಕೆ ಹಾನಿ ಆಗಿದೆ. ಮೊದಲ 10 ತಿದ್ದುಪಡಿಗಳು ನಾಗರಿಕರಿಗೆ ನೀಡಲಾದ ಹಕ್ಕುಗಳನ್ನೇ ಮೊಟಕುಗೊಳಿಸಿವೆ ಎಂದು ಸಂವಿಧಾನ ತಜ್ಞ ಗ್ರ್ಯಾನ್‌ವಿಲ್ಲೆ ಆಸ್ಟನ್‌ ಹೇಳಿದ್ದರು. ಆ ಬಳಿಕ ಐ.ಸಿ.ಗೋಲಕ್‌ನಾಥ್‌ ಮತ್ತು ಪಂಜಾಬ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ, ಸಂವಿಧಾನವನ್ನು ಮನಬಂದಂತೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇನ್ನಷ್ಟು ಸುಧಾರಣೆಗಳನ್ನು ರೂಪಿಸಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ಸ್ವರೂಪ ಸಂರಕ್ಷಿಸುವುದರ ಮಹತ್ವವನ್ನು ಸಾರಿತು’ ಎಂದರು.

‘ಸಂವಿಧಾನವನ್ನು ಆಂತರ್ಯದಿಂದ ಭಗ್ನಗೊಳಿಸಲು ಯತ್ನಿಸಿದ ರಾಜಕೀಯ ಪಕ್ಷಗಳೂ ನಮ್ಮಲ್ಲಿದ್ದವು. ಲೋಕಸಭೆ ಅವಧಿಯನ್ನು 15 ವರ್ಷ ಮಾಡಬೇಕು, ಒಮ್ಮೆ ಚುನಾಯಿತರಾದ ಸಂಸತ್‌ ಸದಸ್ಯರು ಜೀವನಪರ್ಯಂತ ಅಧಿಕಾರದಲ್ಲಿರಬೇಕು ಎಂಬ ತಿದ್ದುಪಡಿ ತರುವ ಪ್ರಯತ್ನವೂ ನಡೆದಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡೆವು ಎಂಬುದನ್ನೂ ಮನನ ಮಾಡಿಕೊಳ್ಳಬೇಕು‘ ಎಂದರು.

ಈಗ ಎಷ್ಟು ಸಚಿವರು ಜೈಲಿನಲ್ಲಿದ್ದಾರೆ. ಎಷ್ಟು ಮಂದಿ ಕೇಂದ್ರ ಸಚಿವರು, ಮುಖ್ಯಮಂತ್ರಿ, ಕ್ಯಾಬಿನೆಟ್‌ ಸಚಿವರು, ಉನ್ನತ ಅಧಿಕಾರಿಗಳಿಗೆ ಶಿಕ್ಷೆ ಆಗಿದೆ ಎಂದು ಒಮ್ಮೆ ಯೋಚಿಸಿ. ಸಂಸತ್ತಿನಲ್ಲಿ ಹಣದ ವ್ಯಾಪಾರ ನಡೆದರೂ ಕೇಳುವಂತಿಲ್ಲ ಎನ್ನುತ್ತಾರೆ.ನ್ಯಾಯಾಲಯ ಏನಾದರೂ ಹೇಳಿದರೆ ಅದರ ಮೇಲೆ ಮುಗಿಬೀಳಲಾಗುತ್ತದೆ. ನಾವು ನ್ಯಾಯಾಲಯದ ಕಲಾಪದಲ್ಲಿ ಮೂಗು ತೂರಿಸುತ್ತೇವಾ ಎಂದು ಕೇಳುತ್ತಾರೆ. ಇಂತಹ ಸ್ಥಿತಿಯನ್ನು ಇಟ್ಟುಕೊಂಡು ಸಂವಿಧಾನವನ್ನು ನಾಳೆ ಹೇಗೆ ರಕ್ಷಿಸಬಲ್ಲಿರಿ’ ಎಂದು ಪ್ರಶ್ನಿಸಿದರು.

‘ನಾವು ಎಂಥವರನ್ನು ಚುನಾಯಿಸುತ್ತಿದ್ದೇವೆ ಎಂಬುದು ಮುಖ್ಯ. ನಮ್ಮ ಚುನಾವಣಾ ಪ್ರಕ್ರಿಯೆ ಯಾವ ರೀತಿ ನಡೆಯುತ್ತಿದೆ. ಮತ ಹಾಕಿಸಲು ದುಡ್ಡನ್ನು ನೀಡಿ, ಜನರನ್ನು ವಾಹನದಲ್ಲಿ ಕರೆತಂದು ಬ್ಯಾಲೆಟ್‌ ಪೇಪರ್‌ ಗುರುತು ಹಾಕುವುದನ್ನು ತೋರಿಸಿ, ಈ ಚಿತ್ರಕ್ಕೆ ಮತ ಹಾಕಿದರೆ ಇಷ್ಟು ದುಡ್ಡು ಎನ್ನುವ ಸ್ಥಿತಿ ಇರುವಾಗ ಸಂವಿಧಾನ ರಕ್ಷಣೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಎಲ್ಲವನ್ನು ಹಿಮ್ಮೆಟ್ಟಿಸುವ ವಂಶವಾಹಿ ಪದಾರ್ಥ ಎಲ್ಲರಲ್ಲೂ ಇದೆ. ಯಾವುದೇ ಸಂವಿಧಾನವೂ ಕೊಲೆಯಾಗದೆ ಉಳಿದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳದ ಸಂವಿಧಾನವೇ ಇಲ್ಲ ಎಂಬ ಮಾತನ್ನು ನೆನಪಿಟ್ಟುಕೊಳ್ಳಬೇಕು’ ಎಂದರು.

‘ಅನೇಕ ಮಹಾನ್‌ ಮಸ್ತಿಷ್ಕಗಳು ಕೂಡಿಕೊಂಡು ರೂಪಿಸಿದ ಮಹಾನ್‌ ಗ್ರಂಥವಿದು.ಅನೇಕ ರೀತಿಯ ಒತ್ತಡ, ಪ್ರಭಾವಗಳೆಲ್ಲವನ್ನೂ ಮೆಟ್ಟಿ ಮತ್ತೆ ಎದ್ದುನಿಂತ ಸಂವಿಧಾನವಿದು. ವಕೀಲದ ಸಂಘದ ಸದಸ್ಯರು ಜಾಗೃತರಾಗಿದ್ದರೆ ಸಂವಿಧಾನವನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ’ ಎಂದರು.

‘ಚುನಾವಣಾ ಆಯೋಗದ ಆಯುಕ್ತರು, ರಿಜಿಸ್ಟ್ರಾರ್ ಜನರಲ್‌, ಮಹಾಲೇಖಪಾಲರು ಮೊದಲಾದ ಸಂವಿಧಾನ ಬದ್ಧ ಹುದ್ದೆಗಳಿಗೆ ಸಂವಿಧಾನಬದ್ಧ ಹುದ್ದೆಗಳಿಗೆ ಶ್ರೇಷ್ಠ ಚಿಂತಕರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಕಟ್ಟಡದ ಒಂದು ಇಟ್ಟಿಗೆ ತೆಗೆದಾಗ ಮನೆಯ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತವೆ. ಎರಡು ಮೂರು ಇಟ್ಟಿಗೆ ತಗೆದಾಗಲೂಗೊತ್ತಾಗಲ್ಲ. ಮೂಲೆಯ ಇಟ್ಟಿಗೆ ತೆಗೆದಾಗ ಕಟ್ಟಡ ಕುಸಿಯುತ್ತದೆ. ಸಂವಿಧಾನ ದಿನದಂದು ವಿವಿಧ ವಿಶೇಷಣ ಬಳಸಿ ದನ್ನು ಹೊಗಳಿದರೆ ಸಾಲದು. ಸಂವಿಧಾನ ಏನು ಹೇಳುತ್ತಿದೆ, ಸಂಸತ್ತು, ಪ್ರಾಂತೀಯ ಸರ್ಕಾರಗಳು, ನ್ಯಾಯಾಂಗ, ಚುನಾವಣಾ ಆಯೋಗ, ರಿಜಿಸ್ಟ್ರಾರ್ ಜನರಲ್‌ ಕಚೇರಿ, ಮಹಾಲೇಖಪಾಲರು ಮೊದಲದ ಸಂವಿಧಾಣ ಬದ್ಧ ಸಂಸ್ಥೆಗಳು ಹೇಗೆ ನಡದುಕೊಳ್ಳುತ್ತಿವೆ. ಅವು ಸಂವಿಧಾನ ಹೇಳಿದ ರೀತಿಯಲ್ಲೇ ನಡೆಯುತ್ತಿವೆಯೇ, ಇಲ್ಲದಿದ್ದರೆ ನಾವೇನು ಮಾಡಬೇಕು ಎಂಬ ಬಗ್ಗೆಯೂ ಚಿಂತನೆ ನಾಡಬೇಕು’ ಎಂದರು.

‘ಸಂವಿಧಾನದ ಕುರಿತ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಳ್ಳಬೇಕಾದ ದಿನವೇ ಸಂವಿಧಾನ ದಿನ. ನಾನು ರಾಷ್ಟ್ರಗೀತೆ ಹೇಳಲ್ಲ ಎನ್ನುವವರಿದ್ದಾರೆ. ಸಂವಿಧಾನ ಹೇಳುವುದನ್ನೆಲ್ಲ ಒಪ್ಪಲ್ಲ; ಅದು ನಮ್ಮ ಧರ್ಮಕ್ಕೆ ವಿರುದ್ಧ ಇದೆ ಎನ್ನುವವರೂ ನಮ್ಮ ನಡುವೆ ಇದ್ದಾರೆ. ಅದರಿಂದ ಎಷ್ಟೊಂದು ಸಮಸ್ಯೆಗಳಾಗುತ್ತವೆ ಎಂಬ ಬಗ್ಗೆಯೂ ಗಮನವಹಿಸಬೇಕು’ ಎಂದರು.

ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರವೀಂದ್ರ ಎಂ ಜೋಷಿ ಅವರು ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾ ರೆಡ್ಡಿ ಇದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಪೃಥ್ವಿರಾಜ್‌ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶೀ ಶ್ರೀಧರ ಎಣ್ಮಕಜೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT