ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ಸ್ಮರಣೆಗೆ ವೇಣು: ವೀಣೆಯ ರಂಗು

ಕದ್ರಿ ಗೋಪಾಲನಾಥ್ ಅಕಾಡೆಮಿಯಿಂದ ‘ಸಂಗೀತ ಸೌರಭ’; ಪ್ರಶಸ್ತಿ ಪ್ರದಾನ
Last Updated 6 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ಮಂಗಳೂರು: ಸ್ಯಾಕ್ಸೊಫೋನ್ ಮೂಲಕ ಕರ್ನಾಟಕ ವಾದ್ಯ ಸಂಗೀತವನ್ನು ವಿಶ್ವದೆಲ್ಲೆಡೆ ಪಸರಿಸಿದ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಸಂಗೀತ ಸೌರಭಕ್ಕೆ ವೇಣು-ವೀಣಾ ವಾದನವು ರಾಗ-ಲಯದ ರಂಗು ತುಂಬಿತು.

ಕೊಳಲಿನ ಮೂಲಕ ಪ್ರವೀಣ್ ಗೋಡ್ಖಿಂಡಿ ಮತ್ತು ವೀಣೆಯಲ್ಲಿ ರಾಜೇಶ್ ವೈದ್ಯ ಸಹೃದಯರ ಮನಮುದಗೊಳಿಸಿದರು.
ಕಾರ್ಯಕ್ರಮ ಆರಂಭಗೊಂಡದ್ದು ರಾಜೇಶ್ ವೈದ್ಯ ಅವರ ಸೋಲೊ ವಾದನದ ಮೂಲಕ. ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ‘ಎಂದರೊ ಮಹಾನುಭಾವುಲು’ ಮೂಲಕ ಶ್ರೀರಾಗದ ಸೊಬಗುಣಿಸಿದ ಅವರು, ನಂತರ ‘ಕದನ ಕುತೂಹಲ’ದ ಮೂಲಕ ರಂಜಿಸಿದರು.

ಮೃದಂಗದಲ್ಲಿ ವಿದ್ವಾನ್ ಮೋಹನ ರಾಮನ್, ಘಟಂನಲ್ಲಿ ವಿದ್ವಾನ್ ಸಾಯಿ ಹರಿ ಮತ್ತು ಮೋರ್ಸಿಂಗ್ ನಲ್ಲಿ ವಿದ್ವಾನ್ ಬಿ. ರಾಜಶೇಖರ್ ಅವರು ಕಛೇರಿಗೆ ಕಳೆತಂದರು. ಕದ್ರಿ ಅವರ ಜೊತೆ ‘ರಾಗ್ ರಂಗ್’ ಮೂಲಕ ಪ್ರಸಿದ್ಧಿ ಪಡೆದ
ಪ್ರವೀಣ್ ಗೋಡ್ಖಿಂಡಿ ಅವರ ಸೋಲೊ ಆರಂಭವಾದದ್ದು ರಾಗ್ ದುರ್ಗಾ ಮೂಲಕ. ರೂಪಕ್ ಮತ್ತು ಧೃತ್ ತೀನ್ ತಾಳ್‌ನಲ್ಲಿ ಪ್ರಸ್ತುತಗೊಂಡ ಅವರ ವಾದನಕ್ಕೆ ಪಂಡಿತ್ ರಾಜೇಂದ್ರ ನಾಕೋಡ್ ಅವರ ಮೋಹಕ ತಬಲಾ ಸಾಥ್ ಇತ್ತು. ಕೊನೆಯಲ್ಲಿ ಸವಾಲ್-ಜವಾಬ್‌ನಲ್ಲಿ ರಾಜಶೇಖರ್ ಅವರ ಮೋರ್ಸಿಂಗ್ ಕೂಡ ಇಂಪು ತುಂಬಿತು.

ನಂತರ ಜುಗಲ್ ಬಂದಿಯ ಲಯ-ಲಾಸ್ಯ. ಸುಮಧುರ ಆಲಾಪದ ಮೂಲಕ ಚಂದ್ರಕೌನ್ಸ್ ಮತ್ತು ಹಿಂದೋಳ ರಾಗಕ್ಕೆ ಇಬ್ಬರೂ ಪ್ರವೇಶ ಮಾಡಿದರು. ಗೋಡ್ಖಿಂಡಿಯವರು ರಾಗ್ ರಂಗ್ ಆಲ್ಬಂನ ಹಾಡಿನೊಂದಿಗೆ ಸಭಾಂಗಣದಲ್ಲಿ ಸಂಚಲನ ಮೂಡಿಸಿದರು‌. ಕರ್ನಾಟಕ ಸಂಗೀತದ ತನಿಯಾವರ್ತನಂ ಮತ್ತು ಹಿಂದುಸ್ತಾನಿಯ ಸವಾಲ್ ಜವಾಬ್ ಸಂಗೀತ ಪ್ರಿಯರನ್ನು ಲಯಸಾಗರದಲ್ಲಿ ತೇಲಿಸಿತು.

‘ಮಲ್ಲಿಕಟ್ಟೆ ಉದ್ಯಾನದಲ್ಲಿ ಪುತ್ಥಳಿ ಸ್ಥಾಪನೆ’
ಮಂಗಳೂರು: ನಗರದ ಕದ್ರಿಯ ಮಲ್ಲಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನದಲ್ಲಿ ಕದ್ರಿ ಗೋಪಾಲನಾಥ್ ಅವರ ಪುತ್ಥಳಿ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಸಂಸ್ಥೆಯು ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕದ್ರಿ ಸಂಗೀತ ಸೌರಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

70ರ ದಶಕದಲ್ಲಿ ರೇಡಿಯೊ ಮೂಲಕ ಸ್ಯಾಕ್ಸೊಫೋನ್ ಕೇಳಲು ಕದ್ರಿ ಗೋಪಾಲನಾಥ್ ಅವರು ಅವಕಾಶ ಒದಗಿಸಿದ್ದರು. ದಕ್ಷಿಣ ಕನ್ನಡದ ಕುಗ್ರಾಮದಲ್ಲಿ ಹುಟ್ಟಿದ ಅವರು, ವಿದೇಶಗಳಲ್ಲಿ ಕೂಡ ಕಾರ್ಯಕ್ರಮ ನೀಡಿದ್ದು ಮಂಗಳೂರಿಗರಿಗೆ ಅಭಿಮಾನ. ಅವರ ಕುಟುಂಬ ಕಲೆ, ಸಂಗೀತ ಉಳಿಸಲು ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ಕದ್ರಿಯವರು ಸಂಗೀತ ಲಹರಿಯ ಮೂಲಕ ನಮ್ಮ ಜೊತೆ ಇದ್ದಾರೆ’ ಎಂದರು. ವಿದ್ವಾನ್ ಎನ್.ನಾರಾಯಣ ಅವರಿಗೆ ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ‌ ಮಾಡಲಾಯಿತು.

ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ, ಸುಧಾಕರ ಪೇಜಾವರ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ, ಕದ್ರಿ ಅಕಾಡೆಮಿಯ ಮಣಿಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT