ಸೋಮವಾರ, ಡಿಸೆಂಬರ್ 9, 2019
17 °C

ಕದ್ರಿ ಕಂಬಳ ಅಪಘಾತ: ಲಾರಿ ಚಾಲಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಕದ್ರಿ ಕಂಬಳದಲ್ಲಿ ಭಾನುವಾರ ಮಧ್ಯಾಹ್ನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯೊಬ್ಬರ ಸಾವಿಗೆ ಕಾರಣವಾದ ಅಪಘಾತ ಪ್ರಕರಣದಲ್ಲಿ ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದ ಲಾರಿಯ ಚಾಲಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ನಿವಾಸಿಯಾಗಿದ್ದು, ಬೆಂಗಳೂರಿನ ಪೀಠೋಪಕರಣ ತಯಾರಿಕಾ ಕಂಪನಿಯೊಂದರ ಲಾರಿ ಚಾಲಕನಾಗಿದ್ದ ಸಿದ್ದಲಿಂಗನಗೌಡ ಪೊಲೀಸ್‌ ಪಾಟೀಲ್‌ (29) ಬಂಧಿತ ಆರೋಪಿ. ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಚಾಲಕನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬಟ್ಟಗುಡ್ಡೆಯಿಂದ ಭಾರತ್‌ ಬೀಡಿ ಜಂಕ್ಷನ್‌ ಕಡೆ ಬರುತ್ತಿದ್ದ ಆಟೊ ರಿಕ್ಷಾಕ್ಕೆ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಪಣಂಬೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಶೈಲಜಾ ರಾವ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ರಿಕ್ಷಾ ಚಾಲಕ ವಿನೋದ್‌ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಸಿದ್ದಲಿಂಗನಗೌಡ ಬೆಂಗಳೂರಿನಿಂದ ಲಾರಿಯಲ್ಲಿ ಪೀಠೋಪಕರಣ ತುಂಬಿಸಿಕೊಂಡು ಮಂಗಳೂರಿಗೆ ಬಂದಿದ್ದ. ಇಲ್ಲಿನ ಮಳಿಗೆಗಳಲ್ಲಿ ಪೀಠೋಪಕರಣ ಇಳಿಸಿ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಪ್ರತಿಕ್ರಿಯಿಸಿ (+)