ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಕನಾಡಿ ಗರಡಿಗೆ 150ರ ಸಂಭ್ರಮ ಮಾರ್ಚ್‌ 3 ರಿಂದ ಕಾರ್ಯಕ್ರಮ

7ರಂದು ನಾಗಬ್ರಹ್ಮ ಮಂಡಲೋತ್ಸವ , ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಸಿ.ಎಂ
Last Updated 25 ಫೆಬ್ರುವರಿ 2023, 16:11 IST
ಅಕ್ಷರ ಗಾತ್ರ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಗರಡಿಗಳಲ್ಲಿ ಒಂದಾದ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಆರಂಭವಾಗಿ 150 ವರ್ಷಗಳು ಸಂದಿವೆ. ಇದರ ಪ್ರಯುಕ್ತ ಈ ಗರಡಿ ಕ್ಷೇತ್ರದಲ್ಲಿ ಸಹಸ್ರ ನಾರಿಕೇಳ ಗಣಯಾಗ, ಸಹಸ್ರ ಕುಂಭಾಭಿಷೇಕ, ನಾಗಬ್ರಹ್ಮಮಂಡಲೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್‌ 3ರಿಂದ 7ರವರೆಗೆ ನಡೆಯಲಿವೆ.

ಮಾರ್ಚ್‌ 7ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ‘ಗರಡಿಗೆ 150 ವರ್ಷ ತುಂಬಿದ ಸಲುವಾಗಿ ಕ್ಷೇತ್ರದ ಪ್ರಧಾನ ಅರ್ಚಕ ಕೆ. ವಾಸುದೇವ ಶಾಂತಿ ಉಪಸ್ಥಿತಿಯಲ್ಲಿ ಬಿ. ಗಂಗಾಧರ ಶಾಂತಿ ನೇತತ್ವದಲ್ಲಿ ಹಾಗೂ ನಗರದ ನಾರಾಯಣಗುರು ವೈದಿಕ ಸಮಿತಿ ಸಹಭಾಗಿತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದರು.

‘ಗ್ರಾಮದೇವತೆಯಾದ ಮರೋಳಿ ಶ್ರೀಸೂರ್ಯನಾರಾಯಣ ದೇವಸ್ಥಾನದಲ್ಲಿ ಮಾರ್ಚ್‌ 3ರಂದು ಬೆಳಿಗ್ಗೆ 6ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಬೆಳಗ್ಗೆ 9.12ಕ್ಕೆ ತೋರಣ ಮುಹೂರ್ತ, 9.30ಕ್ಕೆ ಕೊಪ್ಪರಿಗೆ ಮುಹೂರ್ತ, 11.08ಕ್ಕೆ ಉಗ್ರಾಣ ಮುಹೂರ್ತಗಳು ನೆರವೇರಲಿವೆ. ಮಾರ್ಚ್‌ 4ರಂದು ಬೆಳಗ್ಗೆ 5ರಿಂದ ಸಹಸ್ರ ನಾರಿಕೇಳ ಗಣಯಾಗ, ಬೆಳಿಗ್ಗೆ 11ಕ್ಕೆ ಪೂರ್ಣಾಹುತಿ, ಮಾರ್ಚ್‌ 5ರಂದು ಬೆಳಿಗ್ಗೆ 7ಕ್ಕೆ ಪರಿವಾರ ದೈವಗಳಿಗೆ ಕಲಶಾಭಿಷೇಕ, ಮಾರ್ಚ್‌ 6ರಂದು ಬೆಳಿಗ್ಗೆ 7.40ಕ್ಕೆ ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಮಾರ್ಚ್ 7ರಂದು ನಾಗಪಾತ್ರಿ ಕಾವೂರು ಮನೋಜ್ ಶಾಂತಿ ಮತ್ತು ಬಳಗದವರಿಂದ ರಾತ್ರಿ 9ಕ್ಕೆ ಹಾಲಿಟ್ಟು ಸೇವೆ ಮತ್ತು ರಾತ್ರಿ 12ಕ್ಕೆ ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದೆ’ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ‘ಐದು ದಿನಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ. ನಿತ್ಯವೂ ಅನ್ನಸಂತರ್ಪಣೆ ಸೇವೆ ಜರುಗಲಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ವ್ಯವಸ್ಥಾಪಕ ಜೆ. ಕಿಶೋರ್ ಕುಮಾರ್, ‘ಕಂಕನಾಡಿ ಗರಡಿ 150’ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕ್ಷೇತ್ರದ ಮೊಕ್ತೇಸರರಾದ ಬಿ. ದಾಮೋದರ ನಿಸರ್ಗ, ಬಿ.ವಿಠಲ, ಎ. ವಾಮನ, ದಿವರಾಜ್, ಜಗದೀಪ್ ಡಿ. ಸುವರ್ಣ, ಜೆ.ವಿಜಯ, ಆರ್ಥಿಕ ಸಮಿತಿಯ ಶರಣ್ ಪಂಪ್‌ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಪ್ರಚಾರ ಸಮಿತಿ ಸಂಚಾಲಕ ಬ್ರಿಜೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT