ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯಕ್ಕೆ ಗ್ರಾಮೀಣರ ಸ್ಪಂದನೆ’

ಅಮ್ಮುಂಜೆ: ತಾಲ್ಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Last Updated 13 ನವೆಂಬರ್ 2022, 6:42 IST
ಅಕ್ಷರ ಗಾತ್ರ

ಬಂಟ್ವಾಳ: ‘ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಗ್ರಾಮೀಣ ಜನರ ಸ್ಪಂದನೆ ಸಿಗುತ್ತದೆ. ಈಗಾಗಲೇ ಕೋಟಿ ಕಂಠ ಗೀತ ಗಾಯನ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭಾಷೆಗೆ ಜೀವ ತುಂಬುವ ಕೆಲಸ ಮಾಡಿದೆ’ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವೀರ ಯೋಧ ಯಾದವ ಪೂಜಾರಿ ಸಭಾಂಗಣದ ಅಮ್ಮುಂಜೆಗುತ್ತು ಪಟೇಲ್ ಶಂಕರ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಸಂಜೆ ತಾಲ್ಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಬಾಲಕೃಷ್ಣ ಗಟ್ಟಿ ಮಾತನಾಡಿ, ‘ಬಂಟ್ವಾಳ ನಾಗರಿಕತೆಯ ತೊಟ್ಟಿಲು. ಇಲ್ಲಿನ ಲೊರೆಟ್ಟೊ, ನರಹರಿ ಪರ್ವತ, ಕಾರಿಂಜ ಬೆಟ್ಟದಲ್ಲಿ ನಿಂತಾಗ ನೇತ್ರಾವತಿ ನದಿ ಸಹಿತ ಸುಂದರ ಪ್ರಕೃತಿದತ್ತ ಪ್ರದೇಶ ಗಮನ ಸೆಳೆಯುತ್ತದೆ. ಸರೋಜಿನಿ ನಾಯ್ಡು ಮಂಗಳೂರಿಗೆ ಬಂದಿದ್ದಾಗ ಬಂಟ್ವಾಳದ ಈ ಪ್ರದೇಶ ಕಂಡು ಇದು ‘ದಕ್ಷಿಣದ ಕಾಶ್ಮೀರ’ ಎಂದು ಬಣ್ಣಿಸಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಅಮೆರಿಕದ ಕ್ಯಾಲಿಪೋರ್ನಿಯಗಿಂತಲೂ ಹೆಚ್ಚಿನ ಪ್ರಾಕೃತಿಕ ಸೌಂದರ್ಯ ಇಲ್ಲಿದೆ’ ಎಂದು ಅವರು ಹೇಳಿದ್ದರು. ನಿಜಕ್ಕೂ ಇಲ್ಲಿನ ಜನಜೀವನ, ಕೃಷಿ, ಉದ್ಯಮ, ವಾಣಿಜ್ಯ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಪ್ರಕೃತಿಯ ವರದಾನ’ ಎಂದರು.

‘ತಾಲ್ಲೂಕಿನ ಜನತೆ ಸಂಸ್ಕಾರವಂತರು ಮಾತ್ರವಲ್ಲದೆ ಸುಶಿಕ್ಷಿತರು, ಕ್ರಿಯಾಶೀಲರು, ಸೃಜನಶೀಲರು, ಸಾಹಸಮಯ ಪ್ರವೃತ್ತಿ ಮೈಗೂಡಿಸಿಕೊಂಡವರು. ಪ್ರೀತಿ, ವಿನಮ್ರತೆ, ಸಂಯಮ, ಸಹಕಾರ, ಸಹಾನುಭೂತಿ ಮನೋಭಾವ ಇಲ್ಲಿದೆ. ಪ್ರಕೃತಿ ಸೌಂದರ್ಯ ಸವಿಯುವ ಗುಣ ಉಳ್ಳವರು ಎಂದಿಗೂ ವೃದ್ಧರಾಗುವುದಿಲ್ಲ. ಕೃಷಿ ಪ್ರಧಾನವಾಗಿರುವ ಇಲ್ಲಿ ಸಾಹಸಮಯ ಕೃಷಿಕ ಅಮೈ ಮಹಾಲಿಂಗ ನಾಯ್ಕ ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಸಿಕ್ಕಿರುವುದು ತಾಲ್ಲೂಕಿಗೆ ಹೆಮ್ಮೆ. ಸಾಹಿತ್ಯ, ಯಕ್ಷಗಾನ, ಸಹಕಾರಿ ಕ್ಷೇತ್ರಕ್ಕೆ ಬಂಟ್ವಾಳದ ಕೊಡುಗೆ ಅನನ್ಯ’ ಎಂದು ಸಮ್ಮೇಳನಾಧ್ಯಕ್ಷರು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸುರೇಶ ನೆಗಳಗುಳಿ ಮಾತನಾಡಿದರು. ಸಂಧ್ಯಾ ಶೆಣೈ ಉಡುಪಿ ದಿಕ್ಸೂಚಿ ಭಾಷಣ ಮಾಡಿದರು.

ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಮಂಜಯ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಗುಂಡಿಲಗುತ್ತು ಶಂಕರ ಶೆಟ್ಟಿ, ಪ್ರಮುಖರಾದ ಎ.ಜೀವರಾಜ ಶೆಟ್ಟಿ, ಎ.ದೇವದಾಸ್ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ ಕರಿಯಂಗಳ, ವಾಮನ ಆಚಾರ್ಯ ಅಮ್ಮುಂಜೆ, ಪಿಡಿಒ ಮಲ್ಲಿಕಾ, ನಯನಾ, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೊಟ್ಯಾನ್, ಶಿಕ್ಷಣ ಸಂಯೋಜಕಿ ಸುಜಾತಾ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಇದ್ದರು.

ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು. ಉಮೇಶ ಸಾಲ್ಯಾನ್ ಅಮ್ಮುಂಜೆ ಇತಿಹಾಸ ತಿಳಿಸಿದರು. ಸಾಹಿತಿ ವಿ.ಸು.ಭಟ್ ವಂದಿಸಿದರು. ವಕೀಲ ರವೀಂದ್ರ ಕುಕ್ಕಾಜೆ ಮತ್ತು ಶಿಕ್ಷಕ ರಮಾನಂದ ನೂಜಿಪಾಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT