ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕನ್ನಡದಲ್ಲಿ ಕಲಿತ ಗಣ್ಯರ ಕಂಡು ಧನ್ಯರಾದರು...

ಕನ್ನಡ ಶಾಲಾ ಮಕ್ಕಳ ಹಬ್ಬಕ್ಕೆ ತೆರೆ; ಕಾನ್ವೆಂಟ್ ಶಾಲೆ ಕುರಿತ ಭ್ರಮೆಯಿಂದ ಹೊರಬರಲು ಕಾಗೇರಿ ಸಲಹೆ
Last Updated 21 ನವೆಂಬರ್ 2022, 3:30 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ ಕಲಿತರೆ ಹಿನ್ನಡೆ ಇಲ್ಲ...

ಕೇಶವ ಸ್ಮೃತಿ ಸಂವರ್ಧನ ಸಮಿತಿ ನಗರದ ಸಂಘನಿಕೇತನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಶಾಲಾ ಮಕ್ಕಳ ಹಬ್ಬದ ಎರಡನೇ ದಿನವಾದ ಭಾನುವಾರ ಬೆಳಿಗ್ಗಿನ ಗೋಷ್ಠಿಯಲ್ಲಿ ಸುಳ್ಯದ ಸ್ನೇಹಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಆಡಿದ ಮಾತು ಇದು. ಇದನ್ನು ಕೇಳಿ ಹುರುಪುಗೊಂಡಿದ್ದ ವಿದ್ಯಾರ್ಥಿಗಳು ಕನ್ನಡ ಶಾಲೆಯಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವ ಗಣ್ಯರನ್ನು ಕಂಡು ಸಂಜೆ ಪುಳಕಗೊಂಡರು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಅಧ್ಯಕ್ಷ, ವೈದ್ಯ ವಾಮನ್ ಶೆಣೈ ಅವರು ಗ್ರಾಮೀಣ ಪ್ರದೇಶದಲ್ಲಿ, ಕನ್ನಡ ಶಾಲೆಯಲ್ಲಿ ಕಲಿತವರು ಎಂದು ಪರಿಚಯಿಸಿದ ಕೇಶವ ಬಂಗೇರ ಹೇಳಿದಾಗ ವಿದ್ಯಾರ್ಥಿಗಳು ಅಚ್ಚರಿಯಿಂದ ದಿಟ್ಟಿಸಿದರು.

ಖಾಸಗಿ ಸಂಸ್ಥೆಗಳಷ್ಟು ಸೌಲಭ್ಯಗಳಿಲ್ಲದಿದ್ದರೂ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಇದ್ದಾರೆ. ಈಗ ಮೊಟ್ಟೆ, ಚಿಕ್ಕಿ ಮತ್ತಿತರ ಪೌಷ್ಟಿಕ ಆಹಾರವನ್ನೂ ನೀಡಲಾಗುತ್ತದೆ. ಆದರೂ ಜನರಲ್ಲಿ ಖಾಸಗಿ ಸಂಸ್ಥೆಗಳೇ ಮೇಲು ಎಂಬ ಭ್ರಮೆ ಇದೆ. ಅದನ್ನು ಹೋಗಲಾಡಿಸಬೇಕು. ಪಾಲಕರು ಕೀಳರಿಮೆ ಬಿಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ಮಕ್ಕಳನ್ನು ಉದ್ಯೋಗ ಗಳಿಸುವ ಯಂತ್ರದಂತೆ ನೋಡುವುದರಿಂದ ಆಂಗ್ಲಭಾಷೆ ಮೇಲಿನ ವ್ಯಾಮೋಹ ಹೆಚ್ಚುತ್ತಿದೆ. ಇದರಿಂದ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಿದ ಅವರು ವಿಶಿಷ್ಟವಾಗಿ ಯೋಚಿಸುವ ಸಿದ್ಧಿ ಗಳಿಸಿರುವ ದಕ್ಷಿಣ ಕನ್ನಡದ ಜನರು ಕನ್ನಡ ಶಾಲಾ ಮಕ್ಕಳ ಹಬ್ಬ ಏರ್ಪಡಿಸುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.

ಅಧ್ಯಕತೆ ವಹಿಸಿದ್ದ ಪ್ರೊ ಪಿ.ಎಸ್. ಯಡಪಡಿತ್ತಾಯ ರಾಷ್ಟ್ರ ಮೊದಲು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಮ‌ಂತ್ರವಾಗಿದ್ದು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಬೇಕಾದ ಕಾಲ ಸಮೀಪಿಸಿದೆ ಎಂದರು.

‘ಕನ್ನಡಲ್ಲಿ ಓದಿ ಎಂದರೆ ಬೇರೆ ಭಾಷೆಗಳ ಬಗ್ಗೆ ಅವಗಣನೆ ತಾಳಬೇಕು ಎಂದು ತಿಳಿದುಕೊಳ್ಳಬಾರದು. ಭಾರತ ವಿವಿಧ ಭಾಷೆಗಳ ಹೂದೋಟವಾಗಿದ್ದು ಕನ್ನಡ ಅದರಲ್ಲಿ ನಳನಳಿಸುತ್ತಿದೆ. ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಕರ್ಣಾಟಕ ಬ್ಯಾಂಕ್ ಸಾಕಷ್ಟು ಕೊಡುಗೆ ನೀಡಿದೆ ಎಂದು ಮಹಾಬಲೇಶ್ವರ ಎಂ.ಎಸ್‌. ಹೇಳಿದರು.

‘ಬದಲಾವಣೆ: ಸರ್ಕಾರಕ್ಕೆ ನೈಜ ಕಾಳಜಿ ಇಲ್ಲ’
ಶಾಲಾ ಶಿಕ್ಷಣದಲ್ಲಿ ಭಾರಿ ಬದಲಾವಣೆ ತರುವುದಾಗಿ ಹೇಳುತ್ತ ಬಂದಿರುವ ಸರ್ಕಾರಗಳಿಗೆ ಕನ್ನಡ ಶಾಲೆಗಳ ಬಗ್ಗೆ ನೈಜ ಕಾಳಜಿ ಇಲ್ಲ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು.

ಕನ್ನಡ ಶಾಲಾ ಯಶೋಗಾಥೆ ಎಂಬ ವಿಷಯದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು ಶಿಕ್ಷಕರ ನೇಮಕಾತಿಯನ್ನೇ ಮಾಡದ ಸರ್ಕಾರವು ಶಾಲೆಗಳ ವಿಷಯದಲ್ಲಿ ದ್ರೋಹ ಬಗೆಯುತ್ತಿದೆ ಎಂದರು.

ಸುಳ್ಯದ ಸ್ನೇಹಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ, ‘ಶಿಕ್ಷಣಕ್ಕೂ ಪ್ರಕೃತಿಗೂ ಸಂಬಂಧವಿದೆ. ಹೀಗಾಗಿ ಪ್ರಕೃತಿಯ ನಡುವೆ ಶಾಲೆ ಸ್ಥಾಪಿಸಿದ್ದೇ‌ನೆ’ ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಪಿ.ಎಲ್‌. ಧರ್ಮ ಸಮನ್ವಯಕಾರರಾಗಿದ್ದರು.

ಜೀವನ ಮೌಲ್ಯ ವಿಷಯದ ಕುರಿತ ಸಂವಾದದಲ್ಲಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಮೂಡುಬಿದಿರೆಯ ಮುನಿರಾಜ ರೆಂಜಳ, ಒಳ್ಳೆಯ ಬದುಕಿಗಾಗಿ ಶಿಕ್ಷಣ ನೀಡಬೇಕೇ ಹೊರತು ಅದರಲ್ಲಿ ಬೇರೆ ಉದ್ದೇಶಗಳು ಇರಬಾರದು’ ಎಂದು ಹೇಳಿದರು. ಡಾ. ಮೀನಾಕ್ಷಿ ರಾಮಚಂದ್ರ ಸಮನ್ವಯಕಾರರಾಗಿದ್ದರು.

ಕನ್ನಡ ಎಂದರೆ ಬರಿ ನುಡಿ ಅಲ್ಲ ಎಂಬ ವಿಷಯದ ಕುರಿತ ಸಂವಾದದಲ್ಲಿ ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ‘ಕನ್ನಡ ಎಂಬುದೊಂದು ಸಂಸ್ಕೃತಿ. ಅತ್ಯಂತ ವೈಜ್ಞಾನಿಕವಾಗಿರುವ ಈ ಭಾಷೆಯ ಎದುರು ನಿಲ್ಲುವ ಶಕ್ತಿ ಇಂಗ್ಲಿಷ್‌ಗೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ವರ್ಗಾಯಿಸುವೆ’

‘ನನ್ನ ಮಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಇಲ್ಲಿ ನಿನ್ನೆಯಿಂದ ಆಲಿಸಿದ ಮಾತುಗಳು ನನ್ನಲ್ಲಿ ಬದಲಾವಣೆ ತಂದಿದೆ. ಮುಂದಿನ ವರ್ಷ ಮಗಳನ್ನು ಕನ್ನಡ ಮಾಧ್ಯಮಕ್ಕೆ ವರ್ಗಾಯಿಸುವೆ...’
ಮಂಗಳೂರಿನ ಬೊಕ್ಕಪಟ್ಣದಲ್ಲಿ ಅಂಗನವಾಡಿ ಶಿಕ್ಷಕಿಯಾಗಿಯೊಬ್ಬರು ಆಡಿದ ಮಾತು ಇದು.

ಕನ್ನಡ ಶಾಲಾ ಮಕ್ಕಳ ಹಬ್ಬದ ಸಂವಾದದಲ್ಲಿ ಪ್ರಕಾಶ್ ಮಲ್ಪೆ ಅವರ ಮಾತುಗಳನ್ನು ಕೇಳಿದ ನಂತರ ಮಾತನಾಡಿದ ಅವರು ‘ಸರ್ಕಾರಿ ಶಾಲೆಗಳ ಶಿಕ್ಷಕರ ಪೈಕಿ ಅನೇಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ‌ ಕಳುಹಿಸುತ್ತಿದ್ದಾರೆ. ನನಗೆ ನನ್ನ ಮಗಳನ್ನು ಕನ್ನಡ ಶಾಲೆಗೆ ಕಳುಹಿಸಲು ಆಗಲಿಲ್ಲ. ಅದಕ್ಕೆ ಈಗ ಪಶ್ಚಾತ್ತಾಪ ಆಗುತ್ತಿದೆ’ ಎಂದರು.

ಸಂವಾದದಲ್ಲಿ ಮಾತನಾಡಿದ ಪ್ರಕಾಶ್, ‘ವೈಜ್ಞಾನಿಕವಾಗಿ ಅವಲೋಕನ‌ ಮಾಡಿದರೆ ಇಂಗ್ಲಿಷ್‌ಗಿಂತ ಕನ್ನಡವೇ ಮೇಲು ಎಂದು ಸಾಬೀತಾಗುತ್ತದೆ. ಆರ್ಥಿಕವಾಗಿಯೂ ಕನ್ನಡ ಶಾಲೆ ಅನುಕೂಲಕರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT