ಭಾನುವಾರ, ಸೆಪ್ಟೆಂಬರ್ 25, 2022
29 °C

‘ಗುರು ಅನುಗ್ರಹದಿಂದ ಸಾಕ್ಷಾತ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಗುರುವಿನ ಅನುಗ್ರಹ ಮತ್ತು ಮಾರ್ಗದರ್ಶನದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದು ಡಾ. ಪ್ರದೀಪ್ ನಾವೂರು ಹೇಳಿದರು.

ಬೆಳ್ತಂಗಡಿ ತಾಲ್ಲೂಕು ರಾಷ್ಟ್ರೀಯ ಹಬ್ಬ ಮತ್ತು ಮಹಾಪುರುಷರ ಜಯಂತಿ ಆಚರಣಾ ಸಮಿತಿ ಆಶ್ರಯದಲ್ಲಿ ಶನಿವಾರ ಕನ್ಯಾಡಿ ಶ್ರೀರಾಮ ಕ್ಷೇತ್ರದ ಗುರುದೇವ ಮಠದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ವಾಧ್ಯಾಯದೊಂದಿಗೆ ಸತ್ಯ ಮತ್ತು ಧರ್ಮದ ನೆಲೆಯಲ್ಲಿ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಎಲ್ಲ ಧರ್ಮಗಳು ಸಾರುತ್ತವೆ. ಭಗವಂತನ ಆರಾಧನೆ ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿದೆ. ಜಪ, ತಪ, ಧ್ಯಾನದ ಮೂಲಕ ಆತ್ಮೋನ್ನತಿ ಮಾಡಿಕೊಂಡು ತನ್ಮೂಲಕ ರಾಷ್ಟ್ರೋನ್ನತಿ ಮಾಡಬಹುದು ಎಂದು ಭಾರತೀಯ ಸಾಧು-ಸಂತರು ಸಾಧಿಸಿ ತೋರಿಸಿದ್ದಾರೆ. ಸರ್ವಧರ್ಮ ಸಮ್ಮೇಳನದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ದೊರಕಿಸಿಕೊಟ್ಟವರು ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ‘ಧರ್ಮ ಮತ್ತು ಜ್ಞಾನಕ್ಕೆ ಹಾನಿಯಾದಾಗ, ರಕ್ತಪಾತವಿಲ್ಲದೆ, ಮೌನವಾಗಿ ಅಹಿಂಸಾ ಮಾರ್ಗದಿಂದ ಮಾನವೀಯ ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಸುಜ್ಞಾನದ ಬೆಳಕಿನೊಂದಿಗೆ ಸಮಾನತೆಯ ಅವಕಾಶವನ್ನು ಕಲ್ಪಿಸಿದವರು ನಾರಾಯಣ ಗುರುಗಳು’ ಎಂದರು.

ಆಶೀರ್ವಚನ ನೀಡಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ‘ಧರ್ಮದ ಮರ್ಮವನ್ನರಿತು ನಾವು ಸಾರ್ಥಕ ಜೀವನ ನಡೆಸಿದರೆ ಸುಖ-ಶಾಂತಿ, ನೆಮ್ಮದಿ ಹೊಂದಬಹುದು’ ಎಂದರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.