ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪರಿವಾರವನ್ನು ಗಟ್ಟಿಗೊಳಿಸಬೇಕು: ಗುರುರಾಜ ಕರಜಗಿ

‘ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು?: ಉಪನ್ಯಾಸ
Last Updated 15 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಂಗಳೂರು: ಮಕ್ಕಳು ಯಾವ ಶಿಕ್ಷಣ ಪಡೆಯಬೇಕು ಎಂಬ ಗೊಂದಲದಲ್ಲಿ ಪೋಷಕರು ಇದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ಉದ್ಯೋಗದ ಅಭದ್ರತೆ ಕಾಡಲಾರಂಭಿಸಿದೆ. ಶಿಕ್ಷಣದಿಂದ ಪುಕ್ಕಲುತನ ಹೆಚ್ಚಾಗುತ್ತಿದೆ. ಪರಿವಾರವನ್ನು ಗಟ್ಟಿಗೊಳಿಸದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಶಿಕ್ಷಣ ತಜ್ಞ ಹಾಗೂ ಅಂಕಣಕಾರರಾದ ಡಾ.ಗುರುರಾಜ ಕರಜಗಿ ಹೇಳಿದರು.

ಮಂಗಳೂರಿನ ಕರ್ಣಾಟಕ ಬ್ಯಾಂಕ್‌ ಸಭಾಂಗಣದಲ್ಲಿ ಡಿವಿಜಿ ಬಳಗ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು?' ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೈಚಾರಿಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಇದರಿಂದಾಗಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬರುತ್ತದೆ. ನೈತಿಕ ಬಲವನ್ನು ತುಂಬುವ ಕೆಲಸ ಶಿಕ್ಷಣದಿಂದ ಆಗಬೇಕು ಎಂದು ಅವರು ಹೇಳಿದರು.

ಶಿಕ್ಷಣದ ಭಾರ ಮಕ್ಕಳಿಗೆ ಹೆಚ್ಚಾಗುತ್ತಿದೆ. ಈಗಿನ ಶಿಕ್ಷಣದಲ್ಲಿ ಹೊಸತನವಿಲ್ಲ, ಉನ್ನತ ಶಿಕ್ಷಣದಲ್ಲೂ ಕೌಶಲ ಅಭಿವೃದ್ಧಿ ಇಲ್ಲ. ಈ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಬದಲಾಗಿದ ಕಸಿಯುತ್ತಿದೆ. ಇದರಿಂದಾಗಿ ಕೆಲವೊಮ್ಮೆ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣ ಪಡೆದು ಉದ್ಯೋಗ ಮಾಡುವವರು ತುರ್ತು ಸಂದರ್ಭಗಳಲ್ಲಿ ಸವಾಲು ಎದುರಿಸಲು ಆಗದೇ ಆತ್ಮಹತ್ಯೆಯಂತಹ ದಾರಿಯತ್ತ ಮುಖ ಮಾಡುತ್ತಾರೆ. ಇದನ್ನು ದೂರ ಮಾಡುವಂತಹ ಶಿಕ್ಷಣ ವ್ಯವಸ್ಥಿತವಾಗಿ ಸಿಗಬೇಕು. ಆ ಕೆಲಸ ಆಗುತ್ತಿಲ್ಲ. ಪರಿಣತರಲ್ಲದವರಿಂದ ಶಿಕ್ಷಣ ವರ್ಗಾವಣೆ ಆಗುತ್ತಿರುವುದೇ ಇಷ್ಟೇಲ್ಲ ಅವಾಂತರಕ್ಕೆ ಕಾರಣ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘ಶಿಕ್ಷಕರು ಸರಿಯಾಗದೇ ಇದ್ದಲ್ಲಿ ಶಿಕ್ಷಣ ಸರಿಯಾಗಲ್ಲ. ನಮ್ಮಲ್ಲಿ ಶಿಕ್ಷಕರನ್ನು ಅಣಿಗೊಳಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ತರಗತಿಗೆ ಶೇ 90ರಷ್ಟು ಹಾಜರಾಗದೇ ಇರುವವರೇ ಶಿಕ್ಷಕರಾಗಿ, ವಿದ್ಯಾರ್ಥಿಗಳಿಗೆ ನೈತಿಕತೆ ಬಗ್ಗೆ ಪಾಠ ಮಾಡುತ್ತಾರೆ. ಇದನ್ನು ಸರಿಪಡಿಸದೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗದು. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವ ವಿಧಾನ, ವಿದ್ಯಾರ್ಥಿಗಳನ್ನು ತಯಾರು ಮಾಡುವ ಎಲ್ಲ ಕೌಶಲಗಳು ಶಿಕ್ಷಕರ ಅರಿವಿಗೆ ಇರಬೇಕು. ಶಾಲೆಯಲ್ಲಿ ಪಾಠ ಬೋಧನೆ ಮಾತ್ರ ಸಿಗುತ್ತದೆ, ಮನೆಯಲ್ಲಿ ಪೋಷಕರು ಮೌಲ್ಯ, ಸಂಸ್ಕೃತಿ ಬಿತ್ತುವ ಕೃಷಿ ಮಾಡಬೇಕಾದ ಜರೂರಿ ಇದೆ’ ಎಂದು ಅವರು ಕಿವಿಮಾತು ಹೇಳಿದರು.

ಈಗಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದು ಕಷ್ಟ. ಆದರೆ, ಶಿಕ್ಷಕರ ಪಾಠ ಕ್ರಮ ಸರಿಪಡಿಸಲೇಬೇಕು. ಇಲ್ಲದಿದ್ದರೆ ಭವಿಷ್ಯದ ಅಡಿಪಾಯ ಇಲ್ಲದ ಶಿಕ್ಷಣ ಮಕ್ಕಳು ಕಲಿಯುವಂತಾಗುತ್ತದೆ. ಈಗ ಅದೇ ರೀತಿಯ ಶಿಕ್ಷಣ ಸಿಗುತ್ತಿದೆ. ಧಾರಾವಾಹಿ ನಿರ್ದೇಶಕಕರು ವೀಕ್ಷಕರನ್ನು ಹಿಡಿದಿಡುವ ರೀತಿಯ ಮನೋಭಾವ ಶಿಕ್ಷಣದಲ್ಲಿ ಇಲ್ಲ. ಈ ಕೊರತೆಯೇ ಮಕ್ಕಳು ಶಿಕ್ಷಣದ ಬಗ್ಗೆ ನಿರುತ್ಸಾಹ ಹೊಂದುವಂತೆ ಮಾಡುತ್ತಿದೆ ಎಂದರು.

‘ಮಕ್ಕಳು ಮುಂದೇ ಏನಾಗುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ನಾವು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ. ದೊಡ್ಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು, ಎಲ್ಲರಂತೆ ನಮ್ಮ ಮಕ್ಕಳು ಕೂಡಾ ಆಗಬೇಕು ಎಂಬ ಕನಸು ಪೋಷಕರದ್ದು. ಆದರೆ, ದಿಕ್ಕು ದೆಸೆಯಿಲ್ಲದ ಶಿಕ್ಷಣ ನೀಡುವುದರಿಂದ ಈ ಆಸೆಗಳು ಈಡೇರುವುದಿಲ್ಲ. ಹೆದರಿಕೆ, ಗಟ್ಟಿತನ, ಗೌರವಿಸುವ ಭಾವನೆಗಳನ್ನು ಬೆಳೆಯದೇ ಇರುವ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಅಂಕ ಗಳಿಕೆ ಮಾನದಂಡ ಆಗಬಾರದು. ಮಾನವೀಯ ಗುಣಗಳು, ಬದುಕಿನಲ್ಲಿ ಗಟ್ಟಿಯಾದ ಭರವಸೆ ಮೂಡಿಸುವಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.

ಇನ್ನು ಕೆಲ ವರ್ಷಗಳಲ್ಲಿ ದೇಶದಲ್ಲಿ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯುವುದಕ್ಕೆ ಹಿಂದೇಟು ಹಾಕುವಂತಹ ಸ್ಥಿತಿ ಬರುತ್ತದೆ. ಈಗಾಗಲೇ 27 ಸಾವಿರದಷ್ಟು ಎಂಜಿನಿಯರಿಂಗ್ ಸೀಟು ಭರ್ತಿಯಾಗದೆ ಖಾಲಿಯಾಗಿವೆ. ಬುದ್ಧಿವಂತ ವಿದ್ಯಾರ್ಥಿಗಳು ಕಲಾ ವಿಭಾಗದ ಬದಲು ವಿಜ್ಞಾನ, ತಂತ್ರಜ್ಞಾನ ವಿಭಾಗದತ್ತ ಮುಖ ಮಾಡುತ್ತಿದ್ದಾರೆ. ಹೊಸ ಕೋರ್ಸ್‍ಗಳು ಬರುತ್ತಲೇ ಇವೆ ಎಂದು ಅವರು ಹೇಳಿದರು.

ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ.ವಿರೂಪಾಕ್ಷ ದೇವರಮನೆ, ಕನಕರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT