ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: 80 ವರ್ಷ ಮೇಲ್ಪಟ್ಟ ಮತದಾರರು 46 ಸಾವಿರ

ಅಂಚೆ ಮತದಾನಕ್ಕೆ ಅರ್ಹತೆ ಹೊಂದಿದವರ ಯಾದಿ ಸಿದ್ಧಪಡಿಸಿದ ಜಿಲ್ಲಾಡಳಿತ
Last Updated 19 ಮಾರ್ಚ್ 2023, 8:06 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲ ಮತದಾರರಿಗೆ (ಪಿಡ್ಲ್ಯುಡಿ) ಮನೆಯಿಂದಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 46,919 ಮತದಾರರು 80 ವರ್ಷ ಮೇಲ್ಪಟ್ಟವರು ಇದ್ದಾರೆ. 13,943 ಅಂಗವಿಕಲ ಮತದಾರರು ಇದ್ದಾರೆ. ಒಟ್ಟು 60,862 ಮತದಾರರು ಮನೆಯಿಂದಲೇ ಮತದಾನ ಮಾಡುವ ಅಥವಾ ಮತಗಟ್ಟೆಗೆ ಬಂದು ಮತ ಚಲಾಯಿಸುವ ಆಯ್ಕೆ ಹೊಂದಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ ಅಂದರೆ 12,132 ಮತದಾರರು ಈ ಆಯ್ಕೆಯ ಅರ್ಹತೆ ಹೊಂದಿದವರಿದ್ದಾರೆ. ಇದೇ ಕ್ಷೇತ್ರದಲ್ಲಿ 100 ವರ್ಷ ದಾಟಿರುವ 181 ಮತದಾರರು ಇರುವುದು ವಿಶೇಷವಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 100 ವರ್ಷ ಮೇಲ್ಟಟ್ಟ 108 ಮತದಾರರು ಇದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಗರಿಷ್ಠ ಅಂದರೆ 2,884 ಅಂಗವಿಕಲ ಮತದಾರರು ಇದ್ದಾರೆ.

ಅಂಚೆ ಮತದಾನಕ್ಕೆ ಅರ್ಹತೆ ಹೊಂದಿರುವ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಚುನಾವಣೆ ಅಧಿಸೂಚನೆ ಹೊರಡಿಸಿದ ನಂತರದಲ್ಲಿ ಇದಕ್ಕೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.

‘ಜಿಲ್ಲೆಯಲ್ಲಿ ಒಟ್ಟು 1,860 ಮತಗಟ್ಟೆಗಳು ಇವೆ. ಅಂಚೆ ಮತದಾನಕ್ಕೆ ಅರ್ಹತೆ ಹೊಂದಿರುವವರು ಎಲ್ಲ ಮತಗಟ್ಟೆಗಳಲ್ಲಿ ಇದ್ದಾರೆ. ಅವರ ಮತಗಟ್ಟೆ, ಕ್ರಮಸಂಖ್ಯೆಯ ಮಾಹಿತಿಯನ್ನು ಕಲೆ ಹಾಕಲಾಗಿದೆ. ಚುನಾವಣಾ ಆಯೋಗದ ನಿರ್ದೇಶನ
ದಂತೆ, ಚುನಾವಣೆ ನಡೆಯುವ ಐದು ದಿನ ಮುಂಚಿತವಾಗಿ ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ತಂಡವು ಈ ಮತದಾರರ ಮನೆಗೆ ಹೋಗಿ, ಅಂಚೆ ಮತದಾನಕ್ಕೆ ಒಪ್ಪಿಗೆ ನೀಡುವ 12ಡಿ ಅರ್ಜಿ ಹಾಗೂ ಇನ್ನುಳಿದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡುತ್ತದೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದರು.

ಮನೆಯಿಂದ ಮತದಾನ ಮಾಡುವ ವ್ಯಕ್ತಿಗೆ, ಮತದಾನ ಕೇಂದ್ರದಲ್ಲಿ ಮತ ಹಾಕಲು ಅವಕಾಶ ಇರುವುದಿಲ್ಲ. ಅವರು ದೃಢೀಕರಣ ನೀಡುವಾಗಲೇ ಇದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಮನೆಯಲ್ಲಿ ಮತದಾನ ಮಾಡುವು
ದಾದರೆ, ಮತದಾನದ ಗೋಪ್ಯತೆ ಕಾಪಾಡುವ ಸಂಬಂಧ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಶೇ 77.7ರಷ್ಟು ಮತದಾನವಾಗಿದ್ದು, ಈ ಪ್ರಮಾಣವನ್ನು ಈ ಬಾರಿ ಕನಿಷ್ಠ ಶೇ85ಕ್ಕೆ ಏರಿಕೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮತದಾನ ಜಾಗೃತಿ ಸಂಬಂಧ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT