ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ದಕ್ಷಿಣ ಕ್ಷೇತ್ರ: ಬಿಜೆಪಿ ನಿರಾಳ, ‘ಕೈ’ಗೆ ಟಿಕೆಟ್‌ ಹಂಚಿಕೆ ಗೊಂದಲ

ಕೈ’ ಟಿಕೆಟ್‌ಗೆ 8 ಆಕಾಂಕ್ಷಿಗಳು; ಸಿಪಿಎಂ–ಎಎಪಿ ನಿಶ್ಚಿಂತ
Last Updated 2 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಎದುರಾಳಿಗಳಾಗಿದ್ದ 10 ಅಭ್ಯರ್ಥಿಗಳನ್ನು ಮಣಿಸಿದ, ಸಮೀಪದ ಪ್ರತಿಸ್ಪರ್ಧಿಯನ್ನು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿಮ್ಮೆಟ್ಟಿಸಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿ ಈ ಬಾರಿ ನಿರಾಳವಾಗಿದೆ. ಕಳೆದ ಬಾರಿ ಕ್ಷೇತ್ರವನ್ನು ಕಳೆದುಕೊಂಡ ಕಾಂಗ್ರೆಸ್‌ಗೆ ಈ ಸಲ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ತಳಮಳ.

2013ರಲ್ಲಿ ಕಾಂಗ್ರೆಸ್‌ನ ಜೆ.ಆರ್‌. ಲೋಬೊ ಜಯ ಗಳಿಸಿದ್ದ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಗೆಲುವು ಸಾಧಿಸಿದ್ದರು. ‘ಸಿಕ್ಕಿದ ಅವಕಾಶವನ್ನು ಕಾಮತ್ ಅವರು ಸದುಪಯೋಗ ಮಾಡಿಕೊಂಡು ಕ್ಷೇತ್ರದಲ್ಲಿ ಧಾರಾಳ ಅಭಿವೃದ್ಧಿ ಮಾಡಿದ್ದಾರೆ. ಈ ಮೂಲಕ ಎಲ್ಲ ವರ್ಗದವರ ಒಲವು ಗಳಿಸಿದ್ದಾರೆ. ಆದ್ದರಿಂದ ಈ ಬಾರಿ ಯಾವ ಪಕ್ಷದ ಆತಂಕವೂ ನಮಗಿಲ್ಲ’ ಎಂದು ಭರವಸೆಯಿಂದ ನುಡಿಯುವ ಬಿಜೆಪಿ ಹಾಲಿ ಶಾಸಕ ವೇದವ್ಯಾಸ ಕಾಮತ್ ಅವರಿಗೇ ಟಿಕೆಟ್ ಕೊಡುವುದು ಖಚಿತವಾಗಿರುವುದರಿಂದ ಕಾರ್ಯಕರ್ಕತರು ಪರೋಕ್ಷ ಪ್ರಚಾರ ಆರಂಭಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಈ ಕ್ಷೇತ್ರದಿಂದ 8 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಸೋಲುಂಡ ಜೆ.ಆರ್‌.ಲೋಬೊ, ವಿಧಾನಪರಿಷತ್‌ ಮಾಜಿ ಸದಸ್ಯ ಐವನ್ ಡಿಸೋಜಾ, ಕೆಪಿಸಿಸಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ ಮತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷ ಆಶಿಶ್‌ ಪಿರೇರ ಅವರು ರೇಸ್‌ನಲ್ಲಿರುವ ಪ್ರಮುಖರು. ಇವರ ಮನವೊಲಿಸುವುದರೊಂದಿಗೆ ಇತರ ನಾಲ್ವರನ್ನು ಸಮಾಧಾನಪಡಿಸುವ ಜವಾಬ್ದಾರಿ ಪಕ್ಷದ ಮುಖಂಡರಿಗಿದೆ.

ಟಿಕೆಟ್‌ ಸಿಗದೇ ಇದ್ದರೂ ಮುಂದೆ ತಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಯಾವುದಾದರೂ ನಿಗಮ–ಮಂಡಳಿಗೆ ನೇಮಕ ಆಗುವ ಆಶಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರಲ್ಲಿ ಇರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಿದ ಎಲ್ಲರ ಬಗ್ಗೆ ಮುಖಂಡರು ಹೆಚ್ಚು ಚಿಂತೆ ಮಾಡಿಕೊಂಡಿಲ್ಲ. ಆದರೂ ಬಿ ಫಾರ್ಮ್‌ ಕಸರತ್ತು ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ‘ಟಿಕೆಟ್ ಯಾರಿಗೆ ಕೊಟ್ಟರೂ ಒಗ್ಗಟ್ಟಾಗಿ ಪಕ್ಷದ ಪರವಾಗಿ ದುಡಿಯಬೇಕು’ ಎಂಬ ತಾಕೀತು ಪಕ್ಷದ ಪಡಸಾಲೆಗಳಲ್ಲಿ ಕೇಳಿಬರುತ್ತಿದೆ.

ಸಿಪಿಎಂ, ಎಎಪಿ ನಿಶ್ಚಿಂತ
ಪಡೆದ ಮತಗಳ ಸಂಖ್ಯೆ ಕಡಿಮೆಯಾದರೂ ಕಳೆದ ಬಾರಿ ಸಿಪಿಎಂ ಇಲ್ಲಿ ಭಾರಿ ಸ್ಪರ್ಧೆಯೊಡ್ಡಿತ್ತು. ಈ ಬಾರಿ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದೆ. ಎಎಪಿ ಕೂಡ ಕ್ಷೇತ್ರದಲ್ಲಿ ಬಲ ಪಡೆದುಕೊಂಡಿದೆ. ಈ ಎರಡೂ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಸಿಪಿಎಂ, ಚುನಾವಣೆಯಲ್ಲಿ ತನ್ನದೇ ಆಂತರಿಕ ಪ್ರಜಾಪ್ರಭುತ್ವಕ್ಕೆ ಮೊರೆಹೋಗುವುದರಿಂದ ಟಿಕೆಟ್ ಆಕಾಂಕ್ಷಿಗಳು ಎಂದು ಹೇಳಿಕೊಳ್ಳಲು ಯಾರೂ ಇಲ್ಲ. ಎಎಪಿಯಿಂದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ. ಈ ಎರಡೂ ಪಕ್ಷಗಳು ಕ್ಷೇತ್ರದಲ್ಲಿ ಕೆಲವು ತಿಂಗಳ ಹಿಂದೆಯೇ ಚಟುವಟಿಕೆ ಆರಂಭಿಸಿವೆ.

ಸಂಪೂರ್ಣ ನಗರ ಪ್ರದೇಶದಲ್ಲೇ ವ್ಯಾಪಿಸಿಕೊಂಡಿರುವ ದಕ್ಷಿಣ ಕ್ಷೇತ್ರದಲ್ಲಿ ಮಹಾನಗರಪಾಲಿಕೆಯ 38 ವಾರ್ಡ್‌ಗಳು ಇವೆ. ಈ ಪೈಕಿ 24ರಲ್ಲಿ ಬಿಜೆಪಿ ಸದಸ್ಯರು ಇದ್ದು ಉಳಿದವು ಕಾಂಗ್ರೆಸ್ ಪಾಲಾಗಿವೆ. ಮಹಾನಗರ ಪಾಲಿಕೆ ಮತ್ತು ವಿಧಾನಸಭೆಯ ಚುನಾವಣೆಗೆ ಸಂಬಂಧಿಸಿ ಹಿಂದಿನ ಎರಡು ಅವಧಿಯಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ನಿಧಾನಕ್ಕೆ ಬಿಜೆಪಿ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತ ಬಂದಿದೆ. ಬಿಲ್ಲವ, ಕ್ರೈಸ್ತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮ ಚುನಾವಣೆಯ ಪ್ರಮುಖ ಅಂಶವಲ್ಲ ಎಂಬುದನ್ನು ಮತದಾರರು ಸಾಬೀತು ಮಾಡಿದ್ದಾರೆ.

2013ರ ಚುನಾವಣೆಯಲ್ಲಿ ಬಿಜೆಪಿಯ ಯೋಗೀಶ್ ಭಟ್ ಅವರನ್ನು ಸೋಲಿಸಿ ಜೆ.ಆರ್‌. ಲೋಬೊ ಅವರ ‘ಕೈ’ ಹಿಡಿದ ಮತದಾರರು ಕಳೆದ ಬಾರಿ ಲೋಬೊಗೆ ಕೈಕೊಟ್ಟು ಕಮಲ ಅರಳಿಸಿದ್ದರು. ಈ ಬಾರಿ ಮತ್ತೆ ಬದಲಾವಣೆ ಬಯಸುತ್ತಾರೆಯೋ, ಹೊಸಬರನ್ನು ಬರಮಾಡಿಕೊಳ್ಳುತ್ತಾರೆಯೋ ಅಥವಾ ಅಧಿಕಾರ ಉಳಿಸಿಕೊಳ್ಳಲು ಹಾಲಿ ಶಾಸಕರಿಗೆ ಅವಕಾಶ ನೀಡುತ್ತಾರೆಯೋ ಎಂಬುದು ಕ್ಷೇತ್ರದ ಸದ್ಯದ ಕುತೂಹಲ.

**
ಬಿಜೆಪಿಯನ್ನು ಸೋಲಿಸುವುದೊಂದೇ ಪಕ್ಷದ ಗುರಿ. ಈ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲವಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯೊಡ್ಡುವ ವಿಶ್ವಾಸವಿದೆ.
–ಯಾದವ ಶೆಟ್ಟಿ, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ

**
ಮತದಾರರ ಸೇರ್ಪಡೆಗೆ ಮಹಾ ಅಭಿಯಾನ ನಡೆಯುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿದ್ದಾರೆ. ಕ್ರೈಸ್ತರು ಮತ್ತು ಮುಸ್ಲಿಮರ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ಬಳಕೆಯಾಗಿದೆ. ಎಲ್ಲ ವರ್ಗದವರೂ ಬಿಜೆಪಿಯ ಬಗ್ಗೆ ಒಲವು ಹೊಂದಿದ್ದಾರೆ.
–ವಿಜಯಕುಮಾರ್ ಶೆಟ್ಟಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ

**
ಚುನಾವಣೆಗೆ ನಾವೆಲ್ಲ ಸಿದ್ಧರಾಗಿದ್ದೇವೆ. ಬೂತ್ ಅಧ್ಯಕ್ಷರು ಮತ್ತು ವಾರ್ಡ್ ಅಧ್ಯಕ್ಷರ ನೇತೃತ್ವದಲ್ಲಿ ಮನೆಮನೆಗೆ ಭೇಟಿ ನೀಡುತ್ತಿದ್ದೇವೆ. ಕ್ಷೇತ್ರದ ಎರಡು ಬ್ಲಾಕ್‌ಗಳಲ್ಲಿ ಕಾರ್ಯಕರ್ತರು ಚುರುಕಾಗಿದ್ದಾರೆ.
–ಸಲೀಂ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ

**
ನಾವೆಲ್ಲ ಸಾಮಾನ್ಯ ಜನರು. ಹೀಗಾಗಿ ಭಾರಿ ದೊಡ್ಡ ಅಜೆಂಡಾಗಳೇನೂ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಸದಸ್ಯತ್ವ ಅಭಿಯಾನವೂ ಭರ್ಜರಿಯಾಗಿ ನಡೆಯುತ್ತಿದೆ.
–ಸಂತೋಷ್‌ ಕಾಮತ್‌, ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ

**
ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸುವುದು ಖಚಿತ. ಉದ್ಯೋಗದ ಹಕ್ಕಿಗಾಗಿ ಮತ್ತು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧದ ಹೋರಾಟಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
–ಸಂತೋಷ್ ಬಜಾಲ್‌, ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಎಂ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT