ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಪಾಲಿಕೆಯ ಗದ್ದುಗೆ ಹಿಡಿದ ಬಿಜೆಪಿ: ಕಾಂಗ್ರೆಸ್‌ ದೂಳೀಪಟ

ಎರಡು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಗೆಲುವು
Last Updated 14 ನವೆಂಬರ್ 2019, 14:26 IST
ಅಕ್ಷರ ಗಾತ್ರ

ಮಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳನ್ನೇ ಅಖಾಡಕ್ಕಿಳಿಸಿದ್ದ ಬಿಜೆಪಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 60 ಸ್ಥಾನಗಳ ಪೈಕಿ 44 ಬಿಜೆಪಿ ಪಾಲಾಗಿವೆ. ಕಾಂಗ್ರೆಸ್‌ ಬಲ 35ರಿಂದ 14ಕ್ಕೆ ಕುಸಿದಿದೆ. ಎಸ್‌ಡಿಪಿಐ ಸಂಖ್ಯೆ ಎರಡಕ್ಕೇರಿದೆ.

ಮಾಜಿ ಮೇಯರ್‌ಗಳಾದ ಹರಿನಾಥ್‌, ಅಬ್ದುಲ್‌ ಅಜೀಜ್‌, ಮಾಜಿ ಉಪ ಮೇಯರ್‌ ಮುಹಮ್ಮದ್ ಕೆ., ಹಿಂದಿನ ಅವಧಿಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ದೀಪಕ್‌ ಸಾಲ್ಯಾನ್‌, ಪ್ರತಿಭಾ ಕುಳಾಯಿ ಸೇರಿದಂತೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಹಲವು ಮಂದಿ ಘಟಾನುಘಟಿಗಳು ಸೋಲು ಕಂಡಿದ್ದಾರೆ. ಪಕ್ಷೇತರರಾಗಿ ಚುನಾವಣಾ ಅಖಾಡದಲ್ಲಿದ್ದ ಮಾಜಿ ಮೇಯರ್‌ಗಳಾದ ಕೆ. ಅಶ್ರಫ್‌ ಮತ್ತು ಗುಲ್ಜಾರ್‌ ಬಾನು ಗೆಲುವಿಗೆ ಪೈಪೋಟಿ ನಡೆಸುವುದಕ್ಕೂ ಸಾಧ್ಯವಾಗಲಿಲ್ಲ.

ಪಾಲಿಕೆಯ ನಿಕಟಪೂರ್ವ ಸದಸ್ಯರಾಗಿದ್ದ ಬಿಜೆಪಿಯ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ಸುಮಿತ್ರಾ ಕರಿಯ, ಪೂರ್ಣಿಮಾ, ದಿವಾಕರ್‌, ಹೇಮಲತಾ ರಘು ಸಾಲಿಯಾನ್‌ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಪ್ರೇಮಾನಂದ ಶೆಟ್ಟಿ ಐದನೇ ಬಾರಿಗೆ ಪಾಲಿಕೆ ಪ್ರವೇಶಿಸಿದ್ದಾರೆ. ಕಳೆದ ಬಾರಿ ಸದಸ್ಯರಾಗಿದ್ದ ಬಿಜೆಪಿಯ ವಿಜಯಕುಮಾರ್‌ ಶೆಟ್ಟಿ ಈ ಬಾರಿ ಕಂಕನಾಡಿ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಟಿ. ಪ್ರವೀಣ್‌ ಚಂದ್ರ ಆಳ್ವ ಎದುರು 1,019 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

ಪಾಲಿಕೆಯ ಅತ್ಯಂತ ಹಿರಿಯ ಸದಸ್ಯ ಕಾಂಗ್ರೆಸ್‌ನ ಲ್ಯಾನ್ಸಿ ಲೋಟ್‌ ಪಿಂಟೊ ಬಿಜೈ ವಾರ್ಡ್‌ನಲ್ಲಿ ಮತ್ತೆ ಜಯಭೇರಿ ಬಾರಿಸಿದ್ದಾರೆ. 1983ರಲ್ಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆಯ್ಕೆಯಾಗುತ್ತಿರುವ ಅವರು ಏಳನೇ ಬಾರಿ ಪಾಲಿಕೆ ಸದಸ್ಯರಾಗಿದ್ದಾರೆ. ಫಳ್ನೀರ್‌ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್‌ ಜೆಸಿಂತಾ ವಿಜಯ್‌ ಆಲ್ಫ್ರೆಡ್‌ ತಮ್ಮದೇ ಪಕ್ಷದಿಂದ ಬಿಜೆಪಿಗೆ ಜಿಗಿದು ಪ್ರತಿಸ್ಪರ್ಧಿಯಾಗಿದ್ದ ಆಶಾ ಡಿಸಿಲ್ವ ಅವರನ್ನು 339 ಮತಗಳ ಅಂತರದಿಂದ ಮಣಿಸಿದ್ದಾರೆ.

ಪದವು ಪೂರ್ವ ವಾರ್ಡ್‌ನಲ್ಲಿ ಬಿಜೆಪಿಯ ಸುಜನ್‌ ದಾಸ್‌ ಕೆ. ಅವರನ್ನು 571 ಮತಗಳ ಅಂತರದಲ್ಲಿ ಸೋಲಿಸಿರುವ ಮಾಜಿ ಮೇಯರ್‌ ಕಾಂಗ್ರೆಸ್‌ನ ಭಾಸ್ಕರ್‌ ಕೆ. ಮತ್ತೆ ಪಾಲಿಕೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನ ನವೀನ್‌ ಡಿಸೋಜ, ಅಬ್ದುಲ್‌ ರವೂಫ್‌, ಕೇಶವ ಮರೋಳಿ ಸ್ಥಾನ ಉಳಿಸಿಕೊಂಡವರಲ್ಲಿ ಪ್ರಮುಖರು.

ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಶಂಶಾದ್ ಅಬೂಬಕ್ಕರ್‌ ಕಾಂಗ್ರೆಸ್‌ನ ಫಾತಿಮಾ ಉಮರಬ್ಬ ಎದುರು 1,894 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಬೆಂಗರೆ ವಾರ್ಡ್‌ನಲ್ಲಿ ಎಸ್‌ಡಿಪಿಐನ ಮುನೀಬ್‌ ಬೆಂಗರೆ 306 ಮತಗಳ ಅಂತರದಿಂದ ಬಿಜೆಪಿಯ ಗಂಗಧಾರ ಸಾಲ್ಯಾನ್‌ ಅವರನ್ನು ಮಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT