ಸೋಮವಾರ, ಅಕ್ಟೋಬರ್ 26, 2020
24 °C
ಕನ್ನಡ, ತುಳು, ಕೊಂಕಣಿ ಭಾಷೆಗಳಿಗೆ ಅನುವಾದ

ಚಿನ್ನಾರ ‘ತ್ರಿಭಾಷಾ ರಂಗ ನಾಟಕ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಿನಿಮಾ ನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಅನುವಾದಿಸಿದ ತ್ರಿಭಾಷಾ (ಕನ್ನಡ, ತುಳು, ಕೊಂಕಣಿ) ‘ರಂಗನಾಟಕ’ ಕೃತಿ ಬಿಡುಗಡೆ ಸಮಾರಂಭ ಶನಿವಾರ ನಗರದ ಮಣ್ಣಗುಡ್ಡ ರೋಟರಿ ಭವನದಲ್ಲಿ ನಡೆಯಿತು.

ಮಂಗಳೂರಿನ ರೋಟರಿ ಕ್ಲಬ್, ರಂಗ ಕಿರಣ, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬಿಂಬ ಕಾರ್ಯಕ್ರಮ ಆಯೋಜಿಸಿದ್ದವು.

ಕೃತಿ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ‘ಸತತ ಪರಿಶ್ರಮದಿಂದ ಸಾಧನೆ ಸಾಧ್ಯ. ಚಿನ್ನಾ ಅವರನ್ನು ನಾನು ಬಾಲ್ಯದಿಂದಲೇ ಗಮನಿಸುತ್ತಾ ಬಂದವನು. ಕಾಸರಗೋಡಿನ ಗಡಿಪ್ರದೇಶದಲ್ಲೇ ಇದ್ದುಕೊಂಡು, ಕರ್ನಾಟಕ ರಾಜ್ಯದಾದ್ಯಂತ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ.  ರಂಗಭೂಮಿ, ಸಿನಿಮಾ, ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಅವರ ಸತತ ಪರಿಶ್ರಮವೇ ಕಾರಣ’ ಎಂದರು. 

‘ಕಾಸರಗೋಡು ಚಿನ್ನಾ ಅವರು ಚತುರ್ಭಾಷಾ ಪ್ರವೀಣರಾಗಿದ್ದು, ಸಾಂಸ್ಕ್ರತಿಕ, ಸಾಹಿತ್ಯಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಅವರ ಈ ತ್ರಿಭಾಷಾ ಅನುವಾದಿತ ಕೃತಿ ಸಾಹಿತ್ಯ ಕ್ಷೇತ್ರದ ದಾಖಲೆಯೇ ಸರಿ’ ಎಂದು ಅವರು ಬಣ್ಣಿಸಿದರು.

‘ಚಿನ್ನಾ ಅವರಲ್ಲಿ ವಿಭಿನ್ನ ದೃಷ್ಟಿಯಲ್ಲಿ ಕೆಲಸ ಮಾಡುವ ವಿಶೇಷ ಶಕ್ತಿಯಿದೆ’ ಎಂದು ಕರ್ನಾಟಕ ತುಳು ಸಾಹಿತ್ಯ ಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಶುಭಾಶಂಸನೆ ಮಾಡಿದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ‘ಚಿನ್ನಾ ಅವರ ಕ್ರಿಯಾಶೀಲ ಗುಣಗಳನ್ನು ಶ್ಲಾಘನೀಯ. ಅವರು ದಣಿವರಿಯದ ಸಾಧಕ’ ಎಂದರು.

ಗಾಯಕ ರವೀಂದ್ರ ಪ್ರಭು ಪ್ರಾರ್ಥನೆ ಹಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ರಂಗ ಸಂಗಾತಿಯ ಶಶಿರಾಜ್ ಕಾವೂರು ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಕಿರಣದ ಅಧ್ಯಕ್ಷ ವಿಠಲ ಕುಡ್ವ ವಂದಿಸಿದರು. ಮೈಮ್ ರಾಮದಾಸ್ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ, ತುಳು, ಕೊಂಕಣಿಯ ಅನುವಾದಿತ ‘ರಂಗ ನಾಟಕ’ ಕೃತಿ ಅನುವಾದಕ ಕಾಸರಗೋಡು ಚಿನ್ನಾ ಅವರನ್ನು  ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃತಿಕಾರ ಚಿನ್ನಾರವರು ‘ಗೆಳೆಯರ ಮೆಚ್ಚುಗೆಯ ನುಡಿ ಮತ್ತಷ್ಟು ಸಾಧನೆಗಳನ್ನು ಮಾಡಲು ಸಹಕಾರಿಯಾಗುತ್ತದೆ. ಈ ಕೃತಿಯನ್ನು ಕರ್ನಾಟಕದ ಏಳು ಕಡೆಗಳಲ್ಲಿ ಬಿಡುಗಡೆಗೊಳಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.