ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು ಪ್ರಯಾಣ ಬಲು ದುಬಾರಿ

ಬಸ್ ಸಂಚಾರ ಪ್ರಾರಂಭವಾದರೂ ದರ ಏರಿಕೆಯ ಬರೆ
Last Updated 22 ನವೆಂಬರ್ 2020, 4:52 IST
ಅಕ್ಷರ ಗಾತ್ರ

ಮಂಗಳೂರು: ಸುಮಾರು 8 ತಿಂಗಳ ಬಳಿಕ ಕಾಸರಗೋಡು–ಮಂಗಳೂರಿನ ಮಧ್ಯೆ ಬಸ್‌ ಪ್ರಯಾಣ ಆರಂಭವಾಗಿದ್ದರೂ, ಪ್ರಯಾಣಿಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಪ್ರಯಾಣಿಸುವ ಬಸ್‌ ದರವನ್ನು ₹11 ರಷ್ಟು ಹೆಚ್ಚಳ ಮಾಡಲಾಗಿದೆ. ತಲಪಾಡಿಯಿಂದ ಕಾಸರಗೋಡಿನವರೆಗಿನ ಪ್ರಯಾಣಕ್ಕೆ ಶೇ 20 ರಷ್ಟು ಹೆಚ್ಚಿನ ದರ ನೀಡುವುದು ಇದೀಗ ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಕೋವಿಡ್‌–19 ನ ಸಂದಿಗ್ಧ ಪರಿಸ್ಥಿತಿಯಲ್ಲೂ ಬಸ್‌ ಪ್ರಯಾಣದರ ಹೆಚ್ಚಳ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಂಗಳೂರಿನಿಂದ ತಲಪಾಡಿಯವರೆಗೆ ಪ್ರಯಾಣದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ತಲಪಾಡಿಯಿಂದ ಕಾಸರಗೋಡಿನವರೆಗೆ ₹11 ಹೆಚ್ಚಳ ಮಾಡಲಾಗಿದೆ. ಮೊದಲು ಇದ್ದ ₹ 57 ಪ್ರಯಾಣದರವನ್ನು ₹68ಕ್ಕೆ ಹೆಚ್ಚಿಸಲಾಗಿದೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ‘ಸಹಯಾತ್ರಿ’ ಸಂಘಟನೆ, ಟ್ವೀಟ್‌ ಮೂಲಕ ಕೇರಳ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ, ‘ಕೇರಳ ಸರ್ಕಾರ ಬಸ್ ಪ್ರಯಾಣದರವನ್ನು ಹೆಚ್ಚಿಸಿದೆ. ಒಪ್ಪಂದದ ಪ್ರಕಾರ ನಾವೂ ಅದನ್ನು ಪಾಲಿಸಬೇಕಾಗಿದೆ. ಇದರಿಂದಾಗಿ ಕರ್ನಾಟಕ ಸಾರಿಗೆ ಬಸ್‌ಗಳ ಪ್ರಯಾಣದರವನ್ನು ಹೆಚ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಕೇರಳ ಮಾದರಿಗೆ ಸ್ವಾಗತ. ಕೇರಳ ಸರ್ಕಾರ ಮಂಗಳೂರು–ಕಾಸರಗೋಡು ಮಧ್ಯೆ ನಿತ್ಯ ಪ್ರಯಾಣಿಸುವವರಿಗೆ ಹೊಸ ಕೊಡುಗೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಇಂತಹ ಕ್ರಮ ಅಕ್ಷಮ್ಯ ಹಾಗೂ ನಾಚಿಕೆಗೇಡು’ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್‌ ಟೀಕಿಸಿದ್ದಾರೆ.

‘ಕೋವಿಡ್–19 ಗಿಂತ ಮೊದಲು ಸಂಚರಿಸುತ್ತಿದ್ದ ಬಸ್‌ಗಳಿಗೆ ಹೋಲಿಸಿದರೆ, ಸದ್ಯಕ್ಕೆ ಶೇ 60 ರಷ್ಟು ಬಸ್‌ಗಳು ಕಾಸರಗೋಡು–ಮಂಗಳೂರು ಮಧ್ಯೆ ಸಂಚರಿಸುತ್ತಿವೆ. ಶುಕ್ರವಾರ ಕರ್ನಾಟಕ ಸಾರಿಗೆ ಸಂಸ್ಥೆಯ 58 ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಿವೆ. ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ’ ಎಂದು ಕರ್ನಾಟಕ ಸಾರಿಗೆ ಸಂಸ್ಥೆಯ ಕಾಸರಗೋಡು ಸಂಚಾರ ನಿಯಂತ್ರಕ ಶಾಂತಾರಾಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT