ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು| ಮೂಲಸೌಕರ್ಯಕ್ಕೆ ₹25 ಕೋಟಿ: ಸಂಸದ ನಳಿನ್‌ಕುಮಾರ್ ಕಟೀಲ್

ರಥಬೀದಿಯಾಗಿ ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿ: ನಳಿನ್‌
Last Updated 22 ಜನವರಿ 2020, 15:43 IST
ಅಕ್ಷರ ಗಾತ್ರ

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೂಲಸೌಕರ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ₹25 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಬುಧವಾರ ಕಟೀಲು ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ವಿಸ್ತಾರಕ್ಕೆ ಬಹುದಿನಗಳ ಬೇಡಿಕೆ ಇದ್ದು, ಅದನ್ನು ಇದೀಗ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಮೂರುಕಾವೇರಿಯಿಂದ ಪೆರ್ಮುದೆವರೆಗಿನ ರಸ್ತೆ ವಿಸ್ತಾರಕ್ಕೆ ₹10 ಕೋಟಿ, ಅರಸೊಲುಪದವು-ದೇವರಗುಡ್ಡೆ-ನೆಲ್ಲಿತೀರ್ಥ ಸಂಪರ್ಕಿಸುವ ದೇವಾಲಯದ ಹಿಂದಿನ ರಸ್ತೆಯ ಅಭಿವೃದ್ಧಿಗೆ ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಕಟೀಲು ದೇವಾಲಯದ ಮುಂಭಾಗದ ರಸ್ತೆಯನ್ನು ಪೂರ್ಣ ಪ್ರಮಾಣದ ರಥಬೀದಿಯಾಗಿ ಅಭಿವೃದ್ಧಿಪಡಿಸಲಾಗುವುದು. ಎಲ್ಲ ವಾಹನಗಳ ಸಂಚಾರವನ್ನು ಉಳ್ಳಂಜೆ–ಕಿನ್ನಿಗೋಳಿ ರಸ್ತೆ ಮೂಲಕ ಮಾರ್ಪಡಿಸಲಾಗುವುದು. ಉಳ್ಳಂಜೆ-ಕಿನ್ನಿಗೋಳಿ ರಸ್ತೆ ವಿಸ್ತಾರ ಕಾಮಗಾರಿಯನ್ನು ₹5 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಟೀಲು ದೇವಸ್ಥಾನದಲ್ಲಿ ವಿವಾಹ ಸಮಾರಂಭಗಳು ನಡೆದ ಸಂದರ್ಭದಲ್ಲಿ ದೇವಾಲಯದ ಮುಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತದೆ. ಇದರಿಂದ ವಾಹನ ಚಾಲಕರಿಗೆ ಅನಾನುಕೂಲವಾಗುತ್ತದೆ. ರಸ್ತೆಯನ್ನು ರಥಬೀದಿಯಂತೆ ಅಭಿವೃದ್ಧಿಪಡಿಸುವ ಮೂಲಕ, ಎಲ್ಲ ವಾಹನಗಳನ್ನು ಕಟೀಲು ದೇವಾಲಯದ ಮೂಲಕ ಹಾದು ಹೋಗದೇ ಉಳ್ಳಂಜೆ-ಕಿನ್ನಿಗೋಳಿ ರಸ್ತೆಯ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ವಿವರಿಸಿದರು.

ಕಟೀಲು ದೇವಾಲಯದ ಮುಂಭಾಗದಲ್ಲಿರುವ ಸರಸ್ವತಿ ಸದನದ ರಸ್ತೆ ವಿಸ್ತಾರಗೊಳಿಸಲಾಗುವುದು. ದೇವಾಲಯಗಳ ಪಕ್ಕದಲ್ಲಿರುವ ಒಟ್ಟು 11 ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ದೇವಾಲಯದ ಬಳಿಯಿರುವ ಖಾಸಗಿ ಕಟ್ಟಡದ ಮಾಲೀಕರು ಸಹ ಬ್ರಹ್ಮಕಲಶೋತ್ಸವದ ನಂತರ ಖಾಲಿ ಮಾಡಲು ಒಪ್ಪಿಕೊಂಡಿದ್ದಾರೆ. ಆ ಕಟ್ಟಡಗಳನ್ನೂ ನೆಲಸಮ ಮಾಡಲಾಗುತ್ತದೆ ಎಂದು ತಿಳಿಸಿದರು.

ದೇವಾಲಯಕ್ಕೆ ಕಡಿಮೆ ಭೂಮಿ ಇರುವುದರಿಂದ ಅನೇಕರು ದೇವಸ್ಥಾನಕ್ಕೆ ಭೂಮಿಯನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಕೆಲವು ದಾನಿಗಳು ಖಾಸಗಿ ವ್ಯಕ್ತಿಗಳಿಂದ ಭೂಮಿಯನ್ನು ಖರೀದಿಸಿ, ದೇವಾಲಯಕ್ಕೆ ಹಸ್ತಾಂತರಿಸಲು ಮುಂದಾಗಿದ್ದಾರೆ ಎಂದರು.

ತಾತ್ಕಾಲಿಕ ಊಟದ ಹಾಲ್ ಅನ್ನು ನಿರ್ಮಿಸಿದ್ದು, ಇಲ್ಲಿ ಒಂದು ಬಾರಿ 15ಸಾವಿರ ಜನರು ಊಟ ಮಾಡಬಹುದಾಗಿದೆ. ಬ್ರಹ್ಮಕಲಶೋತ್ಸವದ ಸಮಯದಲ್ಲಿ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಊಟದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ₹1 ಕೋಟಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲು ಮುಂಬೈನ ಸಂಜೀವಿನಿ ಟ್ರಸ್ಟ್ ಮುಂದಾಗಿದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ 50 ಕೊಠಡಿಗಳ ಜತೆಗೆ ಇನ್ನೂ ಒಂಬತ್ತು ಹೊಸ ಕೊಠಡಿಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT