ಭಾನುವಾರ, ಮಾರ್ಚ್ 26, 2023
23 °C

ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಭವನ: ಭೂಮಿಪೂಜೆ 23ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಾಸರಗೋಡಿನ ಕನ್ನಡದ ಸಾಹಿತಿ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರ ಕಯ್ಯಾಯ ಕಿಞ್ಞಣ್ಣ ರೈ ಅವರ ಹೆಸರನ್ನು ಅಜರಾಮರಗೊಳಿಸಲು ಅವರ ಹೆಸರಿನಲ್ಲಿ ಬದಿಯಡ್ಕದ ಕಲ್ಲಕಳಿಯ ಬತ್ತೇರಿಯಲ್ಲಿ ‘ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನ’ ನಿರ್ಮಿಸಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠೀಯಲ್ಲಿ ಇಲ್ಲಿ ಶನಿವಾರ ಮಾಹಿತಿ ನೀಡಿದ ಕವಿತಾ ಕುಟೀರದ ಕಾರ್ಯದರ್ಶಿ, ಕಿಞ್ಞಣ್ಣ ರೈ ಅವರ ಮಗ ಡಾ. ಪ್ರಸನ್ನ ರೈ, ‘ಕರ್ನಾಟಕದ ಮುಖ್ಯಮಂತ್ರಿಯವರು ಈ ಭವನಕ್ಕೆ ₹ 2 ಕೋಟಿ ಮಂಜೂರು ಮಾಡಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದಲೂ ₹ 1.10 ಕೋಟಿ ಬಿಡುಗಡೆಯಾಗಿದೆ’ ಎಂದರು.

’ ಕಾಸರಗೋಡಿ ಮಣ್ಣಿನಲ್ಲಿ ಕನ್ನಡ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂಬ ಉದ್ದೇಶದಿಂದ ಕಿಞ್ಞಣ್ಣ ರೈ ಅವರ ಮಕ್ಕಳು ಪೆರಡಾಲದ ಕನ್ನಡ ಸಂಸ್ಥೆ ಕವಿತಾ ಕುಟೀರಕ್ಕೆ 31 ಸೆಂಟ್ಸ್‌ ಜಾಗವನ್ನು ಒದಗಿಸಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾಸರಗೋಡು ಪೆರಡಾಲದ ಕವಿತಾ ಕುಟೀರ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನ ಕಟ್ಟಡ ನಿರ್ಮಾಣ ಸಮಿತಿ ಆಶ್ರಯದಲ್ಲಿ ಕಟ್ಟಡ ಭವನದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದ್ದು. ಇದೇ 23ರಂದು ಬದಿಯಡ್ಕದ ಕಲ್ಲಕಳಿಯ ಬತ್ತೇರಿಯಲ್ಲಿ ಬೆಳಿಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಭೂಮಿಪೂಜೆ ನೆರವೇರಿಸುವರು. ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಸ್ಥಳೀಯ ಶಾಸಕ ಎನ್‌.ಎ.ನೆಲ್ಲಿಕುನ್ನು, ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಭಾಗವಹಿಸುವರು. ಬಳಿಕ ಬದಿಯಡ್ಕದ ಗುರುಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಅವರು ಕಟ್ಟಡದ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಭವನವು ತಲಾ 6000 ಚ. ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಿನ ಅಂತಸ್ತುಗಳನ್ನು ಒಳಗೊಂಡಿರಲಿದೆ. ಗ್ರಂಥಾಲಯ, ಕಂಪ್ಯೂಟರ್ ಕೊಠಡಿಗಳು ಇರಲಿವೆ’ ಎಂದರು. 

‘ಡಾ.ಮೋಹನ ಆಳ್ವ, ಕೂಳೂರು–ಕನ್ಯಾನ ಸದಾಶಿವ ಶೆಟ್ಟಿ, ಅಜಿತ್‌ ಕುಮಾರ್ ರೈ ಮಾಲಾಡಿ, ಗೋಪಿನಾಥ (ಎಂಜಿನಿಯರಿಂಗ್‌ ಸಲಹೆಗಾರ) , ಕಳ್ಳಿಗೆ ತಾರಾನಾಥ ಶೆಟ್ಟಿ (ಕಾನೂನುಸಲಹೆಗಾರ), ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ನಿರ್ದೇಶಕರು ಹಾಗೂ ಕವಿತಾ ಕುಟೀರದ ಅಧ್ಯಕ್ಷ ದುರ್ಗಾಪ್ರಸಾದ ರೈ ಮತ್ತು ಕಾರ್ಯದರ್ಶಿಯವರನ್ನು ಕಟ್ಟಡ ನಿರ್ಮಾಣ ಸಮಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ರಚಿಸಿದ್ದಾರೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರಾನಾಥ ಶೆಟ್ಟಿ, ಮುರಳಿ ಮೋಹನ ಚೋಂತಾರು, ರಾಜೇಂದ್ರ ಕಲ್ಭಾವಿ ಹಾಗೂ ದುರ್ಗಾಪ್ರಸಾದ್‌ ರೈ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು