ಮಂಗಳವಾರ, ಏಪ್ರಿಲ್ 7, 2020
19 °C
ಕಾಸರಗೋಡು: ಮುನ್ನೆಚ್ಚರಿಕಾ ಕ್ರಮವಾಗಿ ಆದೇಶ ನೀಡಿದ ಕೇರಳ ಸರ್ಕಾರ

ಕೋವಿಡ್: ಕೇಂದ್ರೀಯ ವಿ.ವಿ ಬಂದ್‌

ಮಹೇಶ್‌ ಎಸ್‌. ಕನ್ನೇಶ್ವರ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ಭೀತಿಯಿಂದಾಗಿ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ತರಗತಿ ಬಂದ್ ಮಾಡುವಂತೆ ಕೇರಳ ಸರ್ಕಾರ ಆದೇಶಿಸಿದೆ.

ಇದೇ 11ರಿಂದ 31ರವರೆಗೆ ಮುಂದಿನ ಆದೇಶ ಬರುವವರಿಗೆ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಸದಂತೆ ಸುತ್ತೋಲೆಯಲ್ಲಿ ಸರ್ಕಾರ ತಿಳಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಮಂಗಳವಾರ ತಡ ರಾತ್ರಿ ವಿ.ವಿ ಕುಲಪತಿ ಪ್ರೊ. ಗೋಪು ಕುಮಾರ್‌ ನೇತೃತ್ವದಲ್ಲಿ ದಿಢೀರ್‌ ಸಭೆ ನಡೆಸಿ ತರಗತಿ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ವಿಶ್ವವಿದ್ಯಾಲಯದ 27 ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಒಟ್ಟಾಗಿ ಸೇರುವಂತಿಲ್ಲ. ಪಾಠ, ಪ್ರವಚನ ಕೇಳುವಂತಿಲ್ಲ. ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಇರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹೊರಗೆ ಹೋಗುವಂತಿಲ್ಲ. ಕ್ಯಾಂಪಸ್‌ಗೆ ಬಸ್‌ನಲ್ಲಿ ವಿದ್ಯಾರ್ಥಿಗಳು ತರಗತಿ ಬರುವಂತಿಲ್ಲ ಎಂದು ಕುಲಪತಿ ಸುತ್ತೋಲೆ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುವುದರ ಮೇಲೆಯೂ ನಿಷೇಧ ಹಾಕಲಾಗಿದೆ. ಹಾಸ್ಟೆಲ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಅಲ್ಲಿಯೇ ಮಾಡಿಕೊಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಆಯಾ ವಿಭಾಗಗಳ ಮುಖ್ಯಸ್ಥರಿಗೆ ಲಿಖಿತ ಆದೇಶದ ಸಂದೇಶವು ರವಾನೆ ಆಗಿದೆ.

ಕ್ಯಾಂಪಸ್‌ ಆವರಣದಲ್ಲಿ ಗುಂಪಾಗಿ ನಡೆಸುವಂತಹ ಅಧ್ಯಯನ ಪ್ರವಾಸ, ಶೈಕ್ಷಣಿಕ ಕೈಗಾರಿಕಾ ಭೇಟಿ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರಸಂಕಿರಣ, ಆಯಾ ವಿಭಾಗದ ಮುಖ್ಯಸ್ಥರ ಹೊರ ದೇಶಗಳ ಪ್ರವಾಸ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ವಿಚಾರಗೋಷ್ಠಿಗಳನ್ನೂ ರದ್ದು ಮಾಡಲಾಗಿದೆ.

‘ಕೇರಳ ರಾಜ್ಯದಲ್ಲಿ ಕಳೆದ ವರ್ಷ ನಿಫಾ ಸೋಂಕು ವ್ಯಾಪಕವಾಗಿದ್ದಾಗ ವಿವಿಯ ಶೈಕ್ಷಣಿಕ ಚಟುವಟಿಕೆಗಳನ್ನು ಕೆಲ ದಿನಗಳ ಬಂದ್‌ ಮಾಡಲಾಗಿತ್ತು. ಈಗ ಕೋವಿಡ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ. ಗುಂಪು ಗುಂಪಾಗಿ ಸೇರಿ ನಡೆಸುವಂತಹ ಕಾರ್ಯಕ್ರಮ ರದ್ದು ಮಾಡಲಾಗಿದೆ. ತರಗತಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಜನರ ಜತೆಗೆ ಯಾವುದೇ ಸಂಪರ್ಕ ಹೊಂದುವುದು, ಕ್ಯಾಂಪಸ್‌ ಒಳಗೆ ಹೊರಗಿನವರನ್ನು ಒಳ ಬರದಂತೆ ತಡೆಯಬೇಕಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಹಾಸ್ಟೆಲ್‌ಗಳಲ್ಲಿ ಮಾಡಿಕೊಡಲಾಗುತ್ತದೆ’ ಎಂದು ಕೇರಳ ಕೇಂದ್ರೀಯ ವಿ.ವಿ ಕುಲಸಚಿವ ರಾಧಾಕೃಷ್ಣ ನಾಯರ್‌ ತಿಳಿಸಿದರು.

ಇದೇ 12 ರಂದು ನಡೆಯಬೇಕಾಗಿದ್ದ 'ಅನುವಾದ-ಅನುಸಂಧಾನ ತತ್ವ ಮತ್ತು ಪ್ರಯೋಗ' ವಿಚಾರಸಂಕಿರಣ ಕೂಡಾ ಮುಂದೂಡಲಾಗಿದೆ. ಪ್ರೊ. ಬಿ. ಶಿವರಾಮ ಶೆಟ್ಟಿ, ಕನ್ನಡ ವಿಭಾಗದ ಸಂಚಾಲಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು