ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಹೆಚ್ಚಳ ಬೇಡ: ಗುಣಮಟ್ಟದ ಸೇವೆ ನೀಡಿ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಭೆಯಲ್ಲಿ ಗ್ರಾಹಕರ ಆಗ್ರಹ
Last Updated 7 ಫೆಬ್ರುವರಿ 2019, 13:03 IST
ಅಕ್ಷರ ಗಾತ್ರ

ಮಂಗಳೂರು: ಕೇವಲ ದರ ಹೆಚ್ಚಿಸುವುದರಿಂದ ಪ್ರಯೋಜನ ಆಗುವುದಿಲ್ಲ. ದರ ಹೆಚ್ಚಿಸುವ ಮೊದಲು ಗುಣಮಟ್ಟದ ಸೇವೆಯನ್ನು ಒದಗಿಸಲು ಮೆಸ್ಕಾಂ ಮುಂದಾಗಬೇಕು ಎಂದು ಗ್ರಾಹಕರು ಆಗ್ರಹಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್‌ ಮೀನಾ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ದರ ಪರಿಷ್ಕರಣೆ ವಿಚಾರಣೆ ಸಭೆಯಲ್ಲಿ ಮಾತನಾಡಿದ ಬಹುತೇಕ ಜನರು, ಒಳ್ಳೆಯ ಸೇವೆ ಎನ್ನುವುದು ಮರಿಚಿಕೆಯಾಗಿದೆ. ಇದನ್ನು ಸುಧಾರಿಸದ ಹೊರತು, ದರ ಹೆಚ್ಚಿಸುವುದು ಬೇಡ ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ಮಾತನಾಡಿ, ಐಪಿ ಸೆಟ್‌ಗಳ ಹೆಸರಿನಲ್ಲಿ ಸರ್ಕಾರಗಳಿಂದ ಬರುವ ಸಬ್ಸಿಡಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಎಲ್‌ಟಿ ವಿದ್ಯುತ್‌ ಮಾರ್ಗಗಳ ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಬೆಸ್ಕಾಂಗೆ ಹೋಲಿಸಿದರೆ, ಮೆಸ್ಕಾಂನ ವಿದ್ಯುತ್‌ ಖರೀದಿ ದರ ಹೆಚ್ಚಾಗಿದೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮಾರ್ಗಸೂಚಿಯಂತೆ ಟೈಮರ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ವಿದ್ಯುತ್ ಸಂಪರ್ಕಗಳ ಸರ್ವೀಸ್‌ ವೈಯರ್‌ಗಳನ್ನು ಬದಲಿಸುತ್ತಿಲ್ಲ ಎಂದು ದೂರಿದರು.

ವಿದ್ಯುತ್‌ ಉಳಿತಾಯ ಮಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗಿದೆ. ಅವುಗಳನ್ನು ಶೇ 60 ರಷ್ಟು ಬಲ್ಬ್‌ಗಳು ಈಗಾಗಲೇ ಹಾಳಾಗಿವೆ. ಇಂತಹ ಕಳಪೆ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೈನಂದಿನ ವ್ಯವಹಾರವನ್ನು ಇನ್ನಷ್ಟು ಸರಳೀಕರಣ ಮಾಡಬೇಕು. ಹೊಸ ಕೈಗಾರಿಕೆಗಳಿಗೆ ಹೊಸ ದರ ನಿಗದಿಪಡಿಸಿ, ಆದೇಶ ಹೊರಡಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಪ್ರತಿನಿಧಿಗಳು ಆಗ್ರಹಿಸಿದರು.

ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ, ಕೈಗಾರಿಕೆಗಳ ಒಂದಕ್ಕಿಂತ ಹೆಚ್ಚಿನ ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಮಂಜುಗಡ್ಡೆ ಹಾಗೂ ಶೀತಲೀಕರಣ ಘಟಕಗಳ ಸಂಘದ ರಾಜೇಂದ್ರ ಮಾತನಾಡಿ, ಶೀತಲೀಕರಣ ಘಟಕಗಳನ್ನು ಸರ್ಕಾರ ಋತು ಆಧಾರಿತ ಕೈಗಾರಿಕೆ ಎಂದು ಘೋಷಿಸಿದ್ದರೂ, ಅದರ ಪ್ರಯೋಜನ ಘಟಕಗಳಿಗೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಸಮುದ್ರ ತೀರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೀತಲೀಕರಣ ಘಟಕಗಳಿಗೆ ವಿಶೇಷ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರಾಮಕೃಷ್ಣ ಮಾತನಾಡಿ, ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ₹10 ಸಾವಿರ ಕೇಳಲಾಗುತ್ತಿದೆ. ಇದು ಸರಿಯಲ್ಲ. ಕೃಷಿಯಲ್ಲಿ ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್‌ಗಳ ಬಳಕೆಗೆ ಮೆಸ್ಕಾಂ ಉತ್ತೇಜನ ನೀಡಬೇಕು ಎಂದು ಸಲಹೆ ಮಾಡಿದರು.

ಶಿವಮೊಗ್ಗದ ವೆಂಕಟಗಿರಿ ಮಾತನಾಡಿ, ಚಾರಿಟಬಲ್‌ ಆಸ್ಪತ್ರೆಗಳು ಹಾಗೂ ಸಂಸ್ಥೆಗಳಿಗೆ ನೀಡುವ ರಿಯಾಯಿತಿಯ ದುರ್ಬಳಕೆ ಆಗದಂತೆ ತಡೆಗಟ್ಟಲು ಎಚ್‌ಟಿ2ಸಿ1 ವಿಭಾಗದ ವಿದ್ಯುತ್‌ ಬಳಕೆದಾರರ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಬೇಕು. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕಂಪನಿಗಳು ಐಟಿ,ಬಿಟಿ ನೀತಿಯಡಿ ವಿದ್ಯುತ್‌ ದರದಲ್ಲಿ ರಿಯಾಯಿತಿ ಪಡೆಯುತ್ತಿದ್ದು, ಇದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದರು.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ರಾಮಮೋಹನ್‌ ಮಾತನಾಡಿ, ವಿಮಾನ ನಿಲ್ದಾಣದ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯದಿಂದ ಕೈಗಾರಿಕೆಗೆ ಬದಲಿಸಬೇಕು ಎಂದು ಮನವಿ ಮಾಡಿದರು.

ಆಯೋಗದ ಸದಸ್ಯರಾದ ಎಚ್‌.ಡಿ. ಅರುಣಕುಮಾರ್‌ ಹಾಗೂ ಎಚ್‌.ಎಂ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT