ತಲೆಮರೆಸಿಕೊಂಡೇ ಜಾಮೀನು ಕೋರಿದ ಕೆಎಚ್‌ಬಿ ಎಂಜಿನಿಯರ್‌!

7
ವಾಹನ ಚಾಲಕನ ಮೂಲಕ ಕಚೇರಿಗೆ ರಜೆ ಅರ್ಜಿ ರವಾನಿಸಿದ ಆರೋಪಿ

ತಲೆಮರೆಸಿಕೊಂಡೇ ಜಾಮೀನು ಕೋರಿದ ಕೆಎಚ್‌ಬಿ ಎಂಜಿನಿಯರ್‌!

Published:
Updated:

ಮಂಗಳೂರು: ಪರಿಶಿಷ್ಟ ಜಾತಿಯ ಕುಟುಂಬವೊಂದು ಸಾಲಕ್ಕಾಗಿ ಅಡಮಾನ ಇರಿಸಿದ್ದ ಸ್ಥಿರಾಸ್ತಿ ದಾಖಲೆ ಹಿಂದಿರುಗಿಸಲು ಲಂಚ ಪಡೆದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಎ.ವಿಜಯಕುಮಾರ್‌ ಭಂಡಾರಿ ತಲೆಮರೆಸಿಕೊಂಡೇ ನಿರೀಕ್ಷಣಾ ಜಾಮೀನು ಕೋರಿದ್ದಾರೆ!

ವಿಜಯಕುಮಾರ್‌ ಸೂಚನೆಯಂತೆ ಬಜ್ಪೆಯ ಗಂಗಾಧರ್ ಎಂಬುವವರಿಂದ ₹ 12,000 ಲಂಚ ಪಡೆಯುತ್ತಿದ್ದಾಗ ಕೆಎಚ್‌ಬಿ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಸೆಪ್ಟೆಂಬರ್‌ 18ರ ಸಂಜೆ ಬಂಧಿಸಿದ್ದರು. ವಿಷಯ ತಿಳಿದು ನಾಪತ್ತೆಯಾಗಿರುವ ಎಇಇ 19 ದಿನಗಳಿಂದಲೂ ತನಿಖಾ ತಂಡದ ಕೈಗೆ ಸಿಗದೇ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಸಹಾಯಕ ಕಂದಾಯ ಅಧಿಕಾರಿಯನ್ನು ಬಂಧಿಸುವಾಗ ವಿಜಯಕುಮಾರ್‌ ಕಚೇರಿಯಿಂದ ಹೊರಗಿದ್ದರು. ವಿಷಯ ತಿಳಿದ ತಕ್ಷಣವೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದರು. ತಕ್ಷಣದಿಂದಲೇ ಅವರ ಬಂಧನಕ್ಕೆ ಶೋಧ ಆರಂಭಿಸಲಾಗಿತ್ತು. ಎಸಿಬಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಡಿವೈಎಸ್‌ಪಿ ಸುಧೀರ್‌ ಎಂ.ಹೆಗ್ಡೆ ಮತ್ತು ಇನ್‌ಸ್ಪೆಕ್ಟರ್‌ ಯೋಗೇಶ್‌ ಕುಮಾರ್‌ ನೇತೃತ್ವದ ತಂಡ 19 ದಿನಗಳ ಕಾಲ ಹಲವು ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.

ಕಚೇರಿಗೆ ರಜೆ ಅರ್ಜಿ: ವಿಜಯಕುಮಾರ್ ವಾಹನ ಚಾಲಕನ ಮೂಲಕ ಕಚೇರಿಗೆ ರಜೆ ಅರ್ಜಿಯೊಂದನ್ನು ಕಳುಹಿಸಿದ್ದಾರೆ. ತಮ್ಮ ಸ್ವಗ್ರಾಮದಲ್ಲಿ ದೇವತಾ ಕಾರ್ಯ ಇರುವುದರಿಂದ ಮೂರು ದಿನಗಳ ರಜೆ ನೀಡಬೇಕು ಎಂಬ ಕೋರಿಕೆ ಅದರಲ್ಲಿದೆ. ಸೆ.19ರ ಬೆಳಿಗ್ಗೆ ಕೆಎಚ್‌ಬಿ ಎಇಇ ಕಚೇರಿಯ ಮೇಜಿನ ಮೇಲೆ ಪ್ರತ್ಯಕ್ಷವಾಗಿದ್ದ ರಜೆ ಅರ್ಜಿಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಕೊಂಚಾಡಿಯಲ್ಲಿರುವ ಆರೋಪಿ ಅಧಿಕಾರಿಯ ಮನೆಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಸೆ.18ರ ರಾತ್ರಿಯಿಂದಲೇ ಅವರು ಮನೆಗೆ ಬಂದಿಲ್ಲ ಎಂದು ವಿಜಯಕುಮಾರ್‌ ಪತ್ನಿ ಹೇಳಿಕೆ ನೀಡಿದ್ದಾರೆ. ಕುಂದಾಪುರ ತಾಲ್ಲೂಕಿನಲ್ಲಿರುವ ಅಧಿಕಾರಿಯ ಸ್ವಗ್ರಾಮಕ್ಕೂ ಹೋಗಿ ಶೋಧ ನಡೆಸಲಾಗಿದೆ. ಅಲ್ಲಿ ಯಾವುದೇ ದೇವತಾ ಕಾರ್ಯ ಇರಲಿಲ್ಲ ಎಂಬುದಾಗಿ ಅವರ ತಾಯಿ ಮತ್ತು ಸಹೋದರಿ ಹೇಳಿಕೆ ನೀಡಿದ್ದಾರೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ನಿರೀಕ್ಷಣಾ ಜಾಮೀನು ಕೋರಿಕೆ: ಬಂಧನಕ್ಕೆ ಎಸಿಬಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿರುವುದರ ನಡುವೆಯೇ ಮಂಗಳೂರಿನ ಜಿಲ್ಲಾ ಪ್ರಧಾನ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅಕ್ಟೋಬರ್‌ 3ರಂದು ಅರ್ಜಿ ಸಲ್ಲಿಸಿರುವ ವಿಜಯಕುಮಾರ್, ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾರೆ.

ಅ.4ರಂದು ಮೂರನೇ ಹೆಚ್ಚುವರಿ ಜಿಲ್ಲಾ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದಿದೆ. ಆರೋಪಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಎಸಿಬಿ ಆಕ್ಷೇಪಣೆ ಸಲ್ಲಿಸಿದೆ. ‘ವಿಜಯಕುಮಾರ್‌ ಲಂಚ ಪ್ರಕರಣದಲ್ಲಿ ಘೋಷಿತ ಆರೋಪಿ. ತಲೆಮರೆಸಿಕೊಂಡಿರುವ ಅವರಿಗೆ ಜಾಮೀನು ನೀಡಬಾರದು’ ಎಂದು ಎಸಿಬಿ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಕ್ಷೇಪಣೆ ಸಲ್ಲಿಸಿದ್ದಾರೆ. ಮಂಗಳವಾರ ಮತ್ತೆ ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಅಮಾನತಿಗೆ ಶಿಫಾರಸು: ಲಂಚ ಪ್ರಕರಣದಲ್ಲಿ ವಿಜಯಕುಮಾರ್‌ ನೇರವಾಗಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷ್ಯಗಳಿರುವುದರಿಂದ ಅವರನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಿ ಎಸಿಬಿ ಅಧಿಕಾರಿಗಳು ಕೆಎಚ್‌ಬಿಗೆ ವರದಿ ಸಲ್ಲಿಸಿದ್ದಾರೆ. ಆದರೆ, ಗೃಹ ಮಂಡಳಿಯಿಂದ ಈವರೆಗೆ ಯಾವುದೇ ಆದೇಶ ಹೊರಬಿದ್ದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !