ಶನಿವಾರ, ಜನವರಿ 28, 2023
21 °C
ಕೆಐಒಸಿಎಲ್‌ ಸಿಎಸ್‌ಆರ್‌ ನಿಧಿಯಿಂದ ₹ 2 ಕೋಟಿ ಮೊತ್ತದ ಚೆಕ್ ವಿತರಣೆ

‘ಸಂಸ್ಥೆಗಳ ನೆರವು ದುರುಪಯೋಗ ಆಗದಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ಸಿಎಸ್‌ಆರ್‌ ನಿಧಿಯಡಿ ವಿವಿಧ ಸಂಸ್ಥೆಗಳು, ಇಲಾಖೆಗಳಿಗೆ ಒಟ್ಟು ₹2 ಕೋಟಿ ಮೊತ್ತದ ಚೆಕ್ ಅನ್ನು ಸಂಸದ ನಳಿನ್‌ಕುಮಾರ್ ಕಟೀಲ್ ವಿತರಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, ಉತ್ತಮ ಆಶಯದೊಂದಿಗೆ ವಿವಿಧ ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿಯಲ್ಲಿ ನೀಡುವ ಸೌಲಭ್ಯಗಳು ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಈ ಹಿಂದೆ ಶಾಲೆಯೊಂದರ ಕಟ್ಟಡ ದುರ್ಬಲ ಸ್ಥಿತಿಯಲ್ಲಿರುವ ವರದಿಯನ್ನು ಮಾಧ್ಯಮದ ಮೂಲಕ ತಿಳಿದು, ಅದಕ್ಕೆ ನೆರವು ನೀಡಲಾಗಿತ್ತು. ಆದರೆ, ಆ ಶಾಲೆ ಈಗ ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿದ್ದು, ಮುಚ್ಚುವ ಹಂತಕ್ಕೆ ಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಕೂಡ ಆ ಶಾಲೆಯ ಶಿಕ್ಷಕರು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಹೊಸ ಉದ್ಯಮಗಳು ಆರಂಭವಾಗುವಾಗ ಪರಿಸರ ರಕ್ಷಣೆ ಹಿನ್ನೆಲೆಯಲ್ಲಿ ಸ್ಥಳೀಯ ವಿರೋಧ, ಉದ್ಯೋಗದ ಬೇಡಿಕೆಗಳು ಬರುವುದು ಸಹಜ. ಕೆಐಒಸಿಎಲ್ ಇವೆರಡೂ ಬೇಡಿಕೆಗಳನ್ನು ಪೂರೈಸಿದ ಸಂಸ್ಥೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲಿ ಮೂರು ಕಡೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕ, ವಿವಿಧೆಡೆ ಕಿಟ್, ಆಂಬುಲೆನ್ಸ್ ನೀಡುವ ಮೂಲಕ ನೆರವಾಗಿದೆ. ಪ್ರಸ್ತುತ ಆರೋಗ್ಯ, ಸೇವೆ, ರಕ್ಷಣೆ, ಶಿಕ್ಷಣ ಹೀಗೆ ವಿಂಗಡಣೆ ಮಾಡಿಕೊಂಡು ಸಿಎಸ್‌ಆರ್‌ ನಿಧಿಯನ್ನು ವಿತರಿಸಿದೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ‘ಕೆಐಒಸಿಎಲ್ ಸದಾ ಜಿಲ್ಲಾಡಳಿತಕ್ಕೆ ನೆರವು ನೀಡುತ್ತದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಸ್ಥಾಪನೆಗೆ ಸಂಸ್ಥೆ ನೆರವು ನೀಡಿದೆ. ಕಿಡ್ನಿ ಸಮಸ್ಯೆ ಎದುರಿಸುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಡಯಾಲಿಸಿಸ್‌ಗೆ ಬರುವವರು ಕಾಯುವಂತಾಗಬಾರದು ಎಂಬುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ 12 ಡಯಾಲಿಸಿಸ್ ಯಂತ್ರಗಳ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸಬೇಕಾಗಿದೆ’ ಎಂದರು. ಮಕ್ಕಳ ಸಹಾಯವಾಣಿಗೆ ತೀರಾ ಅಗತ್ಯವಿದ್ದ ವಾಹನ ಖರೀದಿಗೆ ಕೆಐಒಸಿಎಲ್ ಧನ ಸಹಾಯ ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಐಒಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ರಾವ್, ಹಣಕಾಸು ವಿಭಾಗದ ನಿರ್ದೇಶಕ ಸ್ವಪನ್ ಕುಮಾರ್, ಉತ್ಪಾದನೆ ಮತ್ತು ಯೋಜನೆ ವಿಭಾಗದ ನಿರ್ದೇಶಕ ಭಾಸ್ಕರ್ ರೆಡ್ಡಿ, ವಾಣಿಜ್ಯ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ ಮೊಹಪಾತ್ರ, ಎಚ್‌ಆರ್ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಜಿ.ವಿ.ಕಿರಣ್, ಮುರ್ಗೇಶ್ ಎಚ್‌. ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.