‘ಜನರಲ್ಲಿ ಸಂವೇದನೆ ಮೂಡಿಸುವುದು ಮುಖ್ಯ’

7
ವಿಶ್ವ ಆ್ಯಂಬುಲೆನ್ಸ್ ದಿನ: ಕೆಎಂಸಿಯಿಂದ ಸಾರ್ವಜನಿಕರಿಗೆ ತರಬೇತಿ

‘ಜನರಲ್ಲಿ ಸಂವೇದನೆ ಮೂಡಿಸುವುದು ಮುಖ್ಯ’

Published:
Updated:
Prajavani

ಮಂಗಳೂರು: ವಿಶ್ವ ಆಂಬುಲೆನ್ಸ್‌ ದಿನದ ಅಂಗವಾಗಿ ‘ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಜೀವ ಉಳಿಸುವ ತಂತ್ರಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಕಾರ್ಯಕ್ರಮ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ತರಬೇತಿ ನೀಡುವ ಗುರಿ ಹೊಂದಿರುವ ಅಭಿಯಾನ, ಸಾಮಾನ್ಯ ಸಾರ್ವಜನಿಕರಿಗೆ ಸಿಪಿಆರ್(ಕಾರ್ಡಿಯೋಪಲ್ಮನರಿ ರಿಸಸಿಟೇಷನ್)ನಂತಹ ಜೀವ ಉಳಿಸುವ ತಂತ್ರಗಳಲ್ಲಿ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್, ಬಹಳಷ್ಟು ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವುದು ಅಥವಾ ಜೀವ ಕಳೆದುಕೊಳ್ಳುತ್ತಿದ್ದು, ಅವರ ಜೀವಗಳನ್ನು ಉಳಿಸುವಲ್ಲಿ ಆಂಬುಲೆನ್ಸ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಆಂಬುಲೆನ್ಸ್‌ಗಳ ಕಡೆಗೆ ಜನರು ನಿರ್ಲಕ್ಷ್ಯ ವಹಿಸುತ್ತಾರೆ. ಅನೇಕ ಬಾರಿ ಅವುಗಳು ಮುಂದೆ ಸಾಗಲು ದಾರಿ ಮಾಡಿಕೊಡುವುದಿಲ್ಲ. ಆಂಬುಲೆನ್ಸ್‌ವೊಂದಕ್ಕೆ ದಾರಿ ಬಿಟ್ಟುಕೊಡುವುದು ಎಷ್ಟು ಗಂಭೀರ ಮತ್ತು ಪ್ರಮುಖ ಎಂಬುದರ ಬಗ್ಗೆ ಜನರಲ್ಲಿ ಸಂವೇದನೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಜನರು ಇದನ್ನು ಅರ್ಥ ಮಾಡಿಕೊಂಡರೆ ಈ ನಿಟ್ಟಿನಲ್ಲಿ ಅರ್ಧ ಹೋರಾಟ ಗೆದ್ದಂತೆ’ ಎಂದು ಅಭಿಪ್ರಾಯಪಟ್ಟರು.

ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಎಷ್ಟು ಅಗತ್ಯ ಎಂಬುದನ್ನು ಅವರಿಗೆ ತಿಳಿಹೇಳಲಾಗುತ್ತದೆ. ಇದಕ್ಕಾಗಿಯೇ ಮಣಿಪಾಲ್ ಆಸ್ಪತ್ರೆ ಸಾರ್ವಜನಿಕರಿಗೆ ಸಿಪಿಆರ್(ಕಾರ್ಡಿಯೋಪಲ್ಮನರಿ ರಿಸಸಿಟೇಷನ್)ನಂತಹ ಜೀವ ಉಳಿಸುವ ತಂತ್ರಗಳ ತರಬೇತಿ ನೀಡಲಿದೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕಿ ಹೇಳಿದರು.

ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ತಜ್ಞರಾದ ಡಾ. ಜೀದು ರಾಧಾಕೃಷ್ಣನ್ ಮಾತನಾಡಿ, ಜೀವನದಲ್ಲಿ ಕೆಲವು ಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಕ್ಷಣಾರ್ಧದಷ್ಟು ವಿಳಂಬವೂ ಕೂಡ ಒಬ್ಬರ ಜೀವನವನ್ನು ತೀವ್ರ ರೀತಿಯಲ್ಲಿ ಬದಲಿಸಬಲ್ಲದು. ಆಂಬುಲೆನ್ಸ್‌ಗಳ ಪ್ರಾಮುಖ್ಯತೆ ಮತ್ತು ಜೀವ ಉಳಿಸುವಲ್ಲಿ ಅವು ವಹಿಸುವ ಪಾತ್ರದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಹೇಳಿದರು.

‘ಸುವರ್ಣ ಗಂಟೆ ಕುರಿತು ಜಾಗೃತಿ ಹೆಚ್ಚಿಸುವಲ್ಲಿ ನಮ್ಮ ಪ್ರಯತ್ನ ಹೆಚ್ಚಿಸಲು ಮತ್ತು ಮೂಲ ಜೀವ ಬೆಂಬಲದ ತಂತ್ರದೊಂದಿಗೆ ಸಾರ್ವಜನಿಕರನ್ನು ಸಬಲೀಕರಣ ಮಾಡಲು, ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆ, ಪತ್ರಕರ್ತರ ಒಕ್ಕೂಟ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಶಾಲೆಗಳಿಗೆ ಸಿಪಿಆರ್ ತರಬೇತಿಯನ್ನು ನಾವು ಪೂರೈಸಲಿದ್ದೇವೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !