ಕೊಡಗಿನ ಮಳೆ ವಿಚಾರ -ಪರಸ್ಪರ ಹಲ್ಲೆ : ಇಬ್ಬರು ಆಸ್ಪತ್ರೆಗೆ ದಾಖಲು

7

ಕೊಡಗಿನ ಮಳೆ ವಿಚಾರ -ಪರಸ್ಪರ ಹಲ್ಲೆ : ಇಬ್ಬರು ಆಸ್ಪತ್ರೆಗೆ ದಾಖಲು

Published:
Updated:

ಪುತ್ತೂರು : ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಠಾಣೆಯಲ್ಲಿ ಇತ್ತಂಡ ಪ್ರಕರಣ ದಾಖಲಿಸಿವೆ.

 ಕೊಂಬೆಟ್ಟು ನಿವಾಸಿ ವಸಂತಕುಮಾರ್ ನಾಯ್ಕ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇನ್ನೊಂದು ತಂಡದ ಕೊಂಬೆಟ್ಟು ನಿವಾಸಿ ರಾಜೇಶ್  ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಇಬ್ಬರೂ ಪರಸ್ಪರ ಆರೋಪ ಹೊರಿಸಿದ್ದಾರೆ.

‘ನಾನು ಕಳೆದ ಶನಿವಾರ ಕೊಂಬೆಟ್ಟಿನ ಶರತ್ ಎಂಬವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕೊಂಬೆಟ್ಟು ಕಡೆಗೆ ತೆರಳುತ್ತಿದ್ದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತ್ತು. ಬೈಕನ್ನು ರಸ್ತೆ ಬದಿ ನಿಲ್ಲಿಸಿ ಕೊಂಬೆಟ್ಟು ತಿರುವು ರಸ್ತೆಯ ಬಳಿಯ ಅಂಗಡಿಯೊಂದರ ಬಳಿಗೆ ತೆರಳಿ ಅಲ್ಲಿ ನಾವು ಕೊಡಗಿನಲ್ಲಿ ಮಳೆಯಿಂದಾಗ ಅನಾಹುತಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ರಾಜೇಶ್ ಮತ್ತು ದೇವಿಪ್ರಸಾದ್ ಎಂಬವರು, ಅಲ್ಲಿ ಮಳೆ ಬಂದರೆ ನಿಮಗೆ ಏನು ಎಂದು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ನಾನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಮರುದಿನ ಬಿಡುಗಡೆಗೊಂಡು ತೆರಳುತ್ತಿದ್ದ ವೇಳೆ ಹಾರಾಡಿ ಬಳಿ ರಾಜೇಶ್ ಮತ್ತೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ವಸಂತ್‍ಕುಮಾರ್ ನಾಯ್ಕ ಆರೋಪಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿರುವ ರಾಜೇಶ್ ‘ ನಾನು ಪುತ್ತೂರಿನ ಹೋಟೆಲ್ ಒಂದರಲ್ಲಿ ಊಟ ಮಾಡಿ ಬೊಳುವಾರು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮಳೆ ಬಂದಿತ್ತು.  ನಿರಾಳ ಬಾರ್ ಸಮೀಪ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಅಂಗಡಿಯೊಂದರ ಪಕ್ಕದಲ್ಲಿ ನಿಂತುಕೊಂಡಿದ್ದ ವೇಳೆ ಅಲ್ಲಿಗೆ ಬಂದ ವಸಂತ್‍ಕುಮಾರ್ ನಾಯ್ಕ ಮತ್ತು ಶರತ್ ಎಂಬವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ಇತ್ತಂಡದ ಪ್ರಕರಣ ದಾಖಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !