ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣಿ ಭಾಷೆಗೂ ಉಜ್ವಲ ಭವಿಷ್ಯ: ಸಾವಂತ್‌

ವಿಶ್ವ ಕೊಂಕಣಿ ಕೇಂದ್ರ: ಶ್ರೇಷ್ಠತಾ ಕೇಂದ್ರ ಉದ್ಘಾಟನೆ, ಬಸ್ತಿ ವಾಮನ ಶೆಣೈ ಪ್ರತಿಮೆ, ಮನೋಹರ ಪರಿಕ್ಕರ್‌ ಭಾವಚಿತ
Last Updated 9 ಫೆಬ್ರುವರಿ 2023, 4:55 IST
ಅಕ್ಷರ ಗಾತ್ರ

ಮಂಗಳೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಯಾ ರಾಜ್ಯಗಳ ಭಾಷೆಗೂ ಉತ್ತೇಜನ ನೀಡಲಾಗುತ್ತಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿರುವ ಕೊಂಕಣಿ ಭಾಷೆ ಕಲಿತವರಿಗೂ ಇದರಿಂದ ಅನುಕೂಲವಾಗಲಿದೆ. ಕೊಂಕಣಿ ಭಾಷೆಗೂ ಉಜ್ವಲ ಭವಿಷ್ಯ ಇದೆ’ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅಭಿಪ್ರಾಯಪಟ್ಟರು.

ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ಸ್ಥಾಪಿಸಿರುವ ಸಂಸ್ಥೆಯ ರೂವಾರಿ ದಿ.ಬಸ್ತಿ ವಾಮನ ಶೆಣೈ ಹಿತ್ತಾಳೆಯ ಪ್ರತಿಮೆಯನ್ನು ಮತ್ತು ಸಂಸ್ಥೆಯ ಕೀರ್ತಿ ಮಂದಿರದಲ್ಲಿ (ಹಾಲ್‌ ಆಫ್‌ ಫೇಮ್‌) ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ‍್ರಿಕರ್ ಭಾವಚಿತ್ರವನ್ನು ಅವರು ಬುಧವಾರ ಅನಾವರಣಗೊಳಿಸಿದರು. ಇಂದಿರಾ ಮತ್ತು ಪಿ.ಗಡಾಯಿ ಲಕ್ಷ್ಮಣ ಪೈ ಶ್ರೇಷ್ಠತಾ ಕೇಂದ್ರವನ್ನು ಹಾಗೂ ಸೀತಾ ಮತ್ತು ದರ್ಬೆ ರಮಾನಾಥ ನಾಯಕ್ ಪ್ರದರ್ಶನಾ ಕೊಠಡಿಯನ್ನು ಉದ್ಘಾಟಿಸಿದರು.

ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆಯಾ ರಾಜ್ಯದ ಆಡುಭಾಷೆಯಲ್ಲೇ ಶಿಕ್ಷಣ ನೀಡುವುದಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2022ರಲ್ಲಿಆದ್ಯತೆ ನೀಡಲಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣವನ್ನೂ ತಾಯಿ ನುಡಿಯಲ್ಲೇ ಪಡೆಯುವ ಅವಕಾಶ ಕಲ್ಪಿಸಲಾಗುತ್ತಿದೆ. ಮಧ್ಯಪ್ರದೇಶ, ಕರ್ನಾಟಕ ಹಾಗೂ ಗುಜರಾತ್‌ನಂತಹ ರಾಜ್ಯಗಳು ತಮ್ಮ ನಾಡಿನ ಭಾಷೆಯಲ್ಲೇ ಉನ್ನತ ಶಿಕ್ಷಣದ ಪಠ್ಯಗಳನ್ನು ರೂಪಿಸುತ್ತಿವೆ. ಗೋವಾ ಕೂಡಾ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ’ ಎಂದರು.

‘ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್‌) ಮೂಲಕ ಕೃತಿಗಳನ್ನು ಕೊಂಕಣಿಗೆ ತರ್ಜುಮೆ ಮಾಡಲು ಅವಕಾಶವಿದೆ. ಗೋವಾದಲ್ಲಿ ಕೊಂಕಣಿ ಅಕಾಡೆಮಿಗೆ ಸುಸಜ್ಜಿತ ಕಟ್ಟಡವನ್ನೂ ನಿರ್ಮಿಸಲಾಗುತ್ತಿದ್ದು, ಸಂಶೋಧನೆ ಕಾರ್ಯಕ್ಕೂ ಉತ್ತೇಜನ ನೀಡುತ್ತಿದ್ದೇವೆ. ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದ ಜೊತೆ ಸೇರಿ ಭಾಷೆಯ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ’ ಎಂದರು.

‘ಗೋವಾದಲ್ಲಿ ಇತ್ತೀಚೆಗೆ ಕೊಂಕಣಿ ನಾಟಕಗಳು ಮತ್ತು ಸಿನಿಮಾಗಳು ಹೆಚ್ಚಾಗಿ ನಿರ್ಮಾಣವಾಗುತ್ತಿವೆ. ಅವುಗಳಿಗೆ ಇಲ್ಲಿನವರೂ ಉತ್ತೇಜನ ನೀಡಬೇಕು. ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಇದು ಸಹಕಾರಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಪಿ.ದಯಾನಂದ ಪೈ, ‘ಶಿಕ್ಷಣ, ಕಲೆ, ಸಾಹಿತ್ಯ, ಉದ್ದಿಮೆ, ಆರೋಗ್ಯ ಸೇವೆ, ಬ್ಯಾಂಕಿಂಗ್‌... ಹೀಗೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಬಹಳಷ್ಟು ದಿಗ್ಗಜರು ಕೊಂಕಣಿ ಸಮುದಾಯದವರು. ಯಹೂದಿಗಳನ್ನು ಬಿಟ್ಟರೆ ಕೊಂಕಣಿ ಸಮುದಾಯವೇ ಜಗತ್ತಿನಲ್ಲಿ ಅತ್ಯಂತ ಮುಂದುವರಿದುದು’ ಎಂದರು.
ಕೊಂಕಣಿ ಶ್ರೇಷ್ಠತಾ ಕೇಂದ್ರಕ್ಕೆ ದೇಣಿಗೆ ನೀಡಿದ ಸಿ.ಎ ನಂದಗೋಪಾಲ ಶೆಣೈ–ಉಷಾ ದಂಪತಿಯನ್ನು, ಪ್ರದರ್ಶನ ಮಂದಿರಕ್ಕೆ ದೇಣಿಗೆ ನೀಡಿದ ರಮೇಶ್ ನಾಯಕ್ –ಸುಚಿತ್ರಾ ದಂಪತಿಯನ್ನು, ವಾಸ್ತುಶಿಲ್ಪಿ ದಿನೇಶ್ ಶೇಟ್, ಗುತ್ತಿಗೆದಾರ ಸುಧೀರ್ ಶೆಣೈ, ಒಳಾಂಗಣ ವಿನ್ಯಾಸಕಾರ ಬಸ್ತಿ ಮಿಲಿಂದ್ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿಗಳಾದ ಉಲ್ಲಾಸ್ ಕಾಮತ್, ಮೈಕಲ್ ಡಿಸೋಜ ಇದ್ದರು.

ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ವಿದ್ಯಾರ್ಥಿ ವೇತನದ ಕಾರ್ಯದರ್ಶಿ ಪ್ರದೀಪ್ ಜಿ. ಪೈ ವಂದಿಸಿದರು. ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಕಿಣಿ ಪ್ರಾರ್ಥಿಸಿದರು.

**

‘ಗೋವಾ ಅಭಿವೃದ್ಧಿಗೆ ಕೈಜೋಡಿಸಿ’

‘ಪೋರ್ಚುಗೀಸರ ಕಾಲದಲ್ಲಿ ಮತಾಂತರದಿಂದ ತಪ್ಪಿಸಿಕೊಳ್ಳುವ ಸಂದಿಗ್ಧತೆಯಿಂದ ಕೊಂಕಣಿಗರ ಪೂರ್ವಜರು ಗೋವಾದಿಂದ ಕೇರಳ, ಕರ್ನಾಟಕದ ಕರಾವಳಿ ತೀರಕ್ಕೆ ವಲಸೆ ಕೈಗೊಳ್ಳಬೇಕಾಯಿತು. ನೆಲೆ ನಿಂತಲ್ಲೇ ಅವರು ಸಮಾಜದ ಉನ್ನತಿಗೆ ಶ್ರಮಿಸಿದ್ದಲ್ಲದೇ, ಕೊಂಕಣಿ ಭಾಷೆ, ಸಂಸ್ಕೃತಿಯನ್ನೂ ಉಳಿಸಿ ಬೆಳೆಸಿದ್ದಾರೆ. ಗೋವಾದಲ್ಲಿ ಉದ್ದಿಮೆ ಸ್ಥಾಪಿಸುವ ಮೂಲಕ ಕೊಂಕಣಿಗರು ತಮ್ಮ ಮೂಲನೆಲೆಯ ಅಭಿವೃದ್ಧಿಗೂ ಕೈಜೋಡಿಸಬೇಕು’ ಎಂದು ಸಾವಂತ್‌ ಮನವಿ ಮಾಡಿದರು.

**

‘ಗೋವಾದಲ್ಲಿ ವಿಶ್ವ ಕೊಂಕಣಿ ಸಮ್ಮೇಳನ’

‘ಕೊಂಕಣಿಯ ರಾಜಧಾನಿ ಗೋವಾ. ಅಲ್ಲಿ ವಿಶ್ವ ಕೊಂಕಣಿ ಸಮ್ಮೇಳನ ಏರ್ಪಡಿಸಲು ಇಲ್ಲಿನವರು ಮುಂದಾದರೆ, ನಮ್ಮ ಸರ್ಕಾರ ಪೂರ್ಣ ಸಹಕಾರ ನೀಡಲಿದೆ. ಕೊಂಕಣಿ ಸಂಸ್ಕೃತಿ, ಭಾಷೆ, ಕಲೆಗಳಿಗೂ ಇದರಿಂದ ಉತ್ತೇಜನ ಸಿಗಲಿದೆ’ ಎಂದು ಪ್ರಮೋದ್ ಸಾವಂತ್ ಹೇಳಿದರು.

**

ವಿಶ್ವಕೊಂಕಣಿ ಕೇಂದ್ರ ಒಂದು ದೇವಸ್ಥಾನದಂತೆ. ಇಲ್ಲಿ ಬಸ್ತಿ ವಾಮನ ಶೆಣೈ ಅವರ ಪ್ರತಿಮೆ ಸ್ಥಾಪನೆ ಮೂಲಕ ಈ ಕೇಂದ್ರಕ್ಕೆ ಮೂರ್ತಿಯೂ ಬಂದಿದೆ
ದಯಾನಂದ ಪೈ, ಉದ್ಯಮಿ

**

ಕೊಂಕಣಿ ಭಾಷೆಯ ಅಭಿವೃದ್ಧಿಗೆ ಕರ್ನಾಟಕದ ಸರ್ಕಾರಗಳೂ ಸಾಕಷ್ಟು ಬೆಂಬಲ ನೀಡಿವೆ. ಇದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ
ಪ್ರಮೋದ್‌ ಸಾವಂತ್‌, ಗೋವಾದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT