ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಫೆ. 23ರಿಂದ ಕೃಷಿ ಯಂತ್ರ ಮೇಳ

Last Updated 31 ಡಿಸೆಂಬರ್ 2018, 11:03 IST
ಅಕ್ಷರ ಗಾತ್ರ

ಪುತ್ತೂರು: ‘ಇಲ್ಲಿಯ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆಬ್ರುವರಿ 23ರಿಂದ 25ರವರೆಗೆ ಮೂರು ದಿನಗಳ ಕಾಲ ಬೃಹತ್ ಕೃಷಿ ಯಂತ್ರ ಮೇಳ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 3 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವೇಕಾನಂದ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕ್ಯಾಂಪ್ಕೊ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದೆ’ ಎಂದರು.

‘ವಿವೇಕಾನಂದ ಶಿಕ್ಷಣ ಸಂಸ್ಥೆಯು ಕಳೆದ ಒಂದು ದಶಕದಿಂದ ಕೃಷಿ ಯಂತ್ರ ಮೇಳ ನಡೆಸುತ್ತಿದ್ದು, ಇದು ಶಿಕ್ಷಣ ಸಂಸ್ಥೆಯೊಂದರ ಮೂಲಕ ನಡೆಸುವ ಅಪೂರ್ವ ಕೃಷಿ ಯಂತ್ರ ಮೇಳವಾಗಿ ದಾಖಲಾಗಿದೆ. 2009, 2012 ಮತ್ತು 2015ರಲ್ಲಿ ಯಶಸ್ವಿ ಮೇಳ ಇಲ್ಲಿ ನಡೆದಿದೆ. 2015ರ ಮೇಳದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು. ಈ ಬಾರಿ 3 ಲಕ್ಷದಷ್ಟು ಮಂದಿ ರೈತರು ಭಾಗವಹಿಸುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ರೈತರು ಭಾಗವಹಿಸುವರು’ ಎಂದರು.

‘ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ದಿನ ದಿನಕ್ಕೂ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದೆ. ಹೊಸ ಹೊಸ ಯಂತ್ರಗಳು ಮಾರುಕಟ್ಟೆಗೆ ಬರುತ್ತಿವೆ. ಸಾವಯವ ಪದ್ಧತಿ, ಮಾರುಕಟ್ಟೆ ವ್ಯವಸ್ಥೆಯಲ್ಲೂ ಬೆಳವಣಿಗೆಗಳಾಗುತ್ತಿವೆ. ಮೌಲ್ಯವರ್ಧಿತ ಉತ್ಪನ್ನಗಳಲ್ಲೂ ಕ್ರಾಂತಿಗಳಾಗುತ್ತಿವೆ. ಇದೆಲ್ಲ ನಮ್ಮ ಕೃಷಿಕರಿಗೆ ಒಂದೇ ಕಡೆ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ಮೇಳ ಏರ್ಪಡಿಸಲಾಗಿದೆ. ಕೃಷಿಕರು ಆವಿಷ್ಕರಿಸಿದ ಯಂತ್ರಗಳು, ಪ್ರಸಿದ್ಧ ಕಂಪನಿಗಳ ಯಂತ್ರಗಳು ಪ್ರದರ್ಶನಗೊಳ್ಳಲಿವೆ. ಜತೆಗೆ ಕೃಷಿ ಬಗ್ಗೆ ವಿಚಾರಗೋಷ್ಠಿಗಳೂ ನಡೆಯಲಿವೆ. ಹೈನುಗಾರಿಕೆಗೆ ವಿಶೇಷ ಮಹತ್ವ ನೀಡುವ ಉದ್ದೇಶದಿಂದ ಪಶುಪಾಲನೆಗೆ ಬಳಸುವ ನೂತನ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಪರಿಣತ ತಜ್ಞರಿಂದ ಮಾಹಿತಿಗಳನ್ನು ಒದಗಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ನೂರಾರು ಬಗೆಯ ಕೃಷಿಯಂತ್ರಗಳ ಪ್ರದರ್ಶನದ ಜತೆಗೆ ಈಬಾರಿ `ಕನಸಿನ ಮನೆ' ಎಂಬ ವಿಶೇಷ ಆಕರ್ಷಣೆಯ ಮಳಿಗೆಗಳೂ ಇರಲಿವೆ. ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್‌ ಅವರ ತಾಂತ್ರಿಕ ಸಹಯೋಗದೊಂದಿಗೆ ಈ ಪ್ರದರ್ಶನ ನಡೆಯಲಿದೆ. ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಉದ್ದೇಶ. ಸ್ಥಳೀಯವಾಗಿ ಸಿಗುವ ಪರಿಕರ ಬಳಸಿ ಕಡಿಮೆ ವೆಚ್ಚದಲ್ಲಿ ಸುಂದರ ಮನೆ ನಿರ್ಮಿಸುವ, ಹೊಸ ವಿನ್ಯಾಸ ರೂಪಿಸುವ ಬಗ್ಗೆ ಅರಿವು ಮೂಡಿಸಲಾಗುವುದು’ ಎಂದರು. ‌

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ರಾವ್, ಕೃಷಿಯಂತ್ರ ಮೇಳದ ಸಂಯೋಜಕ ವಿವೇಕ್ ರಂಜನ್ ಭಂಡಾರಿ, ಉಪನ್ಯಾಸಕ ಹರಿಪ್ರಸಾದ್, ಕ್ಯಾಂಪ್ಕೊ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಮಚಂದ್ರ ಕಾಮತ್, ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಸಂಚಾಲಕ ಮಹದೇವ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT