ಗುರುವಾರ , ಡಿಸೆಂಬರ್ 12, 2019
27 °C
’ಕ್ಷೇಮಾ’ದಲ್ಲಿ ನಡೆದ ವಿಶೇಷ ಮಕ್ಕಳ ದಿನಾಚರಣೆಯಲ್ಲಿ ಡಾ.ಸತೀಶ್ ಭಂಡಾರಿ

ವಿಶೇಷ ಮಕ್ಕಳ ಪೋಷಕರಿಗೆ ಕೌನ್ಸೆಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯ ಒಂದು ದಿನಕ್ಕೆ ಕಾರ್ಯಕ್ರಮ ಸೀಮಿತಗೊಳಿಸದೆ ವರ್ಷವಿಡೀ ವಿಶೇಷ ಮಕ್ಕಳ ಸೇವೆ ಮಾಡುತ್ತಿದೆ, ಮುಂದಿನ‌ ದಿನಗಳಲ್ಲಿ ‌ಮಕ್ಕಳ ಪೋಷಕರಿಗೆ ಕೌನ್ಸೆಲಿಂಗ್ ನಡೆಸುವ ಯೋಜನೆ ಹೊಂದಲಾಗಿದೆ’ ಎಂದು  ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ತಿಳಿಸಿದರು.

ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಕ್ಷೇಮಾ) ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ವಿಶೇಷ  ಮಕ್ಕಳ ದಿನ 'ಆಸರೆ-2019' ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಚೇರಿ ಮತ್ತು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ನಿಟ್ಟೆ ಡೀಮ್ಡ್ ವಿವಿ ಅಂಗಸಂಸ್ಥೆ ದೇರಳಕಟ್ಟೆಯ ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಲಿನ ಸಹಯೋಗದಲ್ಲಿ  ಆಯೋಜಿಸಲಾಗಿತ್ತು.

‘ಪರಿಕರಗಳನ್ನು ಕೊಡುವುದರೊಂದಿಗೆ, ಮಕ್ಕಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ವಿಶೇಷ  ಮಕ್ಕಳನ್ನು ಪೋಷಿಸುವ ಮೂಲಕ ಪೋಷಕರು ದೇವರ ಸೇವೆ ಮಾಡುತ್ತಿದ್ದಾರೆ. ಇವರಿಗೆ ಇನ್ನಷ್ಟು ಶಕ್ತಿ ತುಂಬುವ‌ ಕೆಲಸ ಆಗಬೇಕಿದೆ’ ಎಂದು ಹೇಳಿದರು. ‌

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ‘ ಧಾರ್ಮಿಕ ಕೇಂದ್ರಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ವಿಶೇಷಮಕ್ಕಳ ಸೇವೆ ಮಾಡುವುದು ಶ್ರೇಷ್ಠ.‌ ಅಂಗವೈಕಲ್ಯ ಶಾಪವಲ್ಲ, ವರ. ಪೋಷಕರು ಪ್ರೋತ್ಸಾಹ ನೀಡಿದರೆ ಸಾಧನೆ ಕಷ್ಟವಲ್ಲ’ ಎಂದರು.‌ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ‘ ವಿಶೇಷ ಮಕ್ಕಳು ಛಲದಿಂದ ಮುನ್ನಡೆದರೆ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ, ಪೋಷಕರು ಅಂಜದೆ ಧೈರ್ಯ ತುಂಬುವುದು ಮುಖ್ಯ’ ಎಂದು ಕಿವಿಮಾತು‌ ಹೇಳಿದರು. ಸಂಗೀತ ಶಿಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು. ‌ 12 ವಿಶೇಷ ಮಕ್ಕಳಿಗೆ ಪರಿಕರಗಳನ್ನು ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ‌ ಎಸ್.ಆರ್.ಲೋಕೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್., ವೈಸ್ ಡೀನ್ ಡಾ.ಪಿ.ಎಸ್.ಪ್ರಕಾಶ್, ಡಾ.ಅಮೃತ್ ಮಿರಾಜ್ಕರ್, ಕ್ಷೇಮಾ ವೈದ್ಯಕೀಯ ಅಧೀಕ್ಷಕ‌ ಡಾ.ಮೇಜರ್ ಶಿವಕುಮಾರ್ ಹಿರೇಮಠ್, ಎಂಸಿಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರಾವ್, ಕೃತಕ ಕಾಲು ಹೊಂದಿ‌ರುವ ಎಸ್ಸೆಸ್ಸೆಎಲ್ಸಿ ವಿದ್ಯಾರ್ಥಿನಿ ಪೂಜಾ ಹಾವೇರಿ ಮುಖ್ಯ ಅತಿಥಿಗಳಾಗಿದ್ದರು.

‌ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ‌ ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ಸ್ವಾಗತಿಸಿದರು. ‌ಡಾ.ಅಮರಶ್ರೀ ಶೆಟ್ಟಿ ವರದಿ ವಾಚಿಸಿದರು. ಡಾ.ಅಮಿತಾ ಹೆಗ್ಡೆ‌ ಸನ್ಮಾನ ಪತ್ರ ವಾಚಿಸಿದರು. ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಿಶೋರಿ ಕಾರ್ಯಕ್ರಮ ನಿರೂಪಿಸಿದರು.

 

 

ಪ್ರತಿಕ್ರಿಯಿಸಿ (+)