ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜತ ಪೀಠದಲ್ಲಿ ವಿರಾಜಮಾನಳಾಗಿ ಸಾಗಿ ಬಂದ ಶಾರದೆ

ಬೆಳಕಿನ ರಂಗವಲ್ಲಿಯ ನಡುವೆ ಕಂಗೊಳಿಸಿದ ನವದುರ್ಗೆಯರು
Last Updated 6 ಅಕ್ಟೋಬರ್ 2022, 5:29 IST
ಅಕ್ಷರ ಗಾತ್ರ

ಮಂಗಳೂರು: ಹಸಿರು ಝರಿ ಸೀರೆ ತೊಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು, ಮೈತುಂಬಾ ಚಿನ್ನಾಭರಣಗಳನ್ನು ಧರಿಸಿ, ಕರದಲ್ಲಿ ಬೆಳ್ಳಿಯ ವೀಣೆಯ ಹಿಡಿದು, ರಜತಪೀಠದಲ್ಲಿ ವಿರಾಜಮಾನಳಾದ ಶಾರದಾ ಮೂರ್ತಿಯು ನಗರದ ಬೀದಿಗಳಲ್ಲಿ ಸಾಗಿ ಬಂದ ದೃಶ್ಯ ಕಂಡು ಭಕ್ತರು ಪುನೀತರಾದರು.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದಾಗಿ ದಸರಾ ಶೋಭಾಯಾತ್ರೆ ನಡೆದಿರಲಿಲ್ಲ. ಈ ಸಲ ಮಂಗಳೂರು ದಸರಾ ಮತ್ತೆ ಗತವೈಭವವನ್ನು ಮರಳಿ ಪಡೆಯಿತು.

ವಿಸರ್ಜನಾ ಪೂಜೆ ಸಂಪನ್ನಗೊಳ್ಳುತ್ತಿದ್ದಂತೆಯೇ ವಿಶೇಷ ಕಳೆಯನ್ನು ಮೈವೆತ್ತಂತಿದ್ದ ಶಾರದೆಯ ಮೂರ್ತಿ ಮಂಗಳ ವಾದ್ಯಗಳೊಂದಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬುಧವಾರ ಇಳಿಸಂಜೆ ಹೊತ್ತಿನಲ್ಲಿ ಹೊರಟು ಬಂದಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಸರ್ವಾಲಂಕಾರಭೂಷಿತೆಯಾಗಿ ಕಂಗೊಳಿಸುತ್ತಿದ್ದ ವೀಣಾಪಾಣಿ ಶಾರದೆಯ ಮೂರ್ತಿಯನ್ನು ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆಂಬ ಬಯಕೆ ಭಕ್ತರ ಮೊಗಗಳಲ್ಲಿ ಎದ್ದು ಕಾಣುತ್ತಿತ್ತು.

ಶಾರದಾ ಮೂರ್ತಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳುವ ತವಕದಿಂದ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಗಂಟೆಗಟ್ಟಲೆ ಕಾದು ಕುಳಿತ್ತಿದ್ದರು. ತಮ್ಮ ಕಣ್ಣೆದುರೇಮಹಾಗಣಪತಿ, ಬ್ರಹ್ಮಶ್ರೀ ನಾರಾಯಣಗುರು, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶಾರದಾಮೂರ್ತಿಗಳು ಸಾಲು ಸಾಲಾಗಿ ಸಾಗಿಬಂದಂತೆ ಭಕ್ತರ ಸಡಗರಕ್ಕೆ ಪಾರವೇ ಇರಲಿಲ್ಲ. ಬೆಳಕಿನ ರಂಗವಲ್ಲಿಯಿಂದ ಕಂಗೊಳಿಸುತ್ತಿದ್ದ ಬೀದಿಗಳಲ್ಲಿ ಝಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕೃತವಾದ ವಾಹನದಲ್ಲಿ ನವದುರ್ಗೆ ಹಾಗೂ ಶಾರದಾ ಮೂರ್ತಿಗಳು ಸಾಗುತ್ತಿದ್ದ ದೃಶ್ಯ ದೇವಲೋಕವೇ ಧರೆಗಿಳಿದ ಭಾವವನ್ನು ಮೂಡಿಸುವಂತಿತ್ತು. ಈ ಮನಮೋಹಕ ದೃಶ್ಯಗಳನ್ನು ಭಕ್ತರು ತಮ್ಮ ಕಂಗಳಲ್ಲಿ ಅಷ್ಟೇ ಅಲ್ಲ, ಮೊಬೈಲ್‌ನಲ್ಲೂ ಚಿತ್ರೀಕರಿಸಿಕೊಂಡರು.

ಮಂಗಳೂರು ದಸರಾವೆಂದರೆ ಹುಲಿವೇಷಗಳ ದರ್ಬಾರು. ಈ ಬಾರಿ ಹುಲಿವೇಷಗಳನ್ನು ತಾಸೆಯ ಪೆಟ್ಟು, ಹುಲಿಗಳ ಕಸರತ್ತಿನ ಪಟ್ಟುಗಳು ಪ್ರೇಕ್ಷಕರು ಮೈನವಿರೇಳುವಂತೆ ಮಾಡಿತ್ತು. ಈ ಬಾರಿ ಹುಲಿವೇಷಗಳ 26 ಟ್ರಕ್‌ಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದವು.

ಚಂಡೆ ವಾದನ, ರಂಗು ರಂಗಿನ100ಕ್ಕೂ ಅಧಿಕ ಕೊಡೆಗಳು, ಭಜನಾ ತಂಡಗಳು, ಬ್ಯಾಂಡ್‌ವಾದನ, ನಾಗಸ್ವರವಾದನ ತಂಡಗಳು, ಶೋಭಾಯಾತ್ರೆ ಕಳೆಗಟ್ಟುವಂತೆ ಮಾಡಿದವು.ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ನವದುರ್ಗೆಯರ ಮೂರ್ತಿಗಳನ್ನ ವೀಕ್ಷಿಸಲು ರಸ್ತೆಗಳ ಇಕ್ಕಲಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು.

ಈ ಸಲದ ದಸರಾ ಪ್ರಯುಕ್ತ ಭಕ್ತರೊಬ್ಬರು (₹ 7 ಲಕ್ಷ ವೆಚ್ಚ) ಬೆಳ್ಳಿ ವೀಣೆಯನ್ನು ಶಾರದಾ ಮೂರ್ತಿಗೆ ಸಮರ್ಪಿಸಿದ್ದರು. ಗೋಕರ್ಣನಾಥ ಸೇವಾದಳದವರು ಬೆಳ್ಳಿ ಪೀಠವನ್ನು (₹ 13 ಲಕ್ಷ ವೆಚ್ಚ) ಅರ್ಪಿಸಿದ್ದರು.

ಆರೇ ಜನಪದ ತಂಡ

ಈ ಬಾರಿಯ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 20ಕ್ಕೂ ಅಧಿಕ ಜನಪದ ತಂಡಗಳು ಭಾಗವಹಿಸಲಿವೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದು ಆರು ಜನಪದ ತಂಡಗಳು ಮಾತ್ರ. ನಂದಿಧ್ವಜ, ಕರಡಿಮಜಲು, ಹಲಗಿ ಮಜಲು, ಕಂಸಾಳೆ, ಹಗಲುವೇಷ, ಡೊಳ್ಳುಕುಣಿತ ಹಾಗೂ ಸೋಮನ ಕುಣಿತ ತಂಡಗಳು ಶೋಭಾಯಾತ್ರೆಯಲ್ಲಿ ಕಾಣಿಸಿಕೊಂಡವು.

ಶಿವಗಿರಿ ತೀರ್ಥಾಟನೆ ಅರಿವಿನ ನಡಿಗೆ

ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆಯು ಈ ಬಾರಿಯ ಶೋಭಾಯಾತ್ರೆಯ ವಿಶೇಷವಾಗಿತ್ತು. ನಾರಾಯಣಗುರುಗಳ ಸರ್ವ ಸಮಾನತೆಯ ಜ್ಞಾನದ ಸಂಕೇತವಾದ ಹಳದಿ ಉಡುಗೆ ತೊಟ್ಟು, ಹಳದಿ ಬಣ್ಣದ ಧ್ವಜವನ್ನು ಹಿಡಿದು ಗುರು ನಾಮಸ್ಮರಣೆಯೊಂದಿಗೆ ಭಕ್ತಿಭಾವದಿಂದ ಭಕ್ತರು ಅರಿವಿನ ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಯುವವಾಹಿನಿಯ ಮಂಗಳೂರು ಘಟಕದ ಸಾರಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ವಿವಿಧ ಘಟಕಗಳು, ನಾರಾಯಣ ಗುರುಸಂಘಗಳ ಸದಸ್ಯರು ಇದರ ನೇತೃತ್ವ ವಹಿಸಿದ್ದರು.

ಚಿಕಿತ್ಸೆಗೆ ನೆರವಾಗಲು ವಿಚಿತ್ರ ವೇಷ

ಬೊಂಡಂತಿಲದ ನಮೋ ಸೇವಾ ಪ್ರತಿಷ್ಠಾನದವರು ಯಶ್ವಿ ಹಾಗೂ ಚೇತನಾ ಎಂಬ ಇಬ್ಬರು ಬಾಲಕಿಯರ ಶಸ್ತ್ರಚಿಕಿತ್ಸೆಗ ದೇಣಿಗೆ ಸಂಗ್ರಹಿಸಲು ವಿಚಿತ್ರ ವೇಷಗಳನ್ನು ಧರಿಸಿದ್ದರು. ಜನರ ನಡುವೆಯೇ ಅಲೆದಾಡುತ್ತಿದ್ದ ಈ ವೇಷಧಾರಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT