ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

ಪುತ್ತೂರು ಮಹಾಲಿಂಗೇಶ್ವರ ದೇವಳ, ಕದ್ರಿಯಲ್ಲಿ ಹಣತೆಯ ಹಬ್ಬ ಆಚರಿಸಿದ ಭಕ್ತರು
Last Updated 5 ಡಿಸೆಂಬರ್ 2021, 6:46 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿ, ಸಡಗರದಿಂದ ಲಕ್ಷ ದೀಪೋತ್ಸವ ಶುಕ್ರವಾರ ರಾತ್ರಿ ನೆರವೇರಿತು.

ಪಂಚ ಶಿಖರ ಒಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ಮೊದಲಿಗೆ ಕಾಚುಕುಜುಂಬ ದೈವವು ದೇವರ ಭೇಟಿಯಾಗಿ ನುಡಿಗಟ್ಟು ನುಡಿಯಿತು. ಬಳಿಕ ದೇವರ ಉತ್ಸವ ನಡೆಯಿತು.

ರಥಬೀದಿಯಿಂದ ಕಾಶಿಕಟ್ಟೆವರೆಗೆ ಲಕ್ಷ ಹಣತೆ ದೀಪಗಳನ್ನು ಬೆಳಗಿಸಲಾಗಿತ್ತು. ದೀಪಗಳ ನಡುವೆ ದೇವರ ಉತ್ಸವ ಹಾಗೂ ಲಕ್ಷ ದೀಪೋತ್ಸವ ರಥೋತ್ಸವ ನೆರವೇರಿತು.

ಸಂಘ ಸಂಸ್ಥೆ, ಭಕ್ತರಿಂದ ಭಜನೆ ಹಾಗೂ ಕುಣಿತ ಭಜನೆ ನಡೆಯಿತು. ಕಾಶಿಕಟ್ಟೆವರೆಗೆ ರಥೋತ್ಸವ ನೆರವೇರಿತು. ಈ ವೇಳೆ ಸವಾರಿ ಮಂಟಪದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮ ದೈವದರ್ಶನ ಮತ್ತು ನರ್ತನ ಸೇವೆ ಜರುಗಿತು. ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಬಂದ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ದೇವರ ಗುರ್ಜಿ ಪೂಜೋತ್ಸವ ನೆರವೇರಿತು.

ಚಂದ್ರಮಂಡಲ ರಥೋತ್ಸವ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ನಡೆಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯನ್ನು ಸ್ವಯಂ ಸ್ಫೂರ್ತಿಯಿಂದ ಭಕ್ತರು ಲಕ್ಷ ದೀಪೋತ್ಸವ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವವರೆಗೆ ನೆರವೇರಿಸುತ್ತಾರೆ.

ಉರುಳು ಸೇವೆ ನೆರವೇರಿಸಲು ಈಗಾಗಲೇ ದೇವಳದ ವತಿಯಿಂದ ಪೂರ್ವ ಸಿದ್ಧತಾ ಕಾರ್ಯಗಳನ್ನು ನಡೆಸಲಾಗಿದೆ. ಸೇವೆ ನಡೆಸುವವರಿಗೆ ಮುಖ್ಯ ಸೂಚನೆ ದೇವಳದ ವತಿಯಿಂದ ನೀಡಲಾಗಿದೆ.

ಭಜನೋತ್ಸವ ಸಂಪನ್ನ

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷ್ಠಿ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಖಂಡ ಭಜನೋತ್ಸವ
ನಡೆಯಿತು.

ಕಲಾವಿದ ಕೆ.ಯಜ್ಞೇಶ್ ಆಚಾರ್ ಭಕ್ತಿ ಸಂಗೀತದ ಮೂಲಕ ದಾಸರ ಪದಗಳ ಗಾಯನ ನೆರವೇರಿಸಿ ಅಂತಿಮವಾಗಿ ಭಜನೋತ್ಸವಕ್ಕೆ ಮಂಗಳ ಹಾಡಿದರು. ಬಳಿಕ ದೇವಳದ ನಿವೃತ್ತ ಶಿಷ್ಟಾಚಾರ ಅಧಿಕಾರಿ ಎ.ವೆಂಕಟ್‌ರಾಜ್ ಮಂಗಳಾರತಿ ಮಾಡಿದರು. ನಿರಂತರವಾಗಿ ನಡೆದ ಭಜನೆಯಲ್ಲಿ ಸುಮಾರು 24 ತಂಡಗಳು ಭಜನಾ ಕಾರ್ಯಕ್ರಮ ನೆರವೇರಿಸಿತು. ಭಜನೆ ನೆರವೇರಿಸಿದ ತಂಡಗಳ ಎಲ್ಲಾ ಸದಸ್ಯರಿಗೆ ದೇವಳದಿಂದ ಸನ್ಮಾನಿಸಲಾಯಿತು.

ಭಜನೆಯಲ್ಲಿ ಶ್ರೀವಲ್ಲಿ ಮಹಿಳಾ ಭಜನಾ ಮಂಡಳಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ವೃಂದ ಹಾಗೂ ಸ್ಥಳಿಯರು ಪಾಲ್ಗೊಂಡಿದ್ದರು.

ಕುಕ್ಕೆ: ಹಸಿರು ಕಾಣಿಕೆ ಅರ್ಪಣೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ದೇವಳದ ಎಸ್ಎಸ್‌ಪಿಯು ಕಾಲೇಜಿನಿಂದ ಹಸಿರು ಕಾಣಿಕೆ ಶನಿವಾರ ದೇವಳಕ್ಕೆ ನೀಡಲಾಯಿತು.

ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಒದಗಿಸಿದ ವಸ್ತುಗಳನ್ನು ಮತ್ತು ಕಾಲೇಜಿನಲ್ಲಿ ಬೆಳೆದ ಫಲವನ್ನು ಸಿಂಗರಿಸಿದ ವಾಹನದಲ್ಲಿ ದೇವಳಕ್ಕೆ ಕೊಂಡೊಯ್ಯಲಾಯಿತು. ಸೋನಾ ಮಸೂರಿ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಸಕ್ಕರೆ, ಸೀಯಾಳ, ಅಡಿಕೆ, ಬಾಳೆಗೊನೆ, ಬಾಳೆ ಎಲೆ, ಹಿಂಗಾರ, ಕುಂಬಳಕಾಯಿ ಸೇರಿದಂತೆ ಸುಮಾರು 600 ಕೆ.ಜಿ ಹಸಿರು ಕಾಣಿಕೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಉಪ ಪ್ರಾಂಶುಪಾಲೆ ಜಯಶ್ರೀ.ವಿ.ದಂಬೆಕೋಡಿ, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಹಿರಿಯ ಶಿಕ್ಷಕ ಎಂ.ಕೃಷ್ಣ ಭಟ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಇದ್ದರು.

ಪುತ್ತೂರಿನಲ್ಲಿ ಲಕ್ಷ ದೀಪೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಇಲ್ಲಿನ ಮಹಾಲಿಂಗೇಶ್ವರ ದೇವಳದಲ್ಲಿ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕುಂಟಾರು ಶ್ರೀಧರ್ ತಂತ್ರಿ ಅವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರ ವೈದಿಕತ್ವದಲ್ಲಿ ಶುಕ್ರವಾರ ಸಂಜೆ ದೇವರ ವಿಶೇಷ ಉತ್ಸವದೊಂದಿಗೆ ಆರಂಭಗೊಂಡಿತು. ದೇವಳದ ಒಳಗಾಂಗಣ, ಹೊರಾಂಗಣ, ರಥಬೀದಿಯಲ್ಲಿ ಸಾವಿರಾರು ಮಂದಿ ಭಕ್ತರು ಹಣತೆ ಬೆಳಗಿಸಿ ದೀಪೋತ್ಸವದಲ್ಲಿ ಸಂಭ್ರಮಿಸಿದರು.

ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ ಅವರ ನೇತೃತ್ವದಲ್ಲಿ ಶೋಭಾ, ಸುಪ್ರಿಯಾ, ಪವಿತ್ರಾ, ಯಮುನಾ, ಪುಷ್ಪಾ, ಸಹನಾ ಮತ್ತು ಬಳಗದವರಿಂದ ರಥಬೀದಿಯಲ್ಲಿ ರಂಗೋಲಿ ಬಿಡಿಸಲಾಗಿತ್ತು. ಅದರ ಮಧ್ಯೆ ಹಣತೆಯ ಬೆಳಕು ನೋಡಲು ಆಕರ್ಷಣೀಯವಾಗಿತ್ತು. ದೇವಳದ ಒಳಾಂಗಣದ ಗೋಪುರದಲ್ಲಿ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಿತು.

ಸಂಜೆ ದೀವಟಿಕೆ ಸಲಾಂ ಆದ ಬಳಿಕ ಶ್ರೀಧರ್ ತಂತ್ರಿ ಅವರು ಗರ್ಭಗುಡಿಯ ಭದ್ರ ದೀಪದಿಂದ ಏಕಾರತಿ ಮೂಲಕ ದೇವಳದ ರಥ ಬೀದಿಯಲ್ಲಿರುವ ಹಣತೆಗೆ ದೀಪ ಪ್ರಜ್ವಲಿಸಿದರು. ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮ್ದಾಸ್ ಗೌಡ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ರಾತ್ರಿ ಮಹಾಪೂಜೆಬಳಿಕ ದೇವರ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಿತು. ತೆಪ್ರೋತ್ಸವದ ವೇಳೆ ಕೆರೆಯ ಸುತ್ತಲೂ ಹಣತೆ ದೀಪ ಬೆಳಗಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರ ರೈ ಬಳ್ಳಮಜಲು, ಶೇಖರ್ ನಾರಾವಿ, ವೀಣಾ ಬಿ.ಕೆ., ಡಾ. ಸುಧಾ ಎಸ್. ರಾವ್, ಐತ್ತಪ್ಪ ನಾಯ್ಕ್, ಎನ್.ಕೆ.ಜಗನ್ನಿವಾಸ ರಾವ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡರು.

ಕಲ್ಕೂರ ಪ್ರತಿಷ್ಠಾನದಿಂದ ಭಜನೆ

ಮಂಗಳೂರು: ಶ್ರೀಕ್ಷೇತ್ರ ಕದ್ರಿಯಲ್ಲಿ ಶುಕ್ರವಾರ ಲಕ್ಷ ದೀಪೋತ್ಸವದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಂಜೆ 5 ರಿಂದ ಸಂಕೀರ್ತನೆ ಕಾರ್ಯಕ್ರಮ ಜರುಗಿತು.

ಭಜನಾ ಕಾರ್ಯಕ್ರಮದಲ್ಲಿ ವೇ. ಮೂ. ವಿಠಲದಾಸ ತಂತ್ರಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಶಾಸಕ ವೇದವ್ಯಾಸ ಕಾಮತ್‍, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ವೇದಮೂರ್ತಿ ಡಾ. ಪ್ರಭಾಕರ ಅಡಿಗ, ವೇದಮೂರ್ತಿ ರಾಘವೇಂದ್ರ ಅಡಿಗರು, ಕ್ಷೇತ್ರ ಟ್ರಸ್ಟಿಗಳಾದ ದೇವದಾಸ್ ಕುಮಾರ್, ಕುಸುಮಾ ದೇವಾಡಿಗ, ನಿವೇದಿತಾ ಶೆಟ್ಟಿ, ರಾಜೇಶ್ ಕೆ., ಮನೋಹರ್ ಸುವರ್ಣ, ನಾರಾಯಣ ಕೋಟ್ಯಾನ್, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಂ., ಸ್ಥಳೀಯ ಕಾರ್ಪೋರೇಟರ್ ಮನೋಹರ್ ಶೆಟ್ಟಿ, ಅರುಣ್ ಕದ್ರಿ, ರಾಮ ಕೃಷ್ಣರಾವ್, ಸುಧಾಕರರಾವ್ ಪೇಜಾವರ ಇದ್ದರು.

ಕುಂಜಾರುಗಿರಿ ಗಿರಿಬಳಗ, ಮದ್ಧರಿ ನಾಮ ಸಂಕೀರ್ತನಾ ಬಳಗ ಕಳವಾರು, ಬಾಳ, ಶಿವಳ್ಳಿ ಸ್ಪಂದನಾ ಭಜನಾ ತಂಡಗಳು, ಸಮತಾ ಮಹಿಳಾ ಬಳಗ, ಸುಬ್ರಹ್ಮಣ್ಯ ಸಭಾ, ಕೂಟ ಮಹಾ ಜಗತ್ತು, ವಿಪ್ರ ಭಜನಾ ಸಂಕೀರ್ತನ ಬಳಗ ಕದ್ರಿ ತಂಡಗಳ ಸದಸ್ಯರು ಸಂಕೀರ್ತನದಲ್ಲಿ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT