ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ತೇರಿನ ಉತ್ಸವ

ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂಭ್ರಮ
Last Updated 6 ಡಿಸೆಂಬರ್ 2021, 16:30 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹೂವಿನ ತೇರಿನ ಉತ್ಸವ ನಡೆಯಲಿದೆ.

ದೇವರ ಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಲ್ಲಕಿ ಉತ್ಸವಗಳು ನಡೆಯಲಿವೆ. ಇದಕ್ಕೂ ಮುನ್ನ ಉತ್ತರಾದಿ ಮಠದಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯಲಿದೆ. ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಬಂದು, ಅಲ್ಲಿ ಸೋದರರ ಸಮಾಗಮ ನಡೆಯಲಿದೆ. ಕಾಶಿಕಟ್ಟೆಯಲ್ಲಿ ರಂಗಪೂಜೆ ನಡೆಯಲಿದೆ. ವಾಸುಕಿ ಕಟ್ಟೆಯಲ್ಲಿ, ಶಿವರಾತ್ರಿ ಕಟ್ಟೆಯಲ್ಲಿ, ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿವೆ.

ಸೋಮವಾರ ದೇವರ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾದವು. ಬಂಡಿ ಉತ್ಸವ, ಪಲ್ಲಕ್ಕಿ ಉತ್ಸವ ನೆರವೇರಿತು. ಮಯೂರ ವಾಹನೋತ್ಸವ ನಡೆಯಿತು. ಸವಾರಿ ಮಂಟಪದಲ್ಲಿರುವ ಸವಾರಿ ಕಟ್ಟೆಯಲ್ಲಿ ದೇವರ ಕಟ್ಟೆಪೂಜೆ ನೆರವೇರಿತು. ಜಾತ್ರಾ ಮಹೋತ್ಸವದ ಭದ್ರತೆಯ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಾದ್ಯಂತ ಸಿಸಿ ಟಿವಿ ಕಣ್ಗಾವಲು ಹಾಕಲಾಗಿದೆ. ಹೆಲಿಪ್ಯಾಡ್, ಪದವಿಪೂರ್ವ ಕಾಲೇಜಿನ ಮೇಲಿನ ಕ್ರೀಡಾಂಗಣ, ಪೋಲೀಸ್ ಕವಾಯತು ಮೈದಾನ, ಕೆ.ಎಸ್.ಎಸ್.ಕಾಲೇಜು ಕ್ರೀಡಾಂಗಣ, ವಲ್ಲೀಶ ಸಭಾಭವನದ ಬಳಿಯ ನಿಲ್ದಾಣ, ಬಿಲದ್ವಾರ, ಸವಾರಿ ಮಂಟಪ, ಹನುಮಂತ ಗುಡಿ, ಹಳೆಯ ಅರಣ್ಯಾಧಿಕಾರಿ ಕಚೇರಿ, ಪ್ರಾಥಮಿಕ ಶಾಲೆ ಸಮೀಪದ ಬಸ್ ನಿಲ್ದಾಣ ಸೇರಿದಂತೆ ವಾಹನ ನಿಲುಗಡೆ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಜಾತ್ರೋತ್ಸವದ ಅಂಗವಾಗಿ ಕ್ಷೇತ್ರವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ದೇವಳದ ಗೋಪುರ, ಆದಿಸುಬ್ರಹ್ಮಣ್ಯ, ಕಾಶಿಕಟ್ಟೆ, ಬಿಲದ್ವಾರ, ಕುಮಾರಧಾರ ದ್ವಾರ, ಸವಾರಿ ಮಂಟಪದ ವೃತ್ತಗಳು ವಿದ್ಯುತ್ ವರ್ಣ ವೈಭವದಲ್ಲಿ ಕಂಗೊಳಿಸುತ್ತಿವೆ. ಅಲ್ಲಲ್ಲಿ ಪ್ರಭಾವಳಿಗಳು ಮತ್ತು ದೇವತೆಗಳ ಭಾವಚಿತ್ರದ ಬೃಹತ್ ಕಟೌಟ್‌ಗಳು ಜಾತ್ರೆಗೆ ವಿಶೇಷ ಮೆರುಗು ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT