ಶನಿವಾರ, ಡಿಸೆಂಬರ್ 14, 2019
21 °C
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೋತ್ಸವ

ಕುಕ್ಕೆ ಸುಬ್ರಹ್ಮಣ್ಯ: ನೂತನ ರಥದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಚಂಪಾಷಷ್ಠಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. 400 ವರ್ಷಗಳ ಬಳಿಕ ನೂತನ ಬ್ರಹ್ಮರಥದಲ್ಲಿ ದೇವರಮೂರ್ತಿಯ ಉತ್ಸವ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ  ಸೀತಾರಾಮ ಎಡಪಡಿತ್ತಾಯರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಭಕ್ತರು ದೇವರ ಮಹಾರಥವನ್ನು ಎಳೆದರು. ಪುರಾತನ ರಥವನ್ನೇ ಹೋಲುವ ನೂತನ ಬ್ರಹ್ಮರಥವು ರಾಜಗಾಂಭೀರ್ಯದಿಂದ ರಥಬೀದಿಯಲ್ಲಿ ಮುನ್ನಡೆಯಿತು. 

ರಥೋತ್ಸವದ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಲ್ಲಕಿ ಉತ್ಸವ ನೆರವೇರಿತು. ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಿಗ್ಗೆ  ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ಬಳಿಕ ಮಹಾ ಮಂಗಳಾರತಿ ನೆರವೇರಿತು.

ದೇಗುಲದ ಪ್ರಧಾನ ಅರ್ಚಕರು ದೇವರಿಗೆ ಸುವರ್ಣವೃಷ್ಟಿ ಮಾಡಿದರು. ಭಕ್ತರು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ಬಳಿಕ ಭಕ್ತ ಜನರ ಜಯಘೋಷಗಳ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.

ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷಪೂಜೆ ನೆರವೇರಿತು. ಬ್ರಹ್ಮರಥೋತ್ಸವ ನೆರವೇರಿಸಿ ಬಂದ ಸ್ವಾಮಿಯ ಪಲ್ಲಕಿಗೆ ನಿವಾಳಿ ಸಮರ್ಪಿಸಲಾಯಿತು. ಬಳಿಕ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕರು ಮೂಲಪ್ರಸಾದ ವಿತರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಸಹಾಯಕ ಕಮೀಷನರ್‌ ಯತೀಶ್ ಉಲ್ಲಾಳ್, ಹೈಕೋರ್ಟ್‌ ನ್ಯಾಯಮೂರ್ತಿ ಸತ್ಯನಾರಾಯಣ, ರಥ ದಾನಿ ಅಜಿತ್ ಶೆಟ್ಟಿ, ಡಾ. ಸಪ್ನಾ ಅಜಿತ್ ಶೆಟ್ಟಿ, ರಿಕ್ಕಿ ರೈ, ಸಹೋದರಿ ವಿಜಯ ಎಂ. ಶೆಟ್ಟಿ ಸಹೋದರರಾದ ಚೆನ್ನಪ್ಪ ರೈ, ಕರುಣಾಕರ ರೈ, ಸಂಜೀವ ಶೆಟ್ಟಿ, ಲೀಲಾ ಎಸ್ ಶೆಟ್ಟಿ ದಂಪತಿ, ಚಂದ್ರಹಾಸ ಶೆಟ್ಟಿ, ಪ್ರಕಾಶ್ ರೈ, ಸಹಾಯಕ ಕಾರ್ಯನಿವಾರ್ಹಣಾಧಿಕಾರಿ ಚಂದ್ರಶೇಖರ ಪೆರಾಲ್, ದೇಗುಲದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ಭಾನುವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು. ಪಂಚಮಿ ದಿನ ರಾತ್ರಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ದೇವಸ್ಥಾನಕ್ಕೆ ಆಗಮಿಸಿದ ಜಾತ್ರೆ ಸಿದ್ಧತೆಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)